ಶಿವಮೊಗ್ಗ: ಬಾಪೂಜಿ ನಗರದ ಮನೆಯೊಂದರಲ್ಲಿ 14 ವರ್ಷದ ಬಾಲಕಿಯನ್ನು ಸುಮಾರು 5 ತಿಂಗಳಿಂದ ಮನೆ ಕೆಲಸಕ್ಕೆ ನೇಮಿಸಿಕೊಂಡಿರುವುದನ್ನು ಪತ್ತೆಹಚ್ಚಿ, ರಕ್ಷಣೆ ಮಾಡಲಾಗಿದೆ.
ಮಕ್ಕಳ ಸಹಾಯವಾಣಿ ದೂರಿನ ಮೇರೆಗೆ ಮಂಗಳವಾರ ಜಿಲ್ಲಾಡಳಿತ, ಕಾರ್ಮಿಕ ಇಲಾಖೆ, ಜಿಲ್ಲಾ ಬಾಲಕಾರ್ಮಿಕ ಯೋಜನೆ, ಶಿಕ್ಷಣ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಪೊಲೀಸ್ ಇಲಾಖೆ ಹಾಗೂ ಮಕ್ಕಳ ಸಹಾಯವಾಣಿಯ ಸಿಬ್ಬಂದಿ ಜಂಟಿ ಕಾರ್ಯಾಚರಣೆ ನಡೆಸಿ ಬಾಲಕಿಯನ್ನು ರಕ್ಷಿಸಿ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಗೆ ಒಪ್ಪಿಸಿ ಬಾಲಕಿಯ ಪೋಷಣೆ ಮತ್ತು ರಕ್ಷಣೆಗಾಗಿ ಸರ್ಕಾರಿ ಬಾಲಕಿಯರ ಬಾಲಮಂದಿರಕ್ಕೆ ದಾಖಲಿಸಲಾಗಿದೆ.
ಮಾಲೀಕರಿಗೆ ಬಾಲ್ಯಾವಸ್ಥೆ ಹಾಗೂ ಕಿಶೋರಾವಸ್ಥೆಯ ಕಾರ್ಮಿಕ (ನಿಷೇಧ ಮತ್ತು ನಿಯಂತ್ರಣ) ಕಾಯ್ದೆ ಕುರಿತು ಅರಿವು ಮೂಡಿಸಿ, ಮಾಲೀಕರ ವಿರುದ್ದ ಕೋಟೆ ಪೊಲೀಸ್ ಠಾಣೆಯಲ್ಲಿ ಎಫ್.ಐ.ಆರ್ ದಾಖಲಿಸಲಾಗಿದೆ.
ರಕ್ಷಣಾ ತಂಡದಲ್ಲಿ ಕಾರ್ಮಿಕ ಅಧಿಕಾರಿ ಎಂ.ಪಿ ವಿಶ್ವನಾಥ, ಕಾರ್ಮಿಕ ನಿರೀಕ್ಷಕ ಪಿ ಭೀಮೆಶ್, ಯೋಜನಾ ನಿರ್ದೇಶಕ ರಘುನಾಥ ಎ.ಎಸ್, ಇ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಪುನಿತ್ ಕುಮಾರ್, ಸಿ.ಆರ್.ಪಿ. ಎಚ್ ರಾಜೇಶ್, ಆಪ್ತ ಸಮಾಲೋಚಕ ಅಶೋಕ್ ಮತ್ತಿತರರು ಇದ್ದರು.