ಬೆಂಗಳೂರು: ಗೃಹಜ್ಯೋತಿ ಯೋಜನೆಯಡಿ 200 ಯೂನಿಟ್ ಉಚಿತ ವಿದ್ಯುತ್ ಬಾಡಿಗೆ ಮನೆಯವರಿಗೂ ನೀಡುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಮಾಜಿ ಮುಖ್ಯಮಂತ್ರಿ ದಿ. ದೇವರಾಜ ಅರಸು ಅವರ 41ನೇ ಪುಣ್ಯಸ್ಮರಣೆಯ ದಿನವಾದ ಮಂಗಳವಾರ ವಿಧಾನಸೌಧದ ಮುಂಭಾಗದಲ್ಲಿರುವ ಅರಸು ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಸುದ್ದಿಗಾರರೊಂದಿಗೆ ಮಾತನಾಡಿದರು.
ಕಾಂಗ್ರೆಸ್ ಸರ್ಕಾರದ ಗೃಹಜ್ಯೋತಿ ಯೋಜನೆ ಲಾಭ ಬಾಡಿಗೆ ಮನೆಯವರಿಗೂ ಸಿಗಲಿದೆ. ಇದರಲ್ಲಿ ಯಾವುದೇ ಅನುಮಾನ ಬೇಡ ಎಂದ ಅವರು, 200 ಯೂನಿಟ್ ಉಚಿತ ವಿದ್ಯುತ್‍ನ ಗೃಹಜ್ಯೋತಿ ಯೋಜನೆ ಎಲ್ಲರಿಗೂ ಸಿಗುತ್ತದೆ ಎಂದು ಸ್ಪಷ್ಟಪಡಿಸಿದರು.
ಯಾರ್ಯಾರು 200 ಯೂನಿಟ್ ಒಳಗೆ ವಿದ್ಯುತ್ ಬಳಸುತ್ತಾರೋ ಅವರಿಗೆಲ್ಲ ಉಚಿತ ವಿದ್ಯುತ್‍ನ ಲಾಭ ಸಿಗಲಿದೆ. ಬಾಡಿಗೆದಾರರಿಗೂ 200 ಯೂನಿಟ್‍ವರೆಗೆ ಉಚಿತ ವಿದ್ಯುತ್ ನೀಡುತ್ತೇವೆ, ಇದರಲ್ಲಿ ಯಾವುದೇ ಗೊಂದಲವಿಲ್ಲ ಎಂದರು.
ವಾಣಿಜ್ಯ ಬಳಕೆಗೆ ಉಚಿತ ವಿದ್ಯುತ್ ಯೋಜನೆ ಅನ್ವಯಿಸುವುದಿಲ್ಲ. ಒಂದು ವೇಳೆ ವಾಣಿಜ್ಯ ಚಟುವಟಿಕೆಗಳಿಗೆ ವಿದ್ಯುತ್ ಬಳಸುತ್ತಿದ್ದರೆ ಅಂತಹವರಿಗೆ ಉಚಿತ ವಿದ್ಯುತ್ ನೀಡಲ್ಲ, ಬಾಡಿಗೆದಾರರಿಗೆ ಉಚಿತ ವಿದ್ಯುತ್ ನೀಡುತ್ತೇವೆ ಎಂದು ಖಚಿತಪಡಿಸಿದರು.