ವಿಜಯಪುರ: ಸರ್ಕಾರದ ನಿಯಮದನ್ವಯ ಪಡಿತರ ವಸ್ತುಗಳನ್ನು ಓಟಿಪಿ ಮೂಲಕ ವಿತರಣೆ ಮಾಡಲು ಜಿಲ್ಲೆಯ ಎಲ್ಲಾ ನ್ಯಾಯಬೆಲೆ ಅಂಗಡಿಯವರಿಗೆ ಸೂಚಿಸಲಾಗಿದ್ದು, ಒಂದು ವೇಳೆ ಪಡಿತರ ಚೀಟಿದಾರರಿಂದ ಏನಾದರೂ ದೂರುಗಳು ಬಂದು ಲೋಪಗಳು ದೃಢಪಟ್ಟಲ್ಲಿ ಅಂತಹ ನ್ಯಾಯಬೆಲೆ ಅಂಗಡಿಯವರ ಪ್ರಾಧಿಕಾರ ಪತ್ರವನ್ನು ಯಾವುದೇ ಮುನ್ಸೂಚನೆ ನೀಡದೇ ರದ್ದುಪಡಿಸಲು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ ತಿಳಿಸಿದ್ದಾರೆ.
ಕೊರೊನಾ ನಿಯಂತ್ರಣ ಕುರಿತು ತಮ್ಮ ಕಚೇರಿಯಲ್ಲಿ ಕರೆದಿದ್ದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಕೋವಿಡ್-19 ವೈರಸ್ ನಿಯಂತ್ರಣಕ್ಕಾಗಿ ಏ. 14 ರವರೆಗೆ ಲಾಕ್‍ಡೌನ್ ಮಾಡಲಾಗಿದ್ದು, ಈ ಹಿನ್ನೆಲೆಯಲ್ಲಿ ಸಾರ್ವಜನಿಕರ ವಿತರಣಾ ಪದ್ಧತಿಯಡಿ ಪಡಿತರ ಚೀಟಿದಾರರಿಗೆ ಏ. ಹಾಗೂ ಮೇ ತಿಂಗಳ ಮುಂಗಡ ಪ್ರಮಾಣ ಸೇರಿದಂತೆ ವಿತರಣೆ ಮಾಡಲು 18038 ಎಂಟಿ ಅಕ್ಕಿ ಹಾಗೂ 1870 ಎಂಟಿ ಗೋಧಿಯು ಸರ್ಕಾರದಿಂದ ಜಿಲ್ಲೆಗೆ ಹಂಚಿಕೆಯಾಗಿದೆ ಎಂದರು.
ಜಿಲ್ಲೆಯಲ್ಲಿ 835 ನ್ಯಾಯಬೆಲೆ ಅಂಗಡಿಗಳು ಕಾರ್ಯನಿರ್ವಹಿಸುತ್ತಿದ್ದು, ಈ ಎಲ್ಲಾ ನ್ಯಾಯಬೆಲೆ ಅಂಗಡಿಗಳಿಗೆ ಆಯಾ ತಾಲೂಕು ಸಗಟು ಮಳಿಗೆಗಳಿಂದ ಆಹಾರ ಧಾನ್ಯಗಳು ಈಗಾಗಲೇ ಸಾಗಾಣಿಕೆ ಕಾರ್ಯ ಭರದಿಂದ ಸಾಗಿದೆ. ಈಗಾಗಲೇ ಸುಮಾರು 400 ಅಂಗಡಿಗಳಿಗೆ ಪಡಿತರ ವಸ್ತುಗಳಾದ ಅಕ್ಕಿ ಮತ್ತು ಗೋಧಿಯನ್ನು ಸಾಗಾಣಿಕೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಏ.ತಿಂಗಳಲ್ಲಿ ಸಾರ್ವಜನಿಕ ವಿತರಣಾ ಪದ್ಧತಿಯು ಅನ್ನಭಾಗ್ಯ ಯೋಜನೆಯಡಿ ಪ್ರತಿ ಅಂತ್ಯೋದಯ ಅನ್ನ ಯೋಜನೆ ಪಡಿತರ ಚೀಟಿದಾರರಿಗೆ ಪ್ರತಿ ಯೂನಿಟ್ಟಿಗೆ 10 ಕೆಜಿ ಅಕ್ಕಿ ಹಾಗೂ ಪ್ರತಿ ಬಿಪಿಎಲ್ ಪಡಿತರ ಚೀಟಿಗೆ 4 ಕೆಜಿ ಗೋಧಿಯಂತೆ ಉಚಿತವಾಗಿ ವಿತರಣೆ ಮಾಡಲು ಹಂಚಿಕೆ ಮಾಡಲಾಗಿದೆ ಎಂದರು.
ಪಡಿತರ ವಸ್ತುಗಳು ಲಭ್ಯವಾಗಿಲ್ಲವೆಂದು ಯಾವುದೇ ಪಡಿತರ ಚೀಟಿದಾರರು ಆತಂಕಪಡುವ ಅವಶ್ಯಕತೆ ಇರುವುದಿಲ್ಲ. ಪಡಿತರ ಚೀಟಿದಾರರು ಪಡಿತರ ವಸ್ತುಗಳ ವಿತರಣೆಗೆ ಸಂಬಂಧಿಸಿದಂತೆ ಯಾವುದಾದರೂ ದೂರುಗಳಿದ್ದಲ್ಲಿ 1967 ಕೇಂದ್ರ ಸಹಾಯವಾಣಿ ಅಥವಾ ಜಿಲ್ಲಾಧಿಕಾರಿಗಳ ಕಛೇರಿಯ ಆಹಾರ ಶಾಖೆಯ ದೂರವಾಣಿ ಸಂಖ್ಯೆ 08352-250419ಗೆ ಸಂಪರ್ಕಿಸಿ ತಮ್ಮ ಅಹವಾಲು ದಾಖಲಿಸಬಹುದು ಎಂದು ಸಲಹೆ ನೀಡಿದರು.