ಹಾವೇರಿ: ಕೊರೊನಾ ವೈರಸ್ ಹರಡುವಿಕೆಯ ನಿಯಂತ್ರಣಕ್ಕಾಗಿ ಲಾಕ್ಡೌನ್ ಜಾರಿಯಲ್ಲಿದ್ದರೂ ಜಿಲ್ಲೆಯ ರೈತರ ಸಂಕಷ್ಟಕ್ಕೆ ಸ್ಪಂದಿಸಿರುವ ಜಿಲ್ಲಾಡಳಿತ ತೋಟಗಾರಿಕೆ ಇಲಾಖೆಯ ಮೂಲಕ ರೈತರು ಬೆಳೆದಿರುವ ಹಣ್ಣು ಮತ್ತು ತರಕಾರಿ, ವಿಳ್ಯದೆಲೆಗಳನ್ನು ಹೊರ ರಾಜ್ಯ ಹಾಗೂ ಹೊರ ಜಿಲ್ಲೆಗಳ ಮಾರುಕಟ್ಟೆಗಳ ಸಂಪರ್ಕ ಸಾಧಿಸಿ ನಿರಂತರ ರಫ್ತು ಮಾಡಲು ನೆರವು ಒದಗಿಸುತ್ತಿದೆ. ಏಪ್ರಿಲ್ 4 ರಿಂದ ಈವರೆಗೆ 592.67 ಮೆಟ್ರಿಕ್ ಟನ್ಗೂ ಹೆಚ್ಚು ಹಣ್ಣು ಹಾಗೂ ತರಕಾರಿ ಸಾಗಾಣಿಕೆ ಮಾಡಿದೆ.
ದೆಹಲಿ, ಕಲ್ಕತ್ತ, ಪುಣೆ, ಮುಂಬೈ, ಗೋವಾ, ಉತ್ತರ ಪ್ರದೇಶ, ಆಂಧ್ರಪ್ರದೇಶ, ಬಾಗಲಕೋಟೆ, ಧಾರವಾಡ, ಬೆಂಗಳೂರು, ಶಿವಮೊಗ್ಗ, ಮಂಗಳೂರು, ಉಡುಪಿ, ಕಾರವಾರ, ಬಳ್ಳಾರಿ, ಕಂಪ್ಲಿ ಜಿಲ್ಲೆಗಳ ಮಾರುಕಟ್ಟೆಗಳಲ್ಲಿ ನಿರಂತರ ಸಂಪರ್ಕ ಸಾಧಿಸಿ ರೈತರ ಮೂಲಕ ನೆರ ಮಾರಾಟಕ್ಕೆ ವ್ಯವಸ್ಥೆ ಕಲ್ಪಿಸಿದೆ. ಸಾಗಾಣಿಕೆಗೆ ವಾಹನ ಪಾಸ್ ನೀಡಿ ಶ್ರಮವಹಿಸಿ ರೈತ ಬೆಳೆದ ಬೆಳೆಗೆ ಸೂಕ್ತ ಬೆಲೆ ಹಾಗೂ ಸಂಪರ್ಕ ಕಲ್ಪಿಸಲು ತೋಟಗಾರಿಗೆ ಇಲಾಖೆ ವ್ಯವಸ್ಥೆ ಮಾಡುತ್ತಿದೆ.
ರಾಣೇಬೆನ್ನೂರ, ಹಿರೇಕೆರೂರ, ತಾಲೂಕಿನಿಂದ ಕಲ್ಕತ್ತ, ದೇಹಲಿ, ಬಾಗಲಕೋಟೆಗೆ ಈವರೆಗೆ 22 ಮೆಟ್ರಿಕ್ ಟನ್ ಶುಂಠಿಯನ್ನು ಸಾಗಾಣಿಕೆ ಮಾಡಲಾಗಿದೆ. ರಾಣೆಬೆನ್ನೂರ, ಹಾನಗಲ್, ಹಿರೇಕೆರೂರ, ಹಾವೇರಿ, ಸವಣೂರ ತಾಲೂಕಿನಿಂದ ಹುಬ್ಬಳ್ಳಿ, ಬೆಂಗಳೂರ, ಶಿವಮೊಗ್ಗ, ಕಾರವಾರ, ಕುಂದಾಪುರ, ಆಂಧ್ರಪ್ರದೇಶದ ಕಲ್ಯಾಣದುರ್ಗ, ಗೋವಾ, ಕಂಪ್ಲಿ, ಬಳ್ಳಾರಿ, ಮಂಗಳೂರಿಗೆ ಈವರೆಗೆ 181 ಮೆಟ್ರಿಕ್ ಟನ್ ಬಾಳೆಹಣ್ಣು ಸಾಗಾಣಿಕೆ ಮಾಡಲಾಗಿದೆ. ಹಾವೇರಿ, ಹಿರೇಕೆರೂರ, ಸವಣೂರ ತಾಲೂಕಿನಿಂದ ಗೋವಾ, ಕಾರವಾರ, ಉಡುಪಿಗೆ ಈವರೆಗೆ 28 ಮೆಟ್ರಿಕ್ ಟನ್ ಟೊಮ್ಯಾಟೋ ರಫ್ತು ಮಾಡಲಾಗಿದೆ.
ಹಾವೇರಿ, ಸವಣೂರ ತಾಲೂಕಿನಿಂದ ಕಾರವಾರ, ಬೆಂಗಳೂರಿಗೆ 22 ಮೆಟ್ರಿಕ್ ಟನ್ ಬದನೆಕಾಯಿ ಕಳಿಸಲಾಗಿದೆ. ಸವಣೂರ, ಬ್ಯಾಡಗಿ, ಹಾವೇರಿಯಿಂದ ಕಾರವಾರ, ಶಿವಮೊಗ್ಗ, ಗೋವಾಗೆ ಈವರೆಗೆ 17 ಮೆಟ್ರಿಕ್ ಟನ್ ಈರುಳ್ಳಿ ಕಳಿಸಲಾಗಿದೆ. ಹಾನಗಲ್ ತಾಲೂಕಿನಿಂದ ಹುಬ್ಬಳ್ಳಿ, ಕಾರವಾರ, ಬೆಂಗಳೂರ, ಮಂಗಳೂರು ಮಾರುಕಟ್ಟೆಗೆ ಈವರೆಗೆ 96.6 ಮೆಟ್ರಿಕ್ ಟನ್ ಮಾವು ಕಳಿಸಲಾಗಿದೆ. ಹಿರೇಕೆರೂರ ತಾಲೂಕಿನಿಂದ ಕಾರವಾರಕ್ಕೆ 1 ಮೆಟ್ರಿಕ್ ಟನ್ ಬೆಳ್ಳುಳ್ಳಿ ಕಳಿಸಲಾಗುತ್ತಿದೆ, ರಾಣೇಬೆನ್ನೂರ ತಾಲೂಕಿನಿಂದ ಕಲಾಸಿಪಾಳ್ಯಕ್ಕೆ ಈವರೆಗೆ 120 ಮೆಟ್ರಿಕ್ ಟನ್ ಕುಂಬಳಕಾಯಿ ಕಳುಹಿಸಲಾಗಿದೆ.
ರಾಣೇಬೆನ್ನೂರ, ಸವಣೂರ ತಾಲೂಕಿನಿಂದ ಧಾರವಾಡ, ಆಂಧ್ರಪ್ರದೇಶದ ಅನಂತಪುರ, ಬೆಂಗಳೂರ, ದಾವಣಗೆರೆ, ಮಂಗಳೂರ, ಗೋವಾ, ಹುಬ್ಬಳ್ಳಿಗೆ ಈವರೆಗೆ 25.25 ಲಕ್ಷ ಸಂಖ್ಯೆ ವೀಳ್ಯದೆಲೆ ಕಳುಹಿಸಲಾಗಿದೆ. ಬ್ಯಾಡಗಿ ತಾಲೂಕಿನ ಕಾಗಿನೆಲೆ, ಹಾವೇರಿ ತಾಲೂಕಿನಿಂದ ಗೋವಾ, ಶಿವಮೊಗ್ಗ ಮಾರುಕಟ್ಟೆಗೆ ಈವರೆಗೆ 15 ಮೆಟ್ರಿಕ್ ಟನ್ ಕಲ್ಲಂಗಡಿ ಕಳುಹಿಸಲಾಗಿದೆ. ಹಾವೇರಿ, ಬ್ಯಾಡಗಿ ತಾಲೂಕಿನಿಂದ ಕಲ್ಕತ್ತ, ಉತ್ತರಪ್ರದೇಶ, ಬೆಂಗಳೂರಿಗೆ ಈವರಗೆ ಎಲೆಕೊಸು 56 ಮೆಟ್ರಿಕ್ ಟನ್ ಕಳಿಸಲಾಗಿದೆ. ಹಾವೇರಿ, ಸವಣೂರ, ಹಿರೇಕೆರೂರ ತಾಲೂಕಿನಿಂದ ಕಾರವಾರ, ಮುಂಬೈ, ಬೆಂಗಳೂರ, ಪುಣೆಗೆ ಈವರೆಗೆ 57.07 ಮೆಟ್ರಿಕ್ ಟನ್ ಹಸಿ ಮೆಣಸಿನಕಾಯಿ ಕಳಿಸಲಾಗಿದೆ. ಹಿರೇಕೆರೂರ ತಾಲೂಕಿನಿಂದ ಕುಂದಾಪುರಕ್ಕೆ 3 ಮೆಟ್ರಿಕ್ ಟನ್ ಕೆಂಪು ಮೆಣಸಿನಕಾಯಿ ಕಳುಹಿಸಲಾಗಿದೆ. ಹಿರೇಕೆರೂರ ತಾಲೂಕಿನಿಂದ ಕಾರವಾರಕ್ಕೆ ಬೆಂಡಿ ಮತ್ತು ಬಿಟ್ರೂಟ್ 1 ಮೆಟ್ರಿಕ್ ಟನ್ ಕಳುಹಿಸಲಾಗಿದೆ.
ಜಿಲ್ಲೆಯ ರೈತರ ಉತ್ಪನ್ನಗಳನ್ನು ಹೊರ ಜಿಲ್ಲೆ ಹಾಗೂ ರಾಜ್ಯಗಳ ಮಾರುಕಟ್ಟೆಯ ಬೇಡಿಕೆಗೆ ಅನುಸಾರ ಪೂರೈಕೆ ಮಾಡಲಾಗುತ್ತಿದೆ. ಜಿಲ್ಲೆಯ ರೈತರಿಗೆ ಮಾರುಕಟ್ಟೆಯ ಸಂಪರ್ಕ ಕಲ್ಪಿಸಿಕೊಡಲಾಗುತ್ತಿದೆ. ನಿತ್ಯವು ಹಣ್ಣು, ತರಕಾರಿ ಸಾಗಾಣಿಕೆ ಮಾಡಲಾಗುತ್ತಿದೆ. ಈವರೆಗೆ 592.67 ಮೆಟ್ರಿಕ್ ಟನ್ ಹಣ್ಣು ಮತ್ತು ತರಕಾರಿ ಹಾಗೂ 25.25 ಲಕ್ಷ ವಿಳ್ಯದೆಲೆ ಕಳುಹಿಸಲಾಗಿದೆ ಎಂದು ಜಿಲ್ಲಾ ತೋಟಗಾರಿಕೆ ಇಲಾಖೆಯ ಉಪನಿರ್ದೆಶಕ ಪ್ರದೀಪ ಮಾಹಿತಿ ನೀಡಿದ್ದಾರೆ.