ತುಮಕೂರು: ನ್ಯೂಡೆಲ್ಲಿಯ ನಿಜಾಮುದ್ದೀನ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಬಂದವರು ಹಾಗೂ ಅವರ ಸಂಪರ್ಕದಲ್ಲಿ ಇರುವವರು ಸ್ವಯಂ ಮಾಹಿತಿ ನೀಡುವಂತೆ ಮನೆಮನೆಗೆ ತೆರಳಿ ಕರಪತ್ರಗಳನ್ನು ಹಂಚುವ ಮೂಲಕ ಕೊರೊನಾ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ.
ಕೊರೋನಾ ವೈರಸ್ ನಿಯಂತ್ರಣಕ್ಕೆ ತೆಗೆದುಕೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಮಾಹಿತಿಯುಳ್ಳ ಕರಪತ್ರವನ್ನು ಜಿಲ್ಲೆಯಲ್ಲಿರುವ ಅಲ್ಪಸಂಖ್ಯಾತರ ಮನೆಮನೆಗೆ ತೆರಳಿ ಅರಿವು ಮೂಡಿಸಲಾಗುತ್ತಿದೆ.
ಆರೋಗ್ಯ ಇಲಾಖೆ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಹಾಗೂ ವಕ್ಫ್ ಮಂಡಳಿಯ ಈ ಅಭಿಯಾನ ಆರಂಭಿಸಿದ್ದು ಪ್ರತಿಯೊಬ್ಬರ ಮನೆಗಳಿಗೂ ತೆರಳಿ ಕೊರೊನಾದಿಂದಾಗುವ ಸಾವು ನೋವಿಗಳನ್ನು ತಡೆಗಟ್ಟುವ ಕುರಿತು ಮಾಹಿತಿ ನೀಡಲಾಗುತ್ತಿದೆ.
ನ್ಯೂಡೆಲ್ಲಿಯಲ್ಲಿ ಮಾರ್ಚ್ 8 ರಿಂದ 20 ರವರೆಗೆ ನಡೆದಂತಹ ನಿಜಾಮುದ್ದೀನ್ ಕಾರ್ಯಕ್ರಮದಲ್ಲಿ ನಮ್ಮ ಜಿಲ್ಲೆಯಿಂದ ಭಾಗವಹಿಸಿ ಬಂದವರು ಮತ್ತು ಅವರ ಸಂಪರ್ಕದಲ್ಲಿದ್ದವರು ವೈಯಕ್ತಿಕವಾಗಿ ವಿಳಂಬ ಮಾಡದೆ ತುರ್ತಾಗಿ ಸಮೀಪದ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ತಪಾಸಣೆ ಮಾಡಿಸಿಕೊಂಡು ಚಿಕಿತ್ಸೆ ಪಡೆದುಕೊಳ್ಳಬೇಕು ಎಂದು ತಿಳಿಸಲಾಗುತ್ತಿದೆ.
ಕರಪತ್ರಗಳನ್ನು ಕನ್ನಡ, ಉರ್ದು ಹಾಗೂ ಇಂಗ್ಲಿಷ್ ಭಾಷೆಯಲ್ಲಿ ಮುದ್ರಿಸಿ, ಅಲ್ಪಸಂಖ್ಯಾತರ ಮನೆ ಮನೆಗಳಿಗೆ ಹಂಚಿಕೆ ಮಾಡಿ ಕೊರೊನಾ ಬಗ್ಗೆ ಮಾಹಿತಿ ನೀಡಲಾಗುತ್ತಿದೆ.
ನಾಗರಿಕರು ಈ ಬಗ್ಗೆ ಎಚ್ಚೆತ್ತುಕೊಂಡು ಮುಂದೆ ಸಂಭವಿಸಬಹುದಾದ ಹಾನಿಯನ್ನು ತಡೆಗಟ್ಟಲು ಇಂದಿನಿಂದಲೇ ಪಣ ತೊಡಬೇಕಿದೆ.