ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳಲ್ಲಿ ಖಾಲಿ ಇರುವ 2,814 ಚಾಲಕರ ಹುದ್ದೆಗಳನ್ನು ಅತೀ ಶೀಘ್ರದಲ್ಲೇ ಭರ್ತಿ ಮಾಡಿಕೊಳ್ಳಲಾಗುವುದು ಎಂದು ಸಾರಿಗೆ ಸಚಿವ ಬಿ. ಶ್ರೀರಾಮುಲು ತಿಳಿಸಿದ್ದಾರೆ.
ಬುಧವಾರ ವಿಧಾನಸಭೆ ಕಲಾಪದ ಪ್ರಶ್ನೋತ್ತರ ಅವಧಿಯಲ್ಲಿ ಶಾಸಕ ಲಿಂಬಣ್ಣನವರ ಪ್ರಶ್ನೆಗೆ ಉತ್ತರಿಸಿದ ಅವರು, 2814 ಚಾಲಕರು ಹಾಗೂ ಇದರ ಜೊತೆಗೆ ಹೆಚ್ಚುವರಿಯಾಗಿ ಚಾಲಕ ಕಂ ನಿರ್ವಾಹಕರನ್ನು ಸಹ ನೇಮಕ ಮಾಡಿಕೊಳ್ಳಲಾಗುತ್ತದೆ ಎಂದು ತಿಳಿಸಿದರು.
ಪ್ರಸ್ತುತ ಸಂಸ್ಥೆಯಲ್ಲಿ 2500 ಚಾಲಕ, 55 ಚಾಲಕರು (ಬ್ಯಾಕ್‍ಲಾಗ್ ), 250 ಚಾಲಕ ಕಂ ನಿರ್ವಾಹಕ(ಬ್ಯಾಕ್‍ಲಾಗ್) ಸೇರಿದಂತೆ ಒಟ್ಟು 2814 ಹುದ್ದೆಗಳ ನೇಮಕಕ್ಕೆ 2019ರಲ್ಲೇ ಅಧಿಸೂಚನೆ ಹೊರಡಿಸಲಾಗಿತ್ತು. ಕೋವಿಡ್ ಕಾರಣದಿಂದ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಲಾಗಿತ್ತು. ಈಗ ನೇಮಕಾತಿ ಪ್ರಕ್ರಿಯೆಗೆ ಪ್ರಸ್ತಾವನೆ ಸ್ವೀಕೃತಗೊಂಡಿದೆ ಎಂದು ವಿವರಿಸಿದರು.
ಗದಗ ಜಿಲ್ಲೆ ಕಲಘಟ್ಟಗಿ ತಾಲೂಕಿನ ಬಸ್ ಘಟಕಕ್ಕೆ ಶಾಸಕರು 50 ಹೊಸ ಬಸ್‍ಗಳನ್ನು ನೀಡಬೇಕೆಂದು ಮನವಿ ಮಾಡಿದ್ದಾರೆ. ಆದರೆ ನಮ್ಮ ಮುಂದೆ ಸದ್ಯಕ್ಕೆ ಹೊಸ ಬಸ್‍ಗಳನ್ನು ಖರೀದಿಸುವ ಪ್ರಸ್ತಾವನೆ ಇಲ್ಲ. ಇರುವ ಕಡೆ ಬಸ್‍ಗಳನ್ನೇ ಹೊಂದಾಣಿಕೆ ಮಾಡಿಕೊಡುತ್ತೇವೆ ಎಂದು ಆಶ್ವಾಸನೆ ನೀಡಿದರು.
650 ಹೊಸ ಬಸ್ ಖರೀದಿ: ಇನ್ನು ಸಾರಿಗೆ ಇಲಾಖೆಯಿಂದ 650 ಹೊಸ ಬಸ್ ಖರೀದಿಗೆ ಟೆಂಡರ್ ಪ್ರಕ್ರಿಯೆ ಪ್ರಗತಿಯಲ್ಲಿದ್ದು, ಹೊಸ ಬಸ್ ಬಂದ ಕೂಡಲೇ ಅಗತ್ಯ ಇರುವ ಕಡೆಗಳಲ್ಲಿ ವಾಹನಗಳನ್ನು ಒದಗಿಸಲು ಕ್ರಮ ವಹಿಸಲಾಗುವುದು ಎಂದು ಭರವಸೆ ನೀಡಿದ್ದಾರೆ.
ಪ್ರಶ್ನೋತ್ತರ ಅವಧಿಯಲ್ಲಿ ಕಾಂಗ್ರೆಸ್ ಸದಸ್ಯ ಈಶ್ವರ್ ಖಂಡ್ರೆ ಕೇಳಿದ ಪ್ರಶ್ನೆಗೆ ಉತ್ತರ ನೀಡಿದ ಅವರು, ‘ಸಾಮಾನ್ಯ ಬಸ್‍ಗಳನ್ನು 9 ಲಕ್ಷ ಕಿ.ಮೀ. ಹಾಗೂ ಕರೋನ ಹವಾನಿಯಂತ್ರಿತ ಸ್ಲೀಪರ್ ಬಸ್ಸುಗಳನ್ನು 11ಲಕ್ಷ ಕಿ.ಮೀ. ಕ್ರಮಿಸಿದ ಬಳಿಕ ಸ್ಥಗಿತಗೊಳಿಸಿ ನಿಷ್ಕ್ರಿಯೆಗೊಳಿಸಲಾಗುತ್ತಿದೆ. 2022ರ ಜುಲೈ 31ಕ್ಕೆ 44,663 ವಾಹನಗಳಿದ್ದು, ಆ ಪೈಕಿ 1,797 ವಾಹನಗಳು ನಿಗದಿತ 9ಲಕ್ಷ ಕಿ.ಮೀ.ಗೂ ಅಧಿಕ ಕಿ.ಮೀ ಕ್ರಮಿಸಿದ್ದು, ಅವುಗಳನ್ನು ಸ್ಥಗಿತಗೊಳಿಸಲಾಗಿದೆ ಎಂದರು.
ಹಳ್ಳಿಗಳಿಗೆ ಬಸ್ ಬಿಡಿ: ಕೋವಿಡ್ ಹಿನ್ನೆಲೆಯಲ್ಲಿ ಗ್ರಾಮೀಣ ಪ್ರದೇಶಕ್ಕೆ ಸಂಚರಿಸುತ್ತಿದ್ದ ಬಸ್ ಮಾರ್ಗಗಳನ್ನು ಸ್ಥಗಿತಗೊಳಿಸಿದ್ದು, ರಾಜ್ಯದ ವಿವಿಧ ಗ್ರಾಮಗಳಿಂದ ಜಿಲ್ಲೆ, ತಾಲೂಕು ಕೇಂದ್ರಗಳಿಗೆ ಸಾರಿಗೆ ಬಸ್‍ಗಳೇ ಇಲ್ಲ. ಹೀಗಾಗಿ ಗ್ರಾಮೀಣ ಪ್ರದೇಶದ ಶಾಲಾ-ಕಾಲೇಜುಗಳಿಗೆ ಮಕ್ಕಳ ತೊಂದರೆಯಾಗುತ್ತಿದ್ದು, ಕೂಡಲೇ ಬಸ್‍ಗಳನ್ನು ಆರಂಭಿಸಬೇಕು’ ಎಂದು ಈಶ್ವರ್ ಖಂಡ್ರೆ, ತುಕಾರಾಮ್, ನರಸಿಂಹನಾಯಕ್ ಸೇರಿ ಇನ್ನಿತರರು ಆಗ್ರಹಿಸಿದರು.
ಈ ಕುರಿತು ಪರಿಶೀಲಿಸಿ ಮಕ್ಕಳಿಗೆ ತೊಂದರೆ ಆಗದಂತೆ ಬಸ್ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಶ್ರೀರಾಮುಲು ತಿಳಿಸಿದರು.