ಬೆಂಗಳೂರು: ರೈತರಿಂದ ನೇರವಾಗಿ ಹಣ್ಣು, ತರಕಾರಿ ಮಾರಾಟ ಮಾಡಲು ಕೆ.ಎಂ.ಎಫ್. ಮಳಿಗೆಗಳ ಹತ್ತಿರ ಸ್ಥಳಾವಕಾಶ ಎಂದು ತೋಟಗಾರಿಕೆ ಇಲಾಖೆಯ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಉಪ ನಿರ್ದೇಶಕ ಮಹಾಂತೇಶ್ ಮುರುಗೋಡ್ ತಿಳಿಸಿದ್ದಾರೆ.
ಕೋವಿಡ್-19 ಸೋಂಕು ತಡೆಯಲು ಲಾಕ್ ಡೌನ್ ಜಾರಿಯಿರುವುದರಿಂದ ರೈತರು ಬೆಳೆದ ಹಣ್ಣು, ತರಕಾರಿಗಳಿಗೆ ಸೂಕ್ತ ಮಾರುಕಟ್ಟೆ ಇಲ್ಲದ ಕಾರಣ ಹಣ್ಣು, ತರಕಾರಿಗಳು ಕಡಿಮೆ ಬೆಲೆಗೆ ಮಾರಾಟವಾಗುತ್ತಿದೆ.
ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳಿ ನಿಯಮಿತ (ಕೆ.ಎಂ.ಎಫ್.) ಸಂಸ್ಥೆ ಬೆಂಗಳೂರು ಹಾಗೂ ಇತರೆ ಜಿಲ್ಲಾ ಕೇಂದ್ರಗಳ ಮಾರಾಟ ಮಳಿಗೆಗಳಲ್ಲಿ ರೈತರು ನೇರವಾಗಿ ಅವರ ಉತ್ಪನ್ನಗಳಾದ ಹಣ್ಣು, ತರಕಾರಿಗಳನ್ನು ಮಾರಾಟ ಮಾಡಲು ಅವಕಾಶ ಕಲ್ಪಿಸಿದರೆ ಉತ್ತಮ ಬೆಲೆ ದೊರಕುತ್ತದೆ. ಆದ್ದರಿಂದ ಹಣ್ಣು, ತರಕಾರಿಗಳನ್ನು ಮಾರಾಟ ಮಾಡಲು ಅವಕಾಶ ನೀಡುವಂತೆ ತೋಟಗಾರಿಕೆ ಇಲಾಖೆಯಿಂದ ಮನವಿ ಮಾಡಲಾಗಿತ್ತು ಎಂದು ಹೇಳಿದರು.
ಕೆ.ಎಂ.ಎಫ್. ಅಧ್ಯಕ್ಷರ ಅಧ್ಯಕ್ಷತೆಯಲ್ಲಿ ಇತ್ತಿಚೆಗೆ ಜರುಗಿದ ಸಭೆಯಲ್ಲಿ ಕೋವಿಡ್-19 ರ ತುರ್ತು ಪರಿಸ್ಥಿತಿಯಲ್ಲಿ ರೈತರು ಬೆಳೆದ ಹಣ್ಣು, ತರಕಾರಿಗಳನ್ನು ಮಾರಾಟ ಮಾಡಲು ನಂದಿನಿ ಮಳಿಗೆ/ ಶಾಪಿ/ ಪಾರ್ಲರ್/ ಪ್ರಾಂಚೈಸಿಗಳಲ್ಲಿ ಸ್ಥಳಾವಕಾಶ ಮಾಡಿಕೊಡಲು ಸಹಮತ ವ್ಯಕ್ತವಾದ ಹಿನ್ನೆಲೆ, ರೈತರು ತಮ್ಮ ಹಣ್ಣು ಮತ್ತು ತರಕಾರಿಗಳನ್ನು ಕರ್ನಾಟಕ ರಾಜ್ಯಾದ್ಯಂತ ಇರುವ ಕೆ.ಎಂ.ಎಫ್ ನ ಎಲ್ಲಾ 14 ಜಿಲ್ಲಾ ಹಾಲು ಒಕ್ಕೂಟಗಳ 1500ಕ್ಕೂ ಹೆಚ್ಚು ನಂದಿನಿ ಮಳಿಗೆ/ ಶಾಪಿ/ ಪಾರ್ಲರ್/ ಪ್ರಾಂಚೈಸಿಗಳ ಮುಂದೆ ಮಾರಾಟ ಮಾಡಲು ಅವಕಾಶ ಕಲ್ಪಿಸಲಾಗಿದೆ ಎಂದರು.
ಹಣ್ಣು, ತರಕಾರಿಗಳನ್ನು ಮಾರಾಟ ಮಾಡಲು ಬರುವ ರೈತರಿಗೆ ಕೆ.ಎಂ.ಎಫ್. ಹಾಗೂ ಒಕ್ಕೂಟಗಳ ವತಿಯಿಂದ ಉಚಿತವಾಗಿ ದಿನವಹಿ, ಕುಡಿಯುವ ನೀರು, ಮಜ್ಜಿಗೆ, ಸ್ಯಾನಿಟೈಜರ್, ಕೈಗವಚ ಮತ್ತು ಮಾಸ್ಕ್ ಗಳನ್ನು ಒದಗಿಸಲಾಗುವುದು ಎಂದು ತಿಳಿಸಿದರು.