ಹಾವೇರಿ: ಹಸಿರು ವಲಯದಲ್ಲಿರುವ ಹಾವೇರಿ ಜಿಲ್ಲೆಯಲ್ಲಿ ಆಯ್ದ ಆರ್ಥಿಕ ಚಟುವಟಿಕೆಗೆ ಅನುಮತಿ ನೀಡಲಾಗಿದೆ. ಬಟ್ಟೆ-ಬಂಗಾರ ಮಾರಾಟದ ಅಂಗಡಿಗಳಿಗೆ ಷರತ್ತುಬದ್ಧ ಅನುಮತಿ ನೀಡಲಾಗಿದೆ. ಈ ಸಂದರ್ಭದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲಾಗಿದೆಯೇ ಹಾಗೂ ನಿಯಮ ಪಾಲಿಸಲಾಗತ್ತಿದೆಯೇ ಎಂಬುದನ್ನು ಪರಿಶೀಲಿಸಲು ಜಿಲ್ಲಾ ಪೊಲೀಸ್ ಹಾಗೂ ಕಂದಾಯ ಅಧಿಕಾರಿಗಳು ನಗರ ಸಂಚಾರ ಕೈಗೊಂಡು ಜಾಗೃತಿ ಮೂಡಿಸಿದರು.
ಎಸ್‌ಪಿ ಕೆ.ಜಿ.ದೇವರಾಜ, ಅಪರ ಜಿಲ್ಲಾಧಿಕಾರಿ ಎಸ್. ಯೋಗೇಶ್ವರ ಹಾಗೂ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಡಿ.ವೈ.ಎಸ್.ಪಿ. ವಿಜಯಕುಮಾರ ಸಂತೋಷ್, ಪೌರಾಯುಕ್ತ ಬಸವರಾಜ ಜಿದ್ದಿ ಅವರು ಹಾವೇರಿ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಪರಿಶೀಲನೆ ನಡೆಸಿದರು.
ಆಯ್ದ 18 ಬಗೆಯ ವ್ಯವಹಾರ ಹಾಗೂ ಸೇವೆಗಳು ಹೊರತುಪಡಿಸಿ ವಿವಿಧ ವಾಣಿಜ್ಯ ಚಟುವಟಿಕೆಗಳಿಗೆ ಅನುಮತಿ ನೀಡಲಾಗಿದೆ. ಈ ಪೈಕಿ ಬಟ್ಟೆ ಅಂಗಡಿ, ಬಂಗಾರ ಹಾಗೂ ಬೆಳ್ಳಿ ಅಂಗಡಿಯ ವಹಿವಾಟಿಗೆ ಮಧ್ಯಾಹ್ನ 2 ರಿಂದ ರಾತ್ರಿ 8ರವರೆಗೆ, ಉಳಿದ ಅಂಗಡಿಗೆ ಬೆಳಿಗ್ಗೆ ರಾತ್ರಿ 9ರವರೆಗೆ ಅವಕಾಶ ಕಲ್ಪಿಸಲಾಗಿದೆ.
ಸರ್ಕಾರದ ಮಾರ್ಗಸೂಚಿಯಂತೆ ಕೇವಲ ಶೇ.50ರಷ್ಟು ಕೆಲಸಗಾರರ ಬಳಕೆ, ಕಾರ್ಮಿಕರಿಗೆ ಮಾಸ್ಕ್, ಸ್ಯಾನಿಟೈಜರ್ ನೀಡುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಮೂಲಕ ಕೋವಿಡ್ ಸೋಂಕು ಹರಡದಂತೆ ಮುನ್ನೆಚ್ಚರಿಕೆ ವಹಿಸಲು ಷರತ್ತು ವಿಧಿಸಲಾಗಿದೆ. ಈ ಷರತ್ತುಗಳ ಪಾಲನೆ, ವಾಣಿಜ್ಯ ಚಟುವಟಿಕೆಗಳ ಆರಂಭ ಕುರಿತಂತೆ ಪರಿಶೀಲನೆ ನಡೆಸಿದರು.