ನ್ಯೂಡಲ್ಲಿ: ಒಡಿಶಾದಲ್ಲಿ ಬಾಲಸೋರ್ ಜಿಲ್ಲೆಯಲ್ಲಿ ನಡೆದ ಭೀಕರ ರೈಲು ಅಪಘಾತದಿಂದಾಗಿ 300ಕ್ಕೂ ಮಂದಿ ಮೃತಪಟ್ಟಿದ್ದು, 900 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಈ ಹಿನ್ನೆಲೆ ಪಿಎಂಎನ್‌ಆರ್‌ಎಫ್, ತಮಿಳುನಾಡು ಸರ್ಕಾರ ಹಾಗೂ ರೈಲ್ವೇ ಇಲಾಖೆ ಘಟನೆಗೆ ಸಂತಾಪ ಸೂಚಿಸಿ ಮೃತರಿಗೆ ಹಾಗೂ ಗಾಯಾಳುಗಳಿಗೆ ಪರಿಹಾರ ಘೋಷಿಸಿದೆ.
ರೈಲು ದುರಂತಕ್ಕೆ ಪ್ರಧಾನಮಂತ್ರಿಗಳ ರಾಷ್ಟ್ರೀಯ ಪರಿಹಾರ ನಿಧಿಯಿಂದ (PMNRF) ಮೃತರ ಕುಟುಂಬಕ್ಕೆ ತಲಾ 2ಲಕ್ಷರೂ. ಹಾಗು ಗಾಯಗೊಂಡವರಿಗೆ ತಲಾ 50 ಸಾವಿರ ರೂಪಾಯಿ ಪರಿಹಾರ ಘೋಷಿಸಲಾಗಿದೆ.
ಇನ್ನು ರೈಲ್ವೇ ಸಚಿವಾಲಯವು ಕೂಡ ಮೃತರ ಕುಟುಂಬಕ್ಕೆ ತಲಾ 10 ಲಕ್ಷ ರೂ., ಗಂಭೀರ ಗಾಯಗೊಂಡವರಿಗೆ 2 ಲಕ್ಷ ರೂ. ಹಾಗೂ ಅಲ್ಪ ಪ್ರಮಾಣದಲ್ಲಿ ಗಾಯಗೊಂಡವರಿಗೆ 50,000 ರೂ. ಪರಿಹಾರವನ್ನು ಘೋಷಿಸಿದೆ. ಈ ಕುರಿತು ಕೇಂದ್ರ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್, ಗಾಯಾಳುಗಳು ಶೀಘ್ರವಾಗಿ ಗುಣಮುಖರಾಗಲಿ ಎಂದು ಪ್ರಾರ್ಥಿಸಿ ಮೃತರ ಕುಟುಂಬಕ್ಕೆ ಸಂತಾಪವನ್ನು ಸೂಚಿಸಿದ್ದಾರೆ.
ಶನಿವಾರ ಮುಂಜಾನೆ ಅಪಘಾತ ಸ್ಥಳಕ್ಕೆ ಭೇಟಿ ನೀಡಿದ ಅವರು, ಅಪಘಾತದ ಬಗ್ಗೆ ವಿವರವಾದ ಉನ್ನತ ಮಟ್ಟದ ತನಿಖೆಗೆ ಆದೇಶಿಸಿದ್ದಾರೆ.
ಹಾಗೆಯೇ ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಬಾಲಸೋರ್ ಜಿಲ್ಲಾ ಆಸ್ಪತ್ರೆಗೆ ಆಗಮಿಸಿ ರೈಲು ಅಪಘಾತದಲ್ಲಿ ಗಾಯಗೊಂಡವರನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿದ್ದು, ಒಡಿಶಾದಲ್ಲಿ ಇಂದು (ಶನಿವಾರ) ಶೋಕಾಚರಣೆಯನ್ನು ಘೋಷಿಸಿದ್ದಾರೆ.
ಅಂತೆಯೇ ತಮಿಳುನಾಡು ಸರ್ಕಾರ ಕೂಡ ಅಪಘಾತಕ್ಕೀಡಾದ ತಮಿಳುನಾಡಿನ ಜನರಿಗೆ ಪರಿಹಾರ ನೀಡುವುದಾಗಿ ಘೋಷಣೆ ಮಾಡಿದೆ. ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ದುರ್ಘಟನೆಯಲ್ಲಿ ಮಡಿದವರಿಗೆ ಸಂತಾಪ ವ್ಯಕ್ತಪಡಿಸಿದ್ದು, ತಮಿಳುನಾಡು ಮೂಲದ ಮೃತರ ಕುಟುಂಬಕ್ಕೆ ತಲಾ 5 ಲಕ್ಷ ರೂ. ಹಾಗೂ ಗಾಯಾಳುಗಳಿಗೆ ತಲಾ 1 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ.
ದುರಂತಕ್ಕೆ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಅನೇಕ ಗಣ್ಯರು ವಿಷಾದ ವ್ಯಕ್ತಪಡಿಸಿದ್ದಾರೆ. ಅನೇಕ ಗಣ್ಯರು ಘಟನಾ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಅಲ್ಲದೇ ಅಗತ್ಯ ನೆರವು ಒದಗಿಸುವ ಭರವಸೆ ನೀಡಿದ್ದಾರೆ.