ಚಾಮರಾಜನಗರ: ಸರ್ಕಾರದ ಆದೇಶ, ರೈತರ ಹಿತದೃಷ್ಟಿ ಹಾಗೂ ಆರೋಗ್ಯ ಸುರಕ್ಷತಾ, ಮುಂಜಾಗರೂಕತಾ ಕ್ರಮಗಳ ಕಡ್ಡಾಯ ಪಾಲನೆ ಮಾಡುವುದು ಸೇರಿದಂತೆ ಹಲವು ಷರತ್ತಿಗೆ ಒಳಪಟ್ಟು ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಕುಂತೂರು ಗ್ರಾಮದ ಬಣ್ಣಾರಿ ಅಮ್ಮನ್ ಶುಗರ್ಸ್ ಲಿ. ಕಾರ್ಖಾನೆ ಪ್ರಾರಂಭಿಸಲು ಆದೇಶಿಸಿದ್ದು, ಜನರು ಯಾವುದೇ ಆತಂಕಕ್ಕೆ ಒಳಗಾಗಬೇಕಿಲ್ಲ ಎಂದು ಜಿಲ್ಲಾಧಿಕಾರಿ ಡಾ. ಎಂ.ಆರ್. ರವಿ ಸ್ಪಷ್ಟನೆ ನೀಡಿದ್ದಾರೆ.
ಬಣ್ಣಾರಿ ಅಮ್ಮನ್ ಶುಗರ್ ಕಾರ್ಖಾನೆ ಆರಂಭದಿಂದ ಕೋವಿಡ್-19ರ ಕುರಿತು ಆತಂಕ ಉಂಟಾಗಿದೆ ಎಂಬ ಬಗ್ಗೆ ಕೆಲ ಮಾಧ್ಯಮಗಳಲ್ಲಿ ವರದಿಯಾಗಿರುವುದನ್ನು ಗಮನಿಸಲಾಗಿದೆ. ಆದರೆ ಕಾರ್ಖಾನೆಯ ಕಾರ್ಮಿಕರಿಗೆ ಆರೋಗ್ಯ ತಪಾಸಣೆ ನಡೆಸಲಾಗಿದೆ. ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲು ವಿಧಿಸಿರುವ ಷರತ್ತುಗಳನ್ನು ಕಾರ್ಖಾನೆಯಲ್ಲಿ ಪಾಲನೆ ಮಾಡಲಾಗುತ್ತಿದೆಯೇ ಎಂಬ ಬಗ್ಗೆ ಕಾರ್ಖಾನೆಯಲ್ಲಿ ಹಾಜರಿದ್ದು, ವರದಿ ಸಲ್ಲಿಸಲು ಇಬ್ಬರು ಅಧಿಕಾರಿಗಳನ್ನು ನಿಯೋಜಿಸಲಾಗಿದೆ ಎಂದು ತಿಳಿಸಿದ್ದಾರೆ.
ತಮಿಳುನಾಡಿನ ಕೆಲವೇ ಸಂಖ್ಯೆ ತಂತ್ರಜ್ಞರನ್ನು ಕಾರ್ಖಾನೆಯಲ್ಲಿ ಕಾರ್ಯನಿರ್ವಹಿಸಲು ಅವಕಾಶ ಕಲ್ಪಿಸಲಾಗಿದೆ. ಈ ಎಲ್ಲರಿಗೆ ಆರೋಗ್ಯ ತಪಾಸಣೆ ಮಾಡಿದ ಬಳಿಕವೇ ಕೆಲಸಕ್ಕೆ ನಿಯೋಜಿಸಲಾಗಿದೆ. ಈ ಬಗ್ಗೆ ಯಾವುದೇ ರೀತಿಯ ಶಂಕೆಗೆ ಅಸ್ಪದವಿಲ್ಲವೆಂದು ಸ್ಪಷ್ಟಪಡಿಸಿದ್ದಾರೆ.
ಲಾಕ್‍ಡೌನ್ ಅವಧಿಯಲ್ಲಿ ಅನುಮತಿಸಬಹುದಾದ ಉದ್ಯಮಗಳ ಪೈಕಿ ಸಕ್ಕರೆ ಕಾರ್ಖಾನೆಯು ಸೇರಿದೆ. ಕಾರ್ಖಾನೆ ವ್ಯಾಪ್ತಿಗೆ ಒಳಪಡುವ 1700 ಎಕರೆ ಪ್ರದೇಶದಲ್ಲಿ ರೈತರು ಬೆಳೆದಿರುವ 60 ಸಾವಿರ ಮೆಟ್ರಿಕ್ ಟನ್ ಕಬ್ಬನ್ನು ಕಟಾವು ಮಾಡಿ ಸಕ್ಕರೆ ಉತ್ಪಾದನೆ ಮಾಡಬೇಕಿದೆ. ಒಟ್ಟು ಕಬ್ಬಿನ ಪೈಕಿ ಚಾಮರಾಜನಗರ ಜಿಲ್ಲೆಯ 35 ಸಾವಿರ ಟನ್ ಸೇರಿದೆ. ಸರ್ಕಾರದ ಆದೇಶ ಹಾಗೂ ರೈತರ ಹಿತದೃಷ್ಠಿಯಿಂದ ಕನಿಷ್ಠ ಪ್ರಮಾಣದಲ್ಲಿ ಕಾರ್ಮಿಕರನ್ನು ನಿಯೋಜಿಸಿ ಸಾಮಾಜಿಕ ಅಂತರ ಕಾಯ್ದುಕೊಂಡು ಕಾರ್ಯನಿರ್ವಹಿಸಲು ಕಾರ್ಖಾನೆಗೆ ಅನುಮತಿಸಲಾಗಿದೆ.
ಷರತ್ತುಗಳ ಉಲ್ಲಂಘನೆ ಮಾಡಿದಲ್ಲಿ ಕಾರ್ಖಾನೆಯ ಮುಖ್ಯಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಲಾಗುತ್ತದೆ. ಜಿಲ್ಲೆಯ ಜನರು ಕಾರ್ಖಾನೆ ಆರಂಭದ ಬಗ್ಗೆ ಅನಗತ್ಯವಾಗಿ ಆತಂಕಕ್ಕೆ ಒಳಗಾಗಬೇಕಿಲ್ಲ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.