ಬೆಂಗಳೂರು: ಕರ್ನಾಟಕದಲ್ಲಿ ಕೊರೊನಾ ವೈರಾಣು-19 ವ್ಯಾಪಿಸುವುದನ್ನು ತಡೆಗಟ್ಟಲು ಲಾಕ್‍ಡೌನ್ ಅವಧಿಯನ್ನು ಮೇ 3 ರವರೆಗೆ ಯಥಾಸ್ಥಿತಿಯಲ್ಲಿ ಮುಂದುವರಿಸಲು ರಾಜ್ಯ ಸಚಿವ ಸಂಪುಟ ತೀರ್ಮಾನಿಸಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ. ಮಾಧು ಸ್ವಾಮಿ ಹೇಳಿದರು.
ವಿಧಾನ ಸೌಧದ ಸಮ್ಮೇಳನ ಸಭಾಂಗಣದಲ್ಲಿ ಮೂರನೇ ಬಾರಿಗೆ ನಡೆದ ಹ್ಯಾಟ್ರಿಕ್ ಸಚಿವ ಸಂಪುಟ ಸಭೆಯ ನಂತರ ಅದೇ ಸ್ಥಳದಲ್ಲಿ ಸೋಮವಾರ ನಡೆದ ಪತ್ರಿಕಾಗೋಷ್ಠಿ ಮಾತನಾಡಿದರು.
ಲಾಕ್ ಡೌನ್ ಅನುಷ್ಠಾನದಲ್ಲಿ ಸದ್ಯಕ್ಕೆ ಯಾವುದೇ ಸಡಿಲಿಕೆ ಇಲ್ಲ. ಆದರೆ, ಕೇಂದ್ರ ಸರ್ಕಾರದ ಮಾರ್ಗಸೂಚಿ ಏನಾದರೂ ಬಂದಲ್ಲಿ ಮುಖ್ಯಮಂತ್ರಿಯವರು, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಹಾಗೂ ಕಾರ್ಯಪಡೆಯ ಸದಸ್ಯರೊಂದಿಗೆ ಚರ್ಚಿಸಿ ಅದರಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಕೊರೊನಾಕ್ಕೆ ಸಂಬಂಧಿಸಿದಂತೆ ಕೇರಳ ಮತ್ತು ಉತ್ತರ ಪ್ರದೇಶದ ಸರ್ಕಾರಗಳು ಕೈಗೊಂಡಿರುವ ಮಾದರಿಯಲ್ಲಿಯೇ ರಾಜ್ಯದಲ್ಲಿಯೂ ಕೂಡಾ ಕ್ರಮ ವಹಿಸಲು ಕರ್ನಾಟಕ ಸಾಂಕ್ರಾಮಿಕ ರೋಗಗಳ ಕಾಯ್ದೆ ಸುಗ್ರೀವಾಜ್ಞೆ ಮೂಲಕ ತಿದ್ದುಪಡಿ ತರಲು ಸಚಿವ ಸಂಪುಟದಲ್ಲಿ ತೀರ್ಮಾನಿಲಾಗಿದೆ. ಉದ್ದೇಶಿತ ತಿದ್ದುಪಡಿಯಂತೆ ಸರ್ಕಾರದ ಸೂಚನೆಯಂತೆ ಯಾರು ಕಾರ್ಯ ನಿರ್ವಹಿಸುವುದಿಲ್ಲವೋ ಅದು ಶಿಕ್ಷಾರ್ಹ ಅಪರಾಧವಾಗುತ್ತದೆ. ಅಲ್ಲದೆ, ಉದ್ದೇಶ ಪೂರ್ವಕವಾಗಿ ಈ ರೋಗವನ್ನು ಹರಡಿಸಲು ಪ್ರಯತ್ನ ಪಟ್ಟರೆ ಅದೂ ಕೂಡಾ ಶಿಕ್ಷಾರ್ಹ ಅಪರಾಧವೇ ಎಂದು ಪರಿಗಣಿಸಲಾಗುತ್ತದೆ. ಅಂತೆಯೇ, ವದಂತಿ ಸೃಷ್ಠಿಸುವುದು ಹಾಗೂ ಸುಳ್ಳು ಸುದ್ದಿ ಹಬ್ಬಿಸುವವರನ್ನೂ ಅಪರಾಧಿಗಳೆಂದು ಪರಿಗಣಿಸಿ ಅಂತಹವರ ವಿರುದ್ಧ ಕಠಿಣ ಕ್ರಮ ಜರುಗಿಸಲು ಅವಕಾಶವಿದೆ ಎಂದು ಸಚಿವರು ತಿಳಿಸಿದರು.
ಮೈಸೂರು ಮಿನರಲ್ಸ್‍ನ ಜಾಗ ಕಂದಾಯ ಇಲಾಖೆಯದ್ದು
ಮೈಸೂರು ಮಿನರಲ್ಸ್ ಲಿಮಿಟೆಡ್‍ಗೆ ಸೇರಿದ ಜಾಗವು ಕಂದಾಯ ಇಲಾಖೆಗೆ ಸೇರಿದ್ದೋ ಅಥವಾ ಅರಣ್ಯ ಇಲಾಖೆಗೆ ಸೇರಿದ್ದೋ ಎಂಬ ಬಗ್ಗೆ ಭಾರತದ ಸವೋಚ್ಚ ನ್ಯಾಯಾಲಯದಲ್ಲಿ ಹೂಡಲಾದ ದಾವೆಯು ಇತ್ಯರ್ಥವಾಗಿ, ಈ ಜಾಗವು ಕಂದಾಯ ಇಲಾಖೆಗೆ ಸೇರಿದ್ದು ಎಂದು ಅಂತಿಮವಾಗಿ ತೀರ್ಪು ಪ್ರಕಟವಾಗಿರುವ ಹಿನ್ನೆಲೆಯಲ್ಲಿ ರಾಜ್ಯ ಸಚಿವ ಸಂಪುಟವು ನ್ಯಾಯಾಲಯದ ತೀರ್ಪನ್ನು ಅಂಗೀಕರಿಸಿದೆ.
ನಿಗಮ-ಮಂಡಳಿ ನೌಕರರು ಸರ್ಕಾರಿ ನೌಕರರಲ್ಲ !
ನಿಗಮ ಹಾಗೂ ಮಂಡಳಿಗಳಲ್ಲಿ ನಿಯೋಜನೆಯ ಮೇರೆಗೆ ತೆರಳುತ್ತಿದ್ದ ವಿವಿಧ ಇಲಾಖೆಗಳ ಅಧಿಕಾರಿ ಹಾಗೂ ನೌಕರರು ತಮ್ಮನ್ನು ಅಲ್ಲಿಯೇ ಕಾಯಂಗೊಳಿಸುವಂತೆ ನ್ಯಾಯಾಲಯಗಳಲ್ಲಿ ಮೊಕದ್ದಮೆಗಳನ್ನು ದಾಖಲಿಸುವ ಪ್ರಕರಣಗಳಲ್ಲಿ ತೀವ್ರ ಏರಿಕೆ ಕಂಡು ಬಂದ ಹಿನ್ನೆಲೆಯಲ್ಲಿ ಕರ್ನಾಟಕ ನಾಗರೀಕ ಸೇವೆಗಳ ನಿಯಮಾವಳಿಗಳಿಗೆ ತಿದ್ದುಪಡಿ ತರಲು ಸಂಪುಟ ತೀರ್ಮಾನಿಸಿದೆ. ಅದರಂತೆ, ಇನ್ನು ಮುಂದೆ ನಿಗಮ-ಮಂಡಳಿ ನೌಕರರನ್ನು ಸರ್ಕಾರಿ ನೌಕರರು ಎಂದು ಪರಿಗಣಿಸಲಾಗುವುದಿಲ್ಲ. ಇದಕ್ಕೆ ಸಂಬಂಧಿಸಿದಂತೆ ಸುಗ್ರೀವಾಜ್ಞೆ ತರಲು ಸಂಪುಟ ಸಮ್ಮತಿಸಿದೆ.