ಮೈಸೂರು: ಖಾಸಗಿ ಬ್ಯಾಂಕುಗಳು ಹಾಗೂ ಲೇವಾದೇವಿದಾರರು ನೀಡಿರುವ ಸಾಲವನ್ನು ಮರುಪಾವತಿ ಮಾಡುವಂತೆ ಒತ್ತಾಯಿಸಿದರೆ ಸರ್ಕಾರದ ಗಮನಕ್ಕೆ ತರಬೇಕೆಂದು ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ತಿಳಿಸಿದರು.
ತಿ.ನರಸೀಪುರ ತಾಲೂಕಿನಲ್ಲಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳೊಂದಿಗೆ ಸಭೆ ನಡೆಸಿ ಮಾತನಾಡಿದ ಅವರು, ಮೂರು ತಿಂಗಳ ವರೆಗೆ ಸಾಲವನ್ನು ಯಾರೂ ಮರುಪಾವತಿಸುವಂತೆ ಒತ್ತಾಯಿಸಬಾರದೆಂದು ಸರ್ಕಾರ ಆದೇಶಿಸಿದೆ. ಈ ನಿಟ್ಟಿನಲ್ಲಿ ಸರ್ಕಾರದ ಆದೇಶ ಉಲ್ಲಂಘಿಸಿದವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ರೈತರು ಸಹಕಾರ ಬ್ಯಾಂಕುಗಳಲ್ಲಿ ಪಡೆದಿರುವ ಸಾಲವನ್ನು ಮನ್ನಮಾಡಲಾಗಿದೆ. ಇನ್ನೂ ಕೆಲವು ರೈತರ ಸಾಲ ಮನ್ನ ಆಗಬೇಕಿದೆ. ಆದಾಯ ತೆರೆಗೆ ಪಾವತಿಸುವ ರೈತರ ಸಾಲವನ್ನು ಮನ್ನ ಮಾಡಿಲ್ಲ ಎಂದು ಹೇಳಿದರು.
ಲಾಕ್‍ಡೌನ್ ಕ್ರಮದಿಂದಾಗಿ ತಾಲ್ಲೂಕು ಗಡಿಭಾಗಗಳಲ್ಲಿ ವಾಸಿಸುವ ರೈತರು ಕೃಷಿಕಾರ್ಯಕ್ಕಾಗಿ ತೋಟದ ಬಳಿ ತೆರಳಲು ಸಮಸ್ಯೆ ಉಂಟಾಗಿದೆ. ಇದು ಇಡೀ ರಾಜ್ಯದಲ್ಲೇ ಸಮಸ್ಯೆ ಎದುರಾಗಿದ್ದು ಈಗಾಗಲೇ ಗೃಹ ಸಚಿವರ ಜೊತೆ ಮಾತನಾಡಿ ರೈತರಿಗೆ ಅನುಕೂಲವಾಗುವಂತೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ತಿಳಿಸಲಾಗಿದೆ ಎಂದರು.
ಜಿಲ್ಲೆಯ ರೈತರು ತಾವು ಬೆಳೆದ ಹಣ್ಣು, ತರಕಾರಿಗಳನ್ನು ಸರಾಗವಾಗಿ ಮಾರುಕಟ್ಟೆಗೆ ತಲುಪಿಸಲು ಆತಂಕ ಪಡುವ ಅಗತ್ಯವಿಲ್ಲ. ಈ ಸಂಬಂಧ ಅಧಿಕಾರಿಗಳ ಜೊತೆ ಮಾತನಾಡಿ ರೈತರಿಗೆ ತೊಂದರೆ ಉಂಟಾಗದಂತೆ ಕ್ರಮಕೈಗೊಳ್ಳಲಾಗಿದೆ ಎಂದು ಭರವಸೆ ನೀಡಿದರು.
ಶಾಸಕರಾದ ಅಶ್ವಿನ್ ಕುಮಾರ್, ನಿರಂಜನ್ ಕುಮಾರ್, ಜಿಲ್ಲಾಧಿಕಾರಿ ಅಭಿರಾಮ್.ಜಿ.ಶಂಕರ್, ಜಿಲ್ಲಾ ಪಂಚಾಯ್ ಸಿಇಓ ಪ್ರಶಾಂತ್ ಕುಮಾರ್ ಮಿಶ್ರ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ.ವಿ.ಸ್ನೇಹ ಇತರರು ಉಪಸ್ಥಿತರಿದ್ದರು.