ನ್ಯೂಡೆಲ್ಲಿ: ದೇಶದಲ್ಲಿ ಕೊರೊನಾ ವೈರಸ್‌ನಿಂದ ಮೃತಪಟ್ಟವರ ಸಂಖ್ಯೆ 100ರ ಗಡಿ ದಾಟಿದೆ.
ಒಟ್ಟು 4068 ಜನರಲ್ಲಿ ಸೋಂಕು ದೃಢಪಟ್ಟಿದ್ದು, 292 ಮಂದಿ ಗುಣಮುಖರಾಗಿದ್ದಾರೆ. ಇನ್ನು 109 ಮಂದಿ ಅಸುನೀಗಿದ್ದಾರೆ. ಜತೆಗೆ ವಿಶ್ವಾದ್ಯಂತ ಕೊರೊನಾಕ್ಕೆ ಬಲಿಯಾದವರ ಸಂಖ್ಯೆ ದಿನದಿಂದ ದಿನಕ್ಕೆ ಸಾವಿರಾರು ಪ್ರಮಾಣದಲ್ಲಿ ಏರಿಕೆಯಾಗುತ್ತಿದ್ದು, ಈವರೆಗೆ 70 ಸಾವಿರ ತಲುಪಿದೆ.
ಪ್ರಪಂಚಾದ್ಯಂತ ಸೋಂಕಿತರ ಸಖ್ಯೆ 1.25ಲಕ್ಷ ದಾಟಿದೆ. ಹಾಗೆಯೇ ಉತ್ತರ ಪ್ರದೇಶದಲ್ಲಿ ಏ.3ರಂದು ಮೃತಪಟ್ಟಿದ್ದ ವ್ಯಕ್ತಿಯಲ್ಲಿ ಕೊರೊನಾ ಸೋಂಕು ಇದ್ದದ್ದು ದೃಢಪಟ್ಟಿದೆ. ಈ ಮೂಲಕ ಉತ್ತರ ಪ್ರದೇಶದಲ್ಲಿ ವೈರಸ್‌ಗೆ ತುತ್ತಾದವರ ಸಂಖ್ಯೆ ಮೂರಕ್ಕೆ ಏರಿಕೆಯಾಗಿದೆ.
ರಾಜಸ್ತಾನದಲ್ಲಿ ಮತ್ತೆ 8 ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು, ಈವರೆಗೆ 275ಮಂದಿಯಲ್ಲಿ ಸೋಂಕು ಇರುವುದು ಖಚಿತವಾಗಿದೆ. ಮಧ್ಯಪ್ರದೇಶದ ರಾಜಧಾನಿ ಭೋಪಾಲ್‌ನಲ್ಲಿ 52 ವರ್ಷದ ವ್ಯಕ್ತಿ ಸೋಂಕಿನಿಂದ ಮೃತಪಟ್ಟಿದ್ದಾರೆ. ಅಲ್ಲಿ ಸಾವಿಗೀಡಾದವರ ಸಂಖ್ಯೆ 14ಕ್ಕೇರಿಕೆಯಾಗಿದೆ.
ಅಮೇರಿಕದಲ್ಲಿ ಇನ್ನಷ್ಟು ಹೆಚ್ಚಾಯಿತು ಕೊರೊನಾ ದರ್ಬಾರ್
ಅಮೆರಿಕಾದಲ್ಲಿ ಒಟ್ಟು ಇರುವ ಜನಸಂಖ್ಯೆ 33 ಕೋಟಿ ಆದರೆ, ಈವರೆಗೆ ಅಲ್ಲಿ ಕೊರೊನಾಕ್ಕೆ ಬಲಿಯಾದವರ ಸಂಖ್ಯೆ 7 ಸಾವಿರ ಗಡಿದಾಟಿದ್ದು, ಕೊರೊನಾ ಮಹಾಮಾರಿ ತನ್ನ ಬಾಹುವನ್ನು ಚಾಚಿಕೊಂಡು ಕೂತಿದೆ. ಇದರಿಂದ ಅಮೆರಿಕ ಸರ್ಕಾರ ತತ್ತರಗೊಂಡಿದ್ದು, ಸೋಂಕಿ ನಿಯಂತ್ರಣಕ್ಕೆ ಹರಸಾಹಸ ಪಡುತ್ತಿದೆ.
ಕಳೆದ 24 ತಾಸಿನಲ್ಲಿ ಅಮೆರಿಕಾದಲ್ಲಿ ಸತ್ತವರ ಸಂಕ್ಯೆ 14೦೦ಕ್ಕೂ ಹೆಚ್ಚಿದೆ. ಇದರಿಂದ ಜನರಲ್ಲಿ ಆತಂಕ ಇಮ್ಮಡಿಗೊಂಡಿದ್ದು ಭಯದ ವಾತಾವರಣದಲ್ಲೇ ದಿನದೂಡುತ್ತಿದ್ದಾರೆ. ಇದು ಹೀಗೆಯೇ ಮುಂದುವರಿದರೆ ಇನ್ನು ಎಷ್ಟು ಮಂದಿ ಬಿಲಿಯಾಗುವರೋ ಎಂಬ ಆತಂಕ ಅಲ್ಲಿನ ಸರ್ಕಾರವನ್ನು ಬೆಂಬಿಡದೆ ಕಾಡುತ್ತಿದೆ.
ಭಾರತದಲ್ಲೂ ಅಟ್ಟಹಾಸ
ಇನ್ನು ಭಾರತದಲ್ಲೂ ಕೊರೊನಾ ಸೋಂಕಿತ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿರುವುದು ಜನರಲ್ಲಿ ಇನ್ನಷ್ಟು ಭಯವನ್ನು ಮೂಡಿಸುತ್ತಿದೆ. ಜತೆಗೆ ಕರ್ನಾಟಕದಲ್ಲೂ ತನ್ನ ಕಬಂಧ ಬಾಹುವನ್ನು ಚಾಚಿರುವ ಈ ಮಹಾಮಾರಿ ಮೈಸೂರಿನಲ್ಲಿ 28 ಜನರಲ್ಲಿ ಅಡಗಿ ಕುಳಿತಿದೆ. ಜತೆಗೆ ರಾಜ್ಯದಲ್ಲಿ ಈವರೆಗೆ ಕೊರೊನಾಗೆ ನಾಲ್ವರು ಬಲಿಯಾಗಿದ್ದು 140ಕ್ಕೂ ಹೆಚ್ಚು ಜನರಿಗೆ ಸೋಂಕು ಇರುವುದು ದೃಢಪಟ್ಟಿದೆ.