ಬೆಂಗಳೂರು: ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಲ್ಲೂ ಮತದಾನ ಪ್ರಕ್ರಿಯೆ ಆರಂಭವಾಗಿದೆ. ಈ ಹಿನ್ನೆಲೆಯಲ್ಲಿ ಈಗಾಗಲೇ ಅಭ್ಯರ್ಥಿಗಳು ಮತ್ತು ಅವರ ಕುಟುಂಬದವರು ಮುಂಜಾನೆಯೇ ದೇವಾಲಯಗಳಿಗೆ ತೆರಳಿ ವಿಶೇಷ ಪೂಜೆ ಸಲ್ಲಿಸಿ ಬಳಿಕ ಮತಗಟ್ಟೆಯತ್ತ ಪ್ರಯಾಣ ಬೆಳೆಸಿದ್ದಾರೆ.
ಅದೇ ರೀತಿ ಮಲ್ಲೇಶ್ವರಂನಲ್ಲಿ ಡಾ.ಅಶ್ವಥ್‌ನಾರಾಯಣ, ಶಿಕಾರಿಪುರದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ದೇವಾಲಯಗಳಲ್ಲಿ ವಿಶೇಷ ಪೂಜೆ ಸಲ್ಲಿಸಿ ಮತ ಚಲಾಯಿಸಲು ಬಂದಿದ್ದಾರೆ.
ಇನ್ನು 90 ವರ್ಷ ಮೇಲ್ಪಟ್ಟ ವಯೋವೃದ್ಧರು ಮತಗಟ್ಟೆಗೆ ಬಂದು ತಮ್ಮ ಹಕ್ಕನ್ನು ಚಲಾಯಿಸುತ್ತಿದ್ದಾರೆ. ಇಂದು ಬೆಳಗ್ಗೆ 7 ಗಂಟೆಯಿಂದ ಮತದಾನ ಮಾಡುತ್ತಿದ್ದಾರೆ.
ಮಾವ ಮತ್ತು ಪತಿ ಜತೆಗೆ ಬಂದ ನಟಿ ಅಮೂಲ್ಯ ಆರ್.ಆರ್.ನಗರದಲ್ಲಿ ಮತ ಚಲಾಯಿಸಿದರು. ಇನ್ನು ಹಿರಿಯ ನಾಗರಿಕರು ಬಂದು ಹಕ್ಕು ಚಲಾಯಿಸುತ್ತಿದ್ದು, ಯುವಕರಿಗೆ ಮತದಾನ ಮಾಡುವಂತೆ ಪ್ರೇರಣಾದಾಯಕ ಮಾತನಾಡುತ್ತಿದ್ದಾರೆ.
ಇನ್ನು ರಾಜ್ಯದ ಎಲ್ಲ ಮತಗಟ್ಟೆಗಳಲ್ಲೂ ಮತದಾರರು ಈಗಾಗಲೇ ಸರತಿ ಸಾಲಿನಲ್ಲಿ ನಿಂತು ತಮ್ಮ ಹಕ್ಕನ್ನು ಚಲಾಯಿಸುತ್ತಿದ್ದಾರೆ. ಈ ನಡುವೆ ಪ್ರಮುಖವಾಗಿ ಕರ್ತವ್ಯದಲ್ಲೇ ಇರಬೇಕಾದ ಚುನಾವಣೆಗೆ ನಿಯೋಜನೆ ಗೊಂಡಿರುವ ಸರ್ಕಾರಿ ನೌಕರರು, ವೈದ್ಯರು, ಸಿಬ್ಬಂದಿ ಹಾಗೂ ಸಾರಿಗೆ ನೌಕರರು ಪ್ರಮುಖ ಪತ್ರಕರ್ತರು ಈಗಾಗಲೇ ಅಂಚೆ ಮತದಾನದ ಮೂಲಕ ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ.
ಒಟ್ಟಾರೆ, ಸದ್ಯದ ಮಾಹಿತಿ ಪ್ರಕಾರ ರಾಜ್ಯದ 2-3 ಮತಗಟ್ಟೆಗಳಲ್ಲಿ ಮತ ಯಂತ್ರಗಳ ಸಮಸ್ಯೆ ಕಂಡುಬಂದಿದ್ದನ್ನು ಹೊರತು ಪಡಿಸಿದರೆ ಬೇರಾವುದೆ ಸಮಸ್ಯೆ ಇಲ್ಲದೆ ನಾಡಿನ ಮತದಾರರು ತಮ್ಮ ಹಕ್ಕನ್ನು ಚಲಾಯಿಸುತ್ತಿದ್ದಾರೆ.