ಬೆಂಗಳೂರು: ಮಾರಕ ಕೊರೊನಾ ರೋಗದ ಪರಿಹಾರಕಾರ್ಯಕ್ಕಾಗಿ ಪ್ರಧಾನಮಂತ್ರಿ ತುರ್ತು ಪರಿಹಾರ ನಿಧಿಗೆ ದೇಣಿಗೆ ನೀಡುವಂತೆ ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಡಿ.ವಿ. ಸದಾನಂದ ಗೌಡ ಅವರು ಮಾಡಿಕೊಂಡ ಮನವಿಗೆ (ಕಳೆದ ವಾರ ಪತ್ರ ಬರೆದಿದ್ದರು) ಉದ್ಯಮಗಳು ಉತ್ತಮ ಸ್ಪಂದನೆ ನೀಡಿವೆ.
ಔಷಧೋದ್ಯಮಗಳು, ರಾಸಾಯನಿಕ ಹಾಗೂ ರಸಗೊಬ್ಬರ ಕಂಪನಿಗಳು ಉದಾರವಾಗಿ ದೇಣಿಗೆ ನೀಡಿದ್ದು, ಇಂದಿನವರೆಗೆ ಒಟ್ಟು 136.52 ಕೋಟಿ ರೂಪಾಯಿ ನೆರವು ಸಂಗ್ರಹವಾಗಿದೆ. ರಾಸಾಯನಿಕ ಮತ್ತು ರಸಗೊಬ್ಬರ ಇಲಾಖೆಯಡಿ ಬರುವ ಹಲವು ಸಾರ್ವಜನಿಕ ಉದ್ದಿಮೆಗಳ ನೌಕರರೂ ಒಂದು ದಿನದ ಸಂಬಳ ನೀಡಿದ್ದಾರೆ.
ಸಚಿವರು ನಿನ್ನೆ ದೆಹಲಿಯಲ್ಲಿ ಕೊರೊನಾ ಪರಿಹಾರ ಕ್ರಮಗಳ ಬಗ್ಗೆ ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರ ಅಧ್ಯಕ್ಷತೆಯಲ್ಲಿ ನಡೆದ ಹಿರಿಯ ಸಚಿವರ ಸಭೆಯಲ್ಲಿ ಪಾಲ್ಗೊಂಡು ತಮ್ಮ ಅಭಿಪ್ರಾಯ ಮಂಡಿಸಿದ್ದಾರೆಂದು ತಿಳಿಸಿ, ಪ್ರಧಾನಿ ಸೂಚನೆ ಮೇರೆಗೆ ಕಳೆದೆರಡು ವಾರಗಳಿಂದ ದೆಹಲಿಯಲ್ಲಿಯೇ ಇರುವ ಸಚಿವರು ರಸಗೊಬ್ಬರ ಹಾಗೂ ಜನೌ಼ಷಧಿಲಭ್ಯತೆ, ಸರಬರಾಜು ಸುಸೂತ್ರವಾಗಿರುವಂತೆ ನೋಡಿಕೊಳ್ಳುತ್ತಿದ್ದಾರೆ. (ರಸಗೊಬ್ಬರವನ್ನು ಅಗತ್ಯ ವಸ್ತುಗಳ ಪಟ್ಟಿಗೆ ಸೇರಿಸಿದ್ದನ್ನು ಇಲ್ಲಿ ಸ್ಮರಿಸಬಹುದು). ಹಾಗೆಯೇ ಅವರಿಗೆ ಕೊರೋನಾಕ್ಕೆ ಸಂಬಂಧಿಸಿದಂತೆ ಕೇರಳ ಮತ್ತು ಲಕ್ಷದ್ವೀಪದ ಸಂಯೋಜನಾ ಜವಾಬ್ಧಾರಿ ನೀಡಲಾಗಿದೆ.
ಸದಾನಂದಗೌಡ ಅವರು ಪ್ರತಿನಿಧಿಸುವ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಕೊರೊನಾ ಸಂಬಂಧಿತ ಪರಿಹಾರ ಕಾರ್ಯಗಳು ಭರದಿಂದ ನಡೆದಿವೆ. ಕೇಂದ್ರ ಸಚಿವರು ಪ್ರತಿನಿತ್ಯವೂ ಕ್ಷೇತ್ರದ ಸಚಿವರು, ಶಾಸಕರು, ಜಿಲ್ಲಾಧ್ಯಕ್ಷರು, ಮಂಡಳಿ ಅಧ್ಯಕ್ಷರು ಹಾಗೂ ಪ್ರಮುಖ ನಾಯಕರ ಜೊತೆ ದೂರವಾಣಿಯಲ್ಲಿ ಮಾತನಾಡಿ ಅಗತ್ಯ ಸಲಹೆ-ಸೂಚನೆಗಳನ್ನು ನೀಡುತ್ತಿದ್ದಾರೆ.
ಪ್ರತಿ ದಿನ ಒಂದು ಲಕ್ಷಕ್ಕಿಂತ ಹೆಚ್ಚುಬಡವರು, ದಿನಗೂಲಿಗಳು, ಲಾಕ್ಡೌನ್ನಿಂದ ತೊಂದರೆಗೊಳಗಾದ ವಲಸಿಗರಿಗೆ ಊಟ ನೀಡಲಾಗುತ್ತಿದೆ. ಕಳೆದ ಮೂರು ದಿನಗಳಲ್ಲಿ 1.5 ಲಕ್ಷ ಕುಟುಂಬಗಳಿಗೆ ಆಹಾರ ದಿನಸಿ ಸೇರಿದಂತೆ ಜೀವನಾವಶ್ಯಕ ವಸ್ತುಗಳನ್ನು ವಿತರಿಸಲಾಗಿದೆ.
ಎಲ್ಲ 8 ವಿಧಾನ ಸಭಾಕ್ಷೇತ್ರಗಳು, ವಾರ್ಡುಗಳು, ಪಕ್ಷದ ಮಂಡಳಿ ಹಾಗೂ ಶಕ್ತಿ ಕೇಂದ್ರದ ಹಂತದದಲ್ಲಿ ಕಾರ್ಯದಳಗಳನ್ನು ರಚಿಸಿ ಪರಿಹಾರ ಕೈಗೊಳ್ಳಲಾಗಿದೆ. ಪ್ರತಿ ವಾರ್ಡಿನಲ್ಲಿಯೂ ಸಹಾಯವಾಣಿ ಸ್ಥಾಪಿಸಲಾಗಿದ್ದು ಅಗತ್ಯ ಇದ್ದವರಿಗೆಲ್ಲ ಆಹಾರ, ಔಷಧಿ ಮತ್ತಿತರ ಸಾಮಗ್ರಿಗಳನ್ನು ನಮ್ಮ ಕಾರ್ಯಕರ್ತರು ಪೂರೈಸುತ್ತಿದ್ದಾರೆ. ಸ್ವಯಂ ಸೇವಕರೂ ದೊಡ್ಡಮಟ್ಟದಲ್ಲಿ ಪರಿಹಾರ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ.
ಯಾರಿಗೇ ನೆರವಿನ ಅಗತ್ಯವಿದ್ದರೂ ತಕ್ಷಣವೇ ಸ್ಪಂದಿಸಲಾಗುತ್ತಿದೆ. ಇಂದು ಮಹಾದೇವಪುರ ವಿಧಾನಸಭಾಕ್ಷೇತ್ರ ವ್ಯಾಪ್ತಿಯಲ್ಲಿ “ಕೆಲವು ದಿನಗೂಲಿ ಯುವಕರು ತೊಂದರೆಯಲ್ಲಿದ್ದಾರೆ, ಅವರಿಗೆ ಸಹಾಯಮಾಡಿ” ಎಂದು ಒರಿಸ್ಸಾದ ಶಾಸಕರೊಬ್ಬರು ಸದಾನಂದಗೌಡರನ್ನು ಕೋರಿದ್ದರು. ಇದನ್ನು ಪಕ್ಷದ ಹಿರಿಯ ನಾಯಕ ಹಾಗೂ ಕ್ಷೇತ್ರದ ಶಾಸಕ ಅರವಿಂದ ಲಿಂಬಾವಳಿ ಅವರ ಗಮನಕ್ಕೆ ತಂದು ತೊಂದರೆಯಲ್ಲಿರುವ ಕಾರ್ಮಿಕರಿಗೆ ದಿನಸಿ ಮತ್ತಿತರ ಜೀವನಾವಶ್ಯಕ ವಸ್ತುಗಳನ್ನು ತಲುಪಿಸಲಾಗುವುದೆಂದು ಸದಾನಂದ ಗೌಡ ತಿಳಿಸಿದ್ದಾರೆ.