ವಿಜಯಪುರ: ಇಂಡಿ ತಾಲೂಕಿನ ಲಚ್ಯಾನ ಗ್ರಾಮದ ತೋಟದಲ್ಲಿ ಆಟವಾಡುತ್ತಿದ್ದ ಕಂದ ಆಯತಪ್ಪಿ ಕೊಳವೆ ಬಾವಿಗೆ ಬಿದ್ದಿದೆ. 16 ಅಡಿಯ ಕೊಳವೆ ಬಾವಿಗೆ ಬಿದ್ದಿರುವ 2 ವರ್ಷದ ಸಾತ್ವಿಕ್ಗಾಗಿ ರಾಜ್ಯಾದ್ಯಂತ ಜನರ ಮನ ಮಿಡಿಯುತ್ತಿದೆ.
ಅಗ್ನಿಶಾಮಕ ದಳ, ಪೊಲೀಸರು, ಆರೋಗ್ಯ ಇಲಾಖೆ ಸಿಬ್ಬಂದಿ ಸೇರಿದಂತೆ ಎಲ್ಲರೂ ರಾತ್ರಿ ಇಡೀ ಕಣ್ಣಿಗೆ ನಿದ್ದೆ ಇಲ್ಲದೇ ಸಾತ್ವಿಕ್ನ ರಕ್ಷಣೆಯಲ್ಲಿ ತೊಡಗಿದ್ದಾರೆ. ಸದ್ಯ ಇದರ ನಡುವೆ ಕ್ಯಾಮೆರಾದಲ್ಲಿ ಕಂದನ ಕಾಲುಗಳು ಸೆರೆಯಾಗಿವೆ.
ಮಗುವಿಗೆ ಉಸಿರಾಟದ ಸಮಸ್ಯೆಯಾಗದಂತೆ ಅಧಿಕಾರಿಗಳು ನಿರಂತರವಾಗಿ ಆಕ್ಸಿಜನ್ ಪೂರೈಕೆ ಮಾಡುತ್ತಿದ್ದಾರೆ. ಕಾರ್ಯಾಚರಣೆ ವೇಳೆ ಮಗುವಿನ ಮೇಲೆ ಮಣ್ಣು ಬಿದ್ದಿದೆ. ಎಲ್ಲವನ್ನೂ ಕ್ಯಾಮೆರಾ ಮೂಲಕ ನಿಗಾ ವಹಿಸಲಾಗಿದ್ದು, ಮಗುವಿನ ಚಲನವಲನ ಸೆರೆಯಾಗಿದೆ.
ಮಗುವಿನ ಎರಡು ಕಾಲುಗಳು ಕ್ಯಾಮೆರಾ ಕಣ್ಣಿಗೆ ಬಿದ್ದಿದ್ದು ಕಾಲುಗಳು ಅಲ್ಲಾಡುತ್ತಿವೆ. ಆದಷ್ಟು ಬೇಗ ಮಗು ಹೊರಗೆ ಬರಲೆಂದು ಕುಟುಂಬಸ್ಥರು ಸೇರಿ ಎಲ್ಲರೂ ಪ್ರಾರ್ಥಿಸುತ್ತಿದ್ದಾರೆ.
ಬದುಕು ಸಾವಿನ ಮಧ್ಯೆ ಹೋರಾಡುತ್ತಿರುವ ಮಗುವಿನ ರಕ್ಷಣೆಗಾಗಿ ಕಾರ್ಯಚರಣೆ ಮುಂದುವರಿದಿದ್ದು, ರಕ್ಷಣಾ ಕಾರ್ಯದ ವೇಳೆ ಮಗುವಿನ ಮೇಲೆ ಮಣ್ಣು ಬಿದ್ದಿದೆ. ಕೊಳವೆ ಬಾವಿಯ 16 ಅಡಿಯಲ್ಲಿ ಮಗು ಸಿಲುಕಿದ್ದು, ಅಕ್ಕಪಕ್ಕದಲ್ಲಿ ಮಣ್ಣು ತೆರೆವುಗೊಳಿಸಿ ಮಗುವನ್ನ ಹೊರ ತರಲು ಅಗ್ನಿಶಾಮಕ ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ.