ಬೆಂಗಳೂರು: ಬೆಂಗಳೂರು ನಗರದಲ್ಲಿ ವಾಯುಮಾಲಿನ್ಯ ಹೆಚ್ಚಾಗುತ್ತಿದ್ದು, ಮಾಲಿನ್ಯ ತಡೆಗಟ್ಟಲು ಪರಿಸರ ಸ್ನೇಹಿ ವಾಹನಗಳು – ಬಿ.ಎಸ್. 6 ಮಾದರಿಯ ವಾಹನಗಳನ್ನು ಖರೀದಿಸಲು ಕ್ರಮ ವಹಿಸಲಾಗುತ್ತಿದೆ ಎಂದು ಸಾರಿಗೆ ಸಚಿವ ಲಕ್ಷ್ಮಣ ಸಂಗಪ್ಪ ಸವದಿ ತಿಳಿಸಿದರು.
ವಿಧಾನಪರಿಷತ್ತಿನಲ್ಲಿ ನಡೆದ ಪ್ರಶ್ನೋತ್ತರ ವೇಳೆ ಪಿ.ಆರ್. ರಮೇಶ್ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಎಲ್ಲಾ ಸರ್ಕಾರಿ ಹಾಗೂ ಖಾಸಗಿ ವಾಹನಗಳನ್ನು ಕಡ್ಡಾಯವಾಗಿ ತಪಾಸಣೆಗೆ ಒಳಪಡಿಸಲು ಕ್ರಮ ವಹಿಸಲಾಗಿದೆ. ಕೆ.ಎಸ್.ಆರ್.ಟಿ.ಸಿ ಮತ್ತು ಬಿಎಂಟಿಸಿ ಬಸ್ಸುಗಳ ವಾಹನದ ಇಂಜಿನ್‍ಗಳು ಬಿ.ಎಸ್. 4 ರ ಮಾದರಿಯಾಗಿವೆ. ಇವುಗಳನ್ನು ನಿಲ್ಲಿಸುವ ಸಂಬಂಧ ಏಪ್ರಿಲ್ 1ರಿಂದ ಬಿ.ಎಸ್. 6 ಮಾದರಿಯ ವಾಹನಗಳ ಖರೀದಿಗೆ ಕ್ರಮ ವಹಿಸಲಾಗಿದೆ. ಬಿ.ಎಂ.ಟಿ.ಸಿ. ಸಂಸ್ಥೆಗೆ ಹೊಸ 400 ಎಲೆಕ್ಟ್ರಿಕ್ ವಾಹನಗಳ ಖರೀದಿಗೆ ಈಗಾಗಲೇ ಟೆಂಡರ್ ಕರೆಯಲಾಗಿದೆ. 100 ಕಡೆ ಚಾರ್ಜಿಂಗ್ ಪಾಯಿಂಟ್ ಅಳವಡಿಸಲು ಗುರುತಿಸಲಾಗಿದ್ದು, ಈಗಾಗಲೇ ಇವುಗಳ ಅನುಷ್ಠಾನಕ್ಕಾಗಿ ಅನುದಾನ ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದರು.
ನಿಗದಿತ ಪ್ರಮಾಣಕ್ಕಿಂತ ಹೆಚ್ಚು ಹೊಗೆ ಹೊರಸೂಸುವ ಕೆ.ಎಸ್.ಆರ್.ಟಿ.ಸಿ ಮತ್ತು ಬಿ.ಎಂ.ಟಿ.ಸಿ. ವಾಹನಗಳನ್ನು ಸಹ ಪ್ರವರ್ತನ ಸಮಯದಲ್ಲಿ ತಪಾಸಣೆ ನಡೆಸಿ ನಿಯಮಾನುಸಾರ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.
ಕನಾಟಕ ಮೋಟಾರು ವಾಹ ನಿಯಮಾವಳಿ 1989ರ 231 ಬಿ ಪ್ರಕಾರ ಬೆಂಗಳೂರು ನಗರದಲ್ಲಿ 415 ವಾಯುಮಾಲಿನ್ಯ ತಪಾಸಣಾ ಕೇಂದ್ರಗಳನ್ನು ತೆರೆಯಲು ಅನುಮತಿಸಲಾಗಿದೆ. ಹೊಸದಾಗಿ ನೋಂದಣಿಯಾದ ವಾಹನಗಳಿಗೆ ಒಂದು ವರ್ಷ ಅವಧಿಗೆ ವಾಯುಮಾಲಿನ್ಯ ನಿಯಂತ್ರಣ ಪ್ರಮಾಣ ಪತ್ರದಿಂದ ವಿನಾಯಿತಿ ಇದೆ. ನಂತರ ಎಲ್ಲಾ ಬಿ.ಎಸ್. 3 ಮತ್ತು ಬಿ.ಎಸ್. 4 ಮಾದರಿಯ ವಾಹನಗಳ ಪಿಯುಸಿ ಪ್ರಮಾಣ ಪತ್ರ ಪಡೆಯುವುದು ಕಡ್ಡಾಯವಾಗಿದೆ ಎಂದು ತಿಳಿಸಿದರು.
ಬಿ.ಎಸ್. 4 ಮಾದರಿಯ ವಾಹನಗಳು 12 ತಿಂಗಳ ಅವಧಿಗೆ ವಾಯು ಮಾಲಿನ್ಯ ತಪಾಸಣಾ ಪ್ರಮಾಣ ಪತ್ರಗಳನ್ನು ವಿಸ್ತಿರಿಸಲಾಗುತ್ತಿದೆ ಇದಲ್ಲದೆ, ಬೆಂಗಳೂರು ನಗರದಲ್ಲಿ ಸಂಚರಿಸುವ 2-ಸ್ಟ್ರೋಕ್ ಆಟೋರಿಕ್ಷಾಗಳಿಗೆ 2020, ಮಾರ್ಚ್ ಅಂತ್ಯದ ಅವಧಿಗೆ ಮಾತ್ರ ರಸ್ತೆಗಳಲ್ಲಿ ಸಂಚರಿಸಲು ಅನುಮತಿಸಲಾಗಿದೆ ಎಂದರು.
ಸಾರ್ವಜನಿಕ ವಾಹನಗಳಾದ ಕೆ.ಎಸ್.ಆರ್.ಟಿ.ಸಿ, ಬಿ.ಎಂ.ಟಿ.ಸಿ. ಆಟೋ, ಟ್ಯಾಕ್ಸಿ ಮುಂತಾದ ವಾಹನಗಳ ಚಾಲಕರು ಮೊಬೈಲ್‍ನಲ್ಲಿ ಮಾತನಾಡಿಕೊಂಡು ಚಾಲನೆ ಮಾಡುತ್ತಿರುವ ಬಗ್ಗೆ ಪ್ರವರ್ತನ ಸಮಯದಲ್ಲಿ ತಪಾಸಣೆ ನಡೆಸಿ ದಂಡ ವಸೂಲಿ ಮಾಡಲು ನಿಯಮಾನುಸಾರ ಕ್ರಮ ವಹಿಸಲಾಗಿದೆ ಎಂದು ಸಚಿವರು ತಿಳಿಸಿದರು.