ಉಡುಪಿ: ಮಲ್ಪೆ ಬಂದರು ಪ್ರದೇಶದಲ್ಲಿ ಅಪ್ರಾಪ್ತ ವಯಸ್ಸಿನ ಮಕ್ಕಳು ಮೀನು ಮಾರಾಟದಲ್ಲಿ ತೊಡಗಿರುವ ದೂರುಗಳು ಬಂದಿದ್ದು, ಈ ಹಿನ್ನೆಲೆಯಲ್ಲಿ ಮಲ್ಪೆ ಬಂದರಿನೊಳಗೆ 14 ವರ್ಷ ಕೆಳಗಿನ ಮಕ್ಕಳಿಗೆ ಯಾವುದೇ ಕಾರಣಕ್ಕೂ ಪ್ರವೇಶ ನೀಡಲಾಗುವುದಿಲ್ಲ ಎಂದು ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು ತಿಳಿಸಿದರು.
ಗುರುವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಮಕ್ಕಳ ರಕ್ಷಣಾ ಘಟಕದ ಸಮಿತಿ ಸಭೆಯನ್ನುದ್ದೇಶಿಸಿ ಮಾತನಾಡಿದರು. ಮಲ್ಪೆ ವ್ಯಾಪ್ತಿಯ ಹನುಮಂತನಗರ, ನಿಟ್ಟೂರು ಮತ್ತು ಕೊಳ ಮುಂತಾದ ಕಡೆಗಳಲ್ಲಿ ಅಪ್ರಾಪ್ತ ಮಕ್ಕಳು ಬೆಳಗ್ಗಿನ ಜಾವ ಮೀನುಗಾರಿಕಾ ಬೋಟುಗಳಲ್ಲಿ ತೆರಳುತ್ತಿರುವ ಬಗ್ಗೆ ದೂರು ಬಂದ ಹಿನ್ನೆಲೆಯಲ್ಲಿ ಮಲ್ಪೆ ಬಂದರಿಗೆ ಪ್ರವೇಶಿಸುವ ನಾಲ್ಕೂ ಗೇಟುಗಳಲ್ಲಿ ಮೀನುಗಾರಿಕಾ ಇಲಾಖೆ, ಮಲ್ಪೆ ಪೋಲೀಸ್, ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು ತೀವೃ ನಿಗಾ ಇಟ್ಟು, ಬಂದರಿನೊಳಗೆ ಪ್ರವೇಶಿಸುವ ಪ್ರತಿಯೊಂದು ವಾಹನಗಳನ್ನೂ ತಪಾಸಣೆಗೊಳಪಡಿಸಿ ಮಕ್ಕಳು ಇಲ್ಲವೆನ್ನುವುದನ್ನು ಖಚಿತಪಡಿಸಿಕೊಳ್ಳಬೇಕು. ಬಂದರು ಪ್ರವೇಶಿಸುವ ಎಲ್ಲಾ ಗೇಟುಗಳಲ್ಲಿಯೂ ಸೆಕ್ಯೂರಿಟಿ ಗಾರ್ಡಗಳನ್ನು ನಿಯೋಜಿಸಬೇಕು ಹಾಗೂ ಹೆತ್ತವರು ತಮ್ಮ ಮಕ್ಕಳನ್ನು ಯಾವುದೇ ಕಾರಣಕ್ಕೂ ಮೀನುಗಾರಿಕಾ ಬೋಟುಗಳಲ್ಲಿ ಕಳುಹಿಸಬಾರದು ಎಂದು ಆದೇಶಿಸಿದ ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಜಿಲ್ಲಾಡಳಿತದ ಆದೇಶವನ್ನು ಧಿಕ್ಕರಿಸಿ ಮಕ್ಕಳನ್ನು ಬೋಟುಗಳಲ್ಲಿ ಕಳುಹಿಸಿದಲ್ಲಿ ಆ ಮಕ್ಕಳ ಹೆತ್ತವರ ಮೇಲೆ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಜಿಲ್ಲಾ ಸರ್ವೇಕ್ಷಣಾಧಿಕಾರಿ ವಾಸುದೇವ ಉಪಾಧ್ಯಾಯ, ಮೀನುಗಾರಿಕಾ ಇಲಾಖೆಯ ಜಂಟಿ ನಿರ್ದೇಶಕ ದಿನೇಶ್ ಕುಮಾರ್, ಮೀನುಗಾರಿಕಾ ಇಲಾಖೆಯ ಉಪ ನಿರ್ದೇಶಕ ಗಣೇಶ್.ಕೆ, ಮೀನುಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕ ಶಿವಕುಮಾರ್, ಮಲ್ಪೆ ಸಿ.ಎಸ್.ಪಿ ರಾಘವೇಂದ್ರ, ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು ಮತ್ತು ಮಲ್ಪೆ ವ್ಯಾಪ್ತಿಯ ಎಲ್ಲಾ ಸರಕಾರಿ ಶಾಲೆಗಳ ಮುಖ್ಯೋಪಾಧ್ಯಯರು ಮತ್ತಿತರರು ಉಪಸ್ಥಿತರಿದ್ದರು.