ಚಿಕ್ಕಮಗಳೂರು: ವಿಶ್ವದಾದ್ಯಂತ ಕೊರೋನಾ ಸೋಂಕು ಅನಿರೀಕ್ಷಿತವಾಗಿ ಹರಡುವ ಮೂಲಕ ಮನುಕುಲದ ಮೇಲೆ ಅಘಾದ ಪರಿಣಾಮ ಬೀರಿದ್ದು ದೇಶ ಗೆಲ್ಲಬೇಕು ಜನತೆ ಉಳಿಯಬೇಕು ಎಂದಾದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದೇ ಸರಿಯಾದ ಮಾರ್ಗ ಎಂದು ಪ್ರವಾಸೋದ್ಯಮ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಯುವಸಬಲೀಕರಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ ರವಿ ಹೇಳಿದರು.
ಇಂದು ನಗರದ ಕಲ್ಯಾಣನಗರದ ಆಶ್ರಯ ಬಡಾವಣೆಯಲ್ಲಿನ 250 ಬಡ ಕುಟುಂಬಗಳಿಗೆ ಉಚಿತವಾಗಿ ದಿನಸಿ ಆಹಾರ ಪದಾರ್ಥಗಳನ್ನು ವಿತರಿಸಿ ಮಾತನಾಡಿದರು.
ಕೊರೋನಾ ಸೋಂಕು ಅಮೇರಿಕಾ, ಇಟಲಿ, ಚೀನಾ ಸೇರಿದಂತೆ ಹಲವು ಮುಂದುವರಿದ ರಾಷ್ಟ್ರಗಳು ತತ್ತರಿಸಿ ಹೋಗುವಂತೆ ಮಾಡಿದ್ದು ಇದರ ನಿಯಂತ್ರಣಕ್ಕೆ ಸದ್ಯ ಯಾವುದೇ ಔಷಧಿಗಳು ಲಭ್ಯವಿಲ್ಲದ ಕಾರಣ ಸಾಮಾಜಿಕ ಅಂತರ ಕಾಯ್ದುಕೊಂಡು ಇದರ ನಿಯಂತ್ರಣಕ್ಕೆ ಪ್ರತಿಯೊಬ್ಬರೂ ಶ್ರಮಿಸಬೇಕು ಎಂದರು.
ದೇಶದಲ್ಲಿ ಲಾಕ್‌ಡೌನ್‌ನಿಂದಾಗಿ ಕೂಲಿ ಕಾರ್ಮಿಕರಿಂದ ಹಿಡಿದು ದೊಡ್ಡ ಉದ್ದಿಮೆದಾರರವರೆಗೂ ಆರ್ಥಿಕವಾಗಿ ದೊಡ್ಡ ಪೆಟ್ಟು ನೀಡಿದ್ದು ಇದನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಸರ್ಕಾರವು ೧.೭೦ ಸಾವಿರ ಕೋಟಿ ಪರಿಹಾರ ಪ್ಯಾಕೇಜ್ ಘೋಷಿಸಿದೆ ಇದರಲ್ಲಿ ಬಡವರಿಗೆ ಉಚಿತ ಅಕ್ಕಿ ಹಾಗೂ ಪ್ರತಿ ತಿಂಗಳಿಗೆ ಜನ್‌ಧನ್ ಖಾತೆಗೆ ರೂ.೫೦೦, ಪಿಂಚಣಿದಾರರಿಗೆ ೨ ತಿಂಗಳ ಮುಂಚಿತ ವೇತನ, ಉಚಿತವಾಗಿ ಹಾಲು ವಿತರಿಸುವ ಕ್ರಮ ಕೈಗೊಳ್ಳಲಾಗಿದೆ ಎಂದರು.
ಕೊರೋನಾದಿಂದಾಗಿ ಜನತೆ ಅತಂತ್ರ ಸ್ಥಿತಿಯಲ್ಲಿದ್ದು ಉಳ್ಳವರು, ನೆರೆಹೊರೆಯವರು ಬಡವರಿಗೆ, ಅಸಹಾಯಕರಿಗೆ ಕೈಲಾದ ನೆರವು ನೀಡಿ ಮಾನವೀಯತೆ ಮೆರೆಯಬೇಕು ಆ ಉದ್ದೇಶದಿಂದ ಜಿಲ್ಲೆಯಲ್ಲಿ ಸೇವಾಭಾರತಿ ಸೇರಿದಂತೆ ಹಲವು ಸಂಘ-ಸಂಸ್ಥೆಗಳು ಸಾಮಾಜಿಕ ಸೇವೆ ಒದಗಿಸುತ್ತಿವೆ ಅವುಗಳು ನೀಡುತ್ತಿರುವ ನೆರವನ್ನು ಯಾರೊಬ್ಬರು ದುರುಪಯೋಗಪಡಿಸಿಕೊಳ್ಳಬಾರದು ಅಗತ್ಯಕ್ಕಿಂತ ಹೆಚ್ಚಿನದನ್ನು ಬಯಸದೆ ಸರ್ವರು ಒಂದೇ ಎಂಬ ಮನೋಭಾವನೆಯಿಂದ ಸೋಂಕಿನ ನಿಯಂತ್ರಣಕ್ಕೆ ಕೈ ಜೋಡಿಸಬೇಕೆಂದರು.
ನಗರ ಸಭೆ ಮಾಜಿ ಅಧ್ಯಕ್ಷ ಎಚ್.ಡಿ. ತಮ್ಮಯ್ಯ ಮಾತನಾಡಿ ಕೊರೋನಾ ನಿಯಂತ್ರಣಕ್ಕಾಗಿ ಹಾಗೂ ಜನತೆಯ ಒಳಿತಿಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಲಾಕ್‌ಡೌನ್‌ನಂತಹ ಮಹತ್ವದ ನಿರ್ಧಾರ ಕೈಗೊಂಡಿದೆ ಇದಕ್ಕಾಗಿ ಪ್ರತಿಯೊಬ್ಬರು ಸಹಕರಿಸಬೇಕು ಎಂದ ಅವರು ಲಾಕ್ ಡೌನ್‌ನಿಂದಾಗಿ ಜಿಲ್ಲೆಯ ಜನತೆಗೆ ತೊಂದರೆಯಾಗಬಾರದು ಎನ್ನುವ ಉದ್ದೇಶದಿಂದ ಬಡವರು, ನಿರ್ಗತಿಕರು, ಅಲೆಮಾರಿಗಳಿಗೆ ಉಚಿತವಾಗಿ ಗೋಧಿ, ಅಡುಗೆಎಣ್ಣೆ, ರವೆ, ಸಾಂಬಾರ ಪದಾರ್ಥಗಳು ಒಳಗೊಂಡಂತೆ ದಿನಸಿ ಪದಾರ್ಥಗಳನ್ನು ನೀಡಲಾಗುತ್ತಿದೆ ಎಂದರು.
ನಗರಾಭಿವೃದ್ಧಿ ಪ್ರಾಧಿಕಾರ ಆಯುಕ್ತ ಭೀಮನಿಡಿ, ಸಿ.ಡಿ ಎ.ಸಹಾಯಕ ನಿರ್ದೇಶಕ ಶಿವಕುಮಾರ್, ಜಗದೀಶ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.