ನ್ಯೂಡೆಲ್ಲಿ: ಮೇ 3ರವರೆಗೂ ದೇಶಾದ್ಯಂತ ಲಾಕ್‌ಡೌನ್ ಮುಂದುವರಿಸಲಾಗುವುದು ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ತಿಳಿಸಿದ್ದಾರೆ.
ಇಂದು ಮಾತನಾಡಿದ ಅವರು, ಒಂದೂ ಹೊಸ ಪ್ರಕರಣ ಮೇ 3ರ ಒಳಗೆ ದಾಖಲಾಗದಿದ್ದರೆ ಮುಂಚಿತವಾಗಿಯೇ ಲಾಕ್‌ಡೌನ್‌ನ್ನು ತೆರವುಗೊಳಿಸಲಾಗುವುದು ಎಂದು ಹೇಳಿದ್ದಾರೆ.
ಇನ್ನು ಫ್ರತಿಯೊಬ್ಬರ ಆರೋಗ್ಯವು ಬಹುಳ ಮುಖ್ಯವಾಗಿದ್ದು ಅದಕ್ಕಾಗಿ ಎಲ್ಲರೂ ತಮ್ಮ ರಕ್ಷಣಗೆ ತಾವೇ ಮುಂದಾಗಬೇಕು ಎಂದು ಸಲಹೆ ನೀಡಿದ್ದಾರೆ. ಜತೆಗೆ ಏಳು ಸೂತ್ರಗಳನ್ನು ನೀಡಿದ್ದು ಅದನ್ನು ತಪ್ಪದೇ ಪಾಲಿಸಿ ಎಂದು ಮನವಿ ಮಾಡಿದ್ದಾರೆ.
ಕೊರೊನಾ ವಿರುದ್ಧ ಯುದ್ಧ ಮುಂದುವರಿಸುವುದು ಹೇಗೆ ಎಂಬ ಬಗ್ಗೆ ರಾಜ್ಯಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇವೆ. ಅಲ್ಲದೆ, ರಾಜ್ಯ ಸರ್ಕಾರಗಳು, ಸ್ಥಳೀಯಾಡಳಿತಗಳು ಉತ್ತಮವಾಗಿ ಕಾರ್ಯ ನಿರ್ವಹಿಸಿವೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಕೊರೊನಾ ಔಷಧ ಕಂಡು ಹಿಡಿಯುವ ನಿಟ್ಟಿನಲ್ಲಿ ಮುಂದಡಿ ಇಡುವಂತೆ ಭಾರತದ ಯುವ ವಿಜ್ಞಾನಿಗಳಲ್ಲಿ ಮನವಿ ಮಾಡಿಕೊಳ್ಳುತ್ತೇನೆ. ವಿಶ್ವ ಕಲ್ಯಾಣ, ಭಾರತ ಕಲ್ಯಾಣಕ್ಕೆ ಕೈಜೋಡಿಸಿ ಕೊರೊನಾ ವಿರುದ್ಧ ಗೆಲುವು ಸಾಧಿಸೋಣ. ವಯೋವೃದ್ಧರ ಮೇಲೆ ನಿಗಾ ಇರಿಸಿ, ಅನಾರೋಗ್ಯ ಪೀಡಿತರ ಬಗ್ಗೆ ಹೆಚ್ಚಿನ ಗಮನ ಇರಲಿ ಎಂದು ಸೂಚನೆ ನೀಡಿದ್ದಾರೆ.
ಲಾಕ್’ಡೌನ್ ಸಾಮಾಜಿಕ ಅಂತರ ಪಾಲಿಸಿ, ಮನೆಯಲ್ಲೇ ತಯಾರಿಸಿದ ಮಾಸ್ಕ್ ಧರಿಸಿ. ನಿಮ್ಮ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಆಯುಷ್ ಸಚಿವಾಲಯದ ಸೂಚನೆಗಳನ್ನು ಪಾಲನೆ ಮಾಡಿ. ಕೊರೊನಾ ವೈರಸ್ ಸೋಂಕು ಹರಡದಂತೆ ತಡೆಯಲು ಹೊರ ತಂದಿರುವ ಆರೋಗ್ಯ ಸೇತು ಆ್ಯಪ್ ಡೌನ್ಲೋಡ್ ಮಾಡಿ ಬಳಕೆ, ಮಾಡಿ. ಇತರರಿಗೂ ಈ ಬಗ್ಗೆ ಮಾಹಿತಿ ನೀಡಿ ಎಂದು ಮನವಿ ಮಾಡಿಕೊಂಡಿದ್ದಾರೆ.
ಕೊರೋನಾ ಹಾಟ್ ಸ್ಪಾಟ್ ಆಗಿ ಪರಿಣಮಿಸಿರುವ ಪ್ರದೇಶಗಳನ್ನು ಗುರುತಿಸಿ ಕಠೋರ ಕ್ರಮಗಳನ್ನು ಕೈಗೊಳ್ಳಬೇಕಿದೆ. ಹಾಟ್’ಸ್ಪಾಟ್ ಗಳಲ್ಲಿ ಈ ಹಿಂದಿನದ್ದಿಕ್ಕಿಂತಲೂ ಹೆಚ್ಚಿನ ಗಮನವಹಿಸಿ, ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತದೆ. ಈ ಕುರಿತು ಏಪ್ರಿಲ್ 20 ರವರೆಗೂ ಪರಿಶೀಲನೆ ನಡೆಸಲಾಗುವುದು. ಹಾಟ್ ಸ್ಪಾಟ್ ಗಳಲ್ಲಿ ಪರಿಸ್ಥಿತಿ ಬದಲಾಗದಿದ್ದರೆ, ಎಲ್ಲವೂ ಕೈಮೀರಲಿದೆ ಎಂದು ಆತಂಕವನ್ನು ವ್ಯಕ್ತಪಡಿಸಿದ್ದಾರೆ.
ಮೇ 3 ರವರೆಗೂ (19 ದಿನಗಳ) ಲಾಕ್’ಡೌನ್ ಕುರಿತಂತೆ ಏಪ್ರಿಲ್ 15 ರಂದು ಕೇಂದ್ರ ಸರ್ಕಾರದಿಂದ ಮಾರ್ಗಸೂಚಿ ಪ್ರಕಟವಾಗಲಿದೆ. ಕೃಷಿ, ಕಾರ್ಮಿಕರಿಗೆ, ದಿನಗೂಲಿ ನೌಕರರಿಗೆ ಹೊಸ ಮಾರ್ಗಸೂಚಿ ಅನ್ವಯ ವಿನಾಯಿತಿ ನೀಡಲಾಗುತ್ತದೆ ಎಂದು ಮೋದಿ ತಿಳಿಸಿದ್ದಾರೆ.