ನನ್ನ ಬೆಂಬೆಲ ಬಿಜೆಪಿ-ಜೆಡಿಎಸ್ ಮೈತ್ರಿಗೆ: ಬೆಂಬಲಿಗರ ಸಭೆಯಲ್ಲಿ ಸುಮಲತಾ ಅಂಬರೀಶ್ ಘೋಷಣೆ
ಮಂಡ್ಯ: ಭಾರತೀಯ ಜನತಾ ಪಾರ್ಟಿ ಮತ್ತು ಜಾತ್ಯತೀತ ಜನತಾ ದಳ ಪಕ್ಷದ ಅಭ್ಯರ್ಥಿಗೆ ನಾನು ಬೆಂಬಲ ನೀಡುತ್ತೇನೆ ಎಂದು ಹಾಲಿ ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಘೋಷಣೆ ಮಾಡಿದ್ದಾರೆ.
ಮಂಡ್ಯದಲ್ಲಿ ಬುಧವಾರ (ಏ.3ರ ಇಂದು) ಬೆಂಬಲಿಗರ ಸಭೆ ನಡೆಸಿ ಮಾತನಾಡಿದ ಅವರು ಸಂಸದರು, ಶಾಸಕರಿಗೆ ಟಿಕೆಟ್ ಸಿಗದಿದ್ದರೆ ಅನೇಕರು ಪಕ್ಷ ಬಿಟ್ಟು ಹೋಗುತ್ತಾರೆ. ಆದರೆ ನಾನು ಸಂಸದರ ಸೀಟ್ ಬಿಟ್ಟುಕೊಟ್ಟು ಬಿಜೆಪಿ ಸೇರುವ ನಿರ್ಧಾರ ಮಾಡಿದ್ದೇನೆ ಎಂದು ಹೇಳಿದರು.
ಇನ್ನು ಪ್ರಧಾನಿ ಮೋದಿ ಅವರ ಕಾರ್ಯಕ್ಷಮತೆ ಮೆಚ್ಚಿ ನಾನು ಬಿಜೆಪಿ ಸೇರ್ಪಡೆಯಾಗುತ್ತೇನೆ ಎಂದ ಅವರು, ಮಂಡ್ಯ ಮಣ್ಣನ್ನು ಸುಮಲತಾ ಅಂಬರೀಶ್ ಎಂದೆಂದಿಗೂ ಬಿಡಲ್ಲ ಎಂದು ಭಾವನಾತ್ಮಕವಾಗಿ ಪ್ರಮಾಣ ಮಾಡಿದರು.
ಮಂಡ್ಯದ ಋಣ, ಮಂಡ್ಯ ಜನರನ್ನು ಎಂದೆಂದಿಗೂ ಬಿಡೋದಿಲ್ಲ. ಈ ಪ್ರೀತಿ ಆಶೀರ್ವಾದ ಹೀಗೆ ಇರಲಿ. ಮುಂದಿನ ದಿನಗಳಲ್ಲಿ ನನ್ನ ಎಲ್ಲ ಪ್ರಯತ್ನಗಳಲ್ಲೂ ಜತೆಯಲ್ಲಿರಿ. ಸಂಸದೆಯಾಗಿ ನಿಮಗೆ ನಾನು ಪರಿಚಯ ಆಗಲಿಲ್ಲ. ಅಂಬರೀಶ್ ಪತ್ನಿಯಾಗಿ, ಮಂಡ್ಯ ಸೊಸೆಯಾಗಿ ನಿಮಗೆ ಪರಿಚಯ. ನೀವು ನನಗೆ ತಾಯಿ ಸ್ಥಾನ ಕೊಟ್ಟೀದ್ದೀರಾ. ತಾಯಿಯಿಂದ ಮಕ್ಕಳನ್ನು ದೂರ ಮಾಡಲು ಆಗಲ್ಲ ಎಂದರು.
ಇನ್ನು ನನ್ನ ಕಾರ್ಯಕರ್ತರು, ಅಭಿಮಾನಿಗಳಿಗೆ ಶಕ್ತಿ ತುಂಬಲು ಈ ನಿರ್ಧಾರಕ್ಕೆ ಬಂದಿದ್ದೇನೆ. ಪಕ್ಷೇತರವಾಗಿ ಸ್ಪರ್ಧೆ ಬೇಡ, ಕಾಂಗ್ರೆಸ್‌ಗೆ ನನ್ನ ಅವಶ್ಯಕತೆ ಇಲ್ಲ. ಪಕ್ಷೇತರ ಸಂಸದೆಯಾದರೂ 4 ಸಾವಿರ ಕೋಟಿ ಅನುದಾನ ಕೊಟ್ಟಿದ್ದು ಬಿಜೆಪಿ. ಪ್ರತಿ ವಿಷಯದಲ್ಲೂ ನನ್ನನ್ನು ವಿಶ್ವಾಸಕ್ಕೆ ಪಡೆದರು ಎಂದು ಹೇಳಿದರು.
ಅಲ್ಲದೆ ನಿಮ್ಮ ನಾಯಕತ್ವ ಬೇಕು ಎಂದು ಸ್ವತಃ ಪ್ರಧಾನಿ ನನಗೆ ಹೇಳಿದ್ದರು. ನಾಯಕತ್ವ ಬೆಳೆಸೋ ಗುಣ ಬಿಜೆಪಿಯಲ್ಲಿದೆ. ಭಾರತವನ್ನು ಇಡೀ ಪ್ರಪಂಚ ತಿರುಗಿ ನೋಡುವಂತೆ ಮೋದಿ ಮಾಡಿದ್ದಾರೆ. ಮೋದಿ ಅವರದ್ದು ಅಭಿವೃದ್ಧಿ ಮಂತ್ರ. ಒಂದೇ ಒಂದು ಕಳಂಕ ಅವರ ಮೇಲಿಲ್ಲ. ಅವರ ನಾಯಕತ್ವದಲ್ಲಿ ಮುನ್ನಡೆಯುತ್ತೇನೆ. ನಾನು ಈ ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತಿಲ್ಲ. ಆದರೆ ಮಂಡ್ಯವನ್ನು ಬಿಡುವ ಪ್ರಶ್ನೆ ಇಲ್ಲ ಎಂದರು.