ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಕೊರೊನ ವೈರೆಸ್ ಸೋಂಕು ನಿಯಂತ್ರಿಸುವ ಸಲುವಾಗಿ ರಸ್ತೆ ಮಾರ್ಗ, ಮಾರುಕಟ್ಟೆ, ಕಚೇರಿಗಳು, ಸೋಂಕು ಕಂಡು ಬಂದ ಪ್ರದೇಶಗಳು ಸೇರಿದಂತೆ ಇನ್ನಿತರ ಪ್ರದೇಶಗಳಲ್ಲಿ ಸೋಂಕು ನಿವಾರಕ ದ್ರಾವಣ ಸಿಂಪಡಿಸುವ ವಾಹನ ಹಾಗೂ ಡ್ರೋನ್‌ಗೆ ಮೇಯರ್ ಗೌತಮ್ ಕುಮಾರ್ ಜೈನ್ ಚಾಲನೆ ನೀಡಿದರು.
ಬಿಬಿಎಂಪಿ ವ್ಯಾಪ್ತಿಯಲ್ಲಿ ಕೊರೊನ ವೈರೆಸ್ ಸೋಂಕು ಹಾಗೂ ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ನಗರಾದ್ಯಂತ ಸೋಂಕು ನಿವಾರಕ ದ್ರಾವಣ(ಸೋಡಿಯಮ್ ಹೈಪೊ ಕ್ಲೋರೈಡ್) ಸಿಂಪಡಿಸಲು ಕ್ರಮ ವಹಿಸಲಾಗಿದೆ ಎಂದು ಮೇಯರ್ ತಿಳಿಸಿದರು.
ನಾಗರೀಕರ ಆರೋಗ್ಯ ಕಾಪಾಡುವ ಹಿತದೃಷ್ಟಿಯಿಂದ ಪಾಲಿಕೆಯು ಈಗಾಗಲೇ ಹಲವು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದ್ದು, ಈಗಾಗಲೇ ವಾರ್ಡ್‌ಗಳಲ್ಲಿ ಸಿಬ್ಬಂದಿ ಹಾಗೂ ಟ್ರ್ಯಾಕ್ಟರ್ ಗಳಲ್ಲಿ ಡ್ರಮ್‌ಗಳನ್ನಿಟ್ಟು ಸೋಂಕು ನಿವಾರಕ ದ್ರಾವಣ ಸಿಂಪಡಿಸಲಾಗುತ್ತಿದೆ. ಅದರ ಜೊತೆಗೆ ಇಂದಿನಿಂದ ಜಲಮಂಡಳಿಯಿಂದ 7 ಸಾವಿರ ಲೀಟರ್ ಸಾಮರ್ಥ್ಯದ 10 ಜೆಟ್ಟಿಂಗ್ ಯಂತ್ರಗಳನ್ನು ಪಾಲಿಕೆಗೆ ತಾತ್ಕಾಲಿಕವಾಗಿ ಹಸ್ತಾಂತರಿಸಿಕೊಳ್ಳಲಾಗಿದ್ದು, ನಗರಾದ್ಯಂತ ಸಿಂಪಡಿಸಲು ಕ್ರಮ ವಹಿಸಲಾಗುತ್ತಿದೆ ಎಂದು ತಿಳಿಸಿದರು.
ಜೆಟ್ಟಿಂಗ್ ಯಂತ್ರಗಳ ಮೂಲಕ ಹಡ್ಸನ್ ವೃತ್ತ, ಟೌನ್ ಹಾಲ್, ಕೆ.ಆರ್.ಮಾರುಕಟ್ಟೆ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸೋಂಕು ನಿವಾರಕ ಸಿಂಪಡಿಸಲಾಗುತ್ತದೆ. ಇದಲ್ಲದೆ ಡ್ರೋನ್ ಮೂಲಕ ಸೋಂಕು ನಿವಾರಕ ಸಿಂಪಡಿಸಲು ಕ್ರಮವಹಿಸಲಾಗುತ್ತಿದೆ. ಅಗ್ನಿ ಶಾಮಕ ವಾಹನಗಳನ್ನೂ ಸೋಂಕು ನಿವಾರಕ ಸಿಂಪಡಿಸಲು ನಿಯೋಜಿಸಿಕೊಳ್ಳಲಾಗುತ್ತಿದೆ ಎಂದರು.
ನಗರವನ್ನು ಶುಚಿತ್ವ ಕಾಪಾಡುವ ಸಲುವಾಗಿ ಕಸಗುಡಿಸುವ ಯಂತ್ರಗಳ ಮೂಲಕ ಪ್ರಮುಖ ರಸ್ತೆಗಳನ್ನು ಸ್ವಚ್ಛವಾಗಿರುವಂತೆ ಕ್ರಮವಹಿಸಲಾಗಿದ್ದು, ಮೇಲ್ಸೇತುವೆ, ಆರ್ಟೀರಿಯಲ್, ಸಬ್ ಆರ್ಟೀರಿಯಲ್ ರಸ್ತೆಗಳನ್ನು ಸ್ವಚ್ಛಗೊಳಿಸಲಾಗುತ್ತಿದೆ ಎಂದು ಹೇಳಿದರು.
ಆಯುಕ್ತ ಅನಿಲ್ ಕುಮಾರ್, ವಿಶೇಷ ಆಯುಕ್ತರು(ಘನತ್ಯಾಜ್ಯ) ಡಿ.ರಂದೀಪ್, ಜಂಟಿ ಆಯುಕ್ತರು(ಘನತ್ಯಾಜ್ಯ) ಸರ್ಪರಾಜ್ ಖಾನ್ ಹಾಗೂ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.