ಶೇ.30 ಶಾಸಕರು ಭ್ರಷ್ಟರು! ಮುಖ್ಯಮಂತ್ರಿ ಕೇಳಿದರೆ ಪಟ್ಟಿ ನೀಡಲು ಸಿದ್ದ: ಗುತ್ತಿಗೆದಾರರ ಸಂಘದ ಅಧ್ಯಕ್ಷ ಮಂಜುನಾಥ್

- ಮಾ.6ಕ್ಕೆ ಫ್ರೀಡಂಪಾರ್ಕ್ನಲ್ಲಿ 35 ಸಾವಿರ ಗುತ್ತಿಗೆದಾರರು ಕುಟುಂಬ ಸಮೇತ ಪ್ರತಿಭಟನೆ ಎಚ್ಚರಿಕೆ
ಚಿತ್ರದುರ್ಗ: ರಾಜ್ಯದ ಶೇಕಡಾ 30ರಷ್ಟು ಚುನಾಯಿತ ಪ್ರತಿನಿಧಿಗಳು ಭ್ರಷ್ಟರಾಗಿದ್ದಾರೆ ಎಂದು ಕರ್ನಾಟಕ ಗುತ್ತಿಗೆದಾರರ ಸಂಘದ ಅಧ್ಯಕ್ಷ ಆರ್. ಮಂಜುನಾಥ್ ಆರೋಪಿಸಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೇಳಿದರೆ ಈ ಎಲ್ಲ ಭ್ರಷ್ಟರ ಪಟ್ಟಿಯನ್ನು ನೀಡಲು ಸಿದ್ಧರಾಗಿದ್ದೇವೆ ಎಂದೂ ಹೇಳಿದ್ದಾರೆ.

ಚಿತ್ರಮರ್ಗದಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದಾದ್ಯಂತ ಗುತ್ತಿಗೆದಾರರಿಗೆ ಪಾವತಿಸಬೇಕಿರುವ 37,000 ಕೋಟಿ ರೂಪಾಯಿ ಬಾಕಿ. ಇದೆ. ಹೀಗಾಗಿ ಸರ್ಕಾರ ತಕ್ಷಣವೇ ಹಣ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.
ಇನ್ನು ರಾಜ್ಯದ 30 ಶೇಕಡಾ ಚುನಾಯಿತ ಪ್ರತಿನಿಧಿಗಳು ಭ್ರಷ್ಟರು, ಮುಖ್ಯಮಂತ್ರಿ ಕೇಳಿದರೆ ಅವರ ಹೆಸರಿನ ಪಟ್ಟಿಯನ್ನು ನೀಡಲು ನಾನು ಸಿದ್ದನಿದ್ದೇನೆ ಎಂದರು.
ಗುತ್ತಿಗೆದಾರರ ಸಂಘದ ಬಾಕಿ ಪಾವತಿ ಸಮಸ್ಯೆ ಸಂಬಂಧ ಹಲವು ಸಭೆಗಳು ನಡೆದಿದ್ದರೂ ಮುಖ್ಯಮಂತ್ರಿ ಪರಿಹರಿಸಿಲ್ಲ. ರಾಜ್ಯದ ಗುತ್ತಿಗೆದಾರರಿಗೆ 37,000 ಕೋಟಿ ರೂಪಾಯಿ ಬಾಕಿಯಿದೆ. ಇದನ್ನು ಹಿಂದಿನ ಸರ್ಕಾರ ಪಾವತಿ ಮಾಡದೆ ಬಾಕಿ ಉಳಿಸಿದೆ ಎಂದು ಸಿದ್ದರಾಮಯ್ಯ ಹೇಳಬಾರದು. ಸರ್ಕಾರ ಎಂದರೆ ಎಲ್ಲರೂ ಹೊಣೆಗಾರರು ಮುಖ್ಯಮಂತ್ರಿ ಬಾಕಿ ಹಣವನ್ನು ಬಿಡುಗಡೆ ಮಾಡಬೇಕು. ಈ ಸಂಬಂಧ ಈಗಾಗಲೇ ಅನೇಕ ಸಭೆಗಳು ನಡೆದಿವೆ. ಆದರೆ, ಯುವುದೇ ಫಲಿತಾಂಶ ಇಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಭಾರೀ ಪ್ರತಿಭಟನೆ ಎಚ್ಚರಿಕೆ: ಮಾರ್ಚ್ 6ರಂದು ರಾಜ್ಯದ 35,000 ಗುತ್ತಿಗೆದಾರರು ತಮ್ಮ ಕುಟುಂಬ ಸದಸ್ಯರೊಂದಿಗೆ ಫ್ರೀಡಂಪಾರ್ಕ್ನಲ್ಲಿ ಪ್ರತಿಭಟನೆ ನಡೆಸಲಿದ್ದೇವೆ ಎಂದು ಮಂಜುನಾಥ್ ಘೋಷಿಸಿದರು. ಜಲ್ ಜೀವನ ಮಿಷನ್ (ಎಎಒ) ಕಾಮಗಾರಿಗಳ ವಿಳಂಬದ ವಿಷಯದಲ್ಲಿಯೂ ಆತಂಕ ವ್ಯಕ್ತಪಡಿಸಿ, ಕೇಂದ್ರ ಸರ್ಕಾರದೊಂದಿಗೆ ಚರ್ಚಿಸಿ ಹಣ ಬಿಡುಗಡೆ ಮಾಡಬೇಕು ಎಂದು ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.
ಇನ್ನು ಈ ಆರೋಪಗಳು, ಪ್ರಸ್ತುತ ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲಿ ಜಾತಿ, ಆಡಳಿತ, ಭ್ರಷ್ಟಾಚಾರ ಮತ್ತು ಹಣಕಾಸು ನಿರ್ವಹಣೆ, ನಾಯಕತ್ವ ಬದಲಾವಣೆ ಕುರಿತು ರಾಜಕೀಯದಲ್ಲಿ ತೀವ್ರ ಚರ್ಚೆಗಳು ನಡೆಯುತ್ತಿರುವ ಹೊತ್ತಿನಲ್ಲೇ ಹೊರಬಿದ್ದಿದ್ದು ಅಲ್ಲದೆ ಫ್ರೀಡಂಪಾರ್ಕ್ನಲ್ಲಿ ಪ್ರತಿಭಟನೆ ಮಾಡುವ ಎಚ್ಚರಿಕೆ ನೀಡಿರುವುದು ಸರ್ಕಾರಕ್ಕೆ ನುಂಗಲಾರದ ತುಪ್ಪವಾಗಿ ಪರಿಣಮಿಸಿದೆ.
ಈ ನಡುವೆ ಸಾರಿಗೆ ನೌಕರರಿಗೆ 2024ರ ಜನವರಿ 1ರಿಂದ ಆಗಬೇಕಿರುವ ವೇತನ ಹೆಚ್ಚಳದ ಸವಾಲುಕೂಡ ಈಗ ಸಿಎಂ ಹೆಗಲೇರಿದ್ದು ಭಾರಿ ಸಮಸ್ಯೆಯ ಸುಳಿಯಲ್ಲಿ ಸರ್ಕಾರ ಸಿಲುಕಿ ಒದ್ದಾಡುವ ಪರಿಸ್ಥಿತಿ ಎದುರಾಗಿರುವುದಂತು ಕಟು ಸತ್ಯ.
Related









