ಬೆಂಗಳೂರು: ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಖಾತೆಯಲ್ಲಿ ನಡೆದ ಅವ್ಯವಹಾರ ಪ್ರಕರಣದ ತನಿಖೆ ಸಿಬಿಐಗೆ ವರ್ಗಾವಣೆಯಾಗುವ ಎಲ್ಲ ಸಾಧ್ಯತೆಗಳು ಹೆಚ್ಚಾಗಿದೆ.
ಅವ್ಯವಹಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಯೂನಿಯನ್ ಬ್ಯಾಂಕ್ ತನ್ನ ಮೂವರು ಸಿಬ್ಬಂದಿಯನ್ನು ಅಮಾನತುಗೊಳಿಸಿ ಸಿಬಿಐಗೆ (CBI) ದೂರು ನೀಡಿದೆ. ಇತ್ತ ಕರ್ನಾಟಕ ಸರ್ಕಾರ ಕೂಡ ಈ ಪ್ರಕರಣದ ತನಿಖೆ ನಡೆಸುವಂತೆ ಸಿಐಡಿಗೆ (CID) ಆದೇಶ ಮಾಡಿದೆ.
ಸಿಐಡಿ ತನಿಖೆ ನಡೆಸಿದರೂ ಇದು ಆರ್ಥಿಕ ಅಪರಾಧವಾಗಿರುವ ಕಾರಣ ಈ ಪ್ರಕರಣದ ತನಿಖೆ ಸಿಬಿಐಗೆ ವರ್ಗಾವಣೆಯಾಗಲಿದೆ. ಕಾರಣ ಬ್ಯಾಂಕ್‌ನಲ್ಲಿ 10 ಕೋಟಿ ರೂ.ಗೂ ಅಧಿಕ ಅಕ್ರಮ ಪ್ರಕರಣ ದಾಖಲಾದರೆ ಅದರ ತನಿಖೆ ಸಿಬಿಐ ನಡೆಸಬೇಕು ಎಂದು ಆರ್‌ಬಿಐ (RBI) ನಿಯಮ ಹೇಳುತ್ತದೆ.
ಹೀಗಾಗಿ ಈ ಪ್ರಕರಣದಲ್ಲಿ 94 ಕೋಟಿ ರೂ. ಅಕ್ರಮ ನಡೆದಿರುವ ಹಿನ್ನೆಲೆಯಲ್ಲಿ ಸಿಬಿಐ ಕೇಸ್ ದಾಖಲಿಸಿ ತನಿಖೆ ನಡೆಸುವ ಸಾಧ್ಯತೆ ಹೆಚ್ಚಿದ್ದು ಕೇಂದ್ರದಲ್ಲಿ ಹೊಸ ಸರ್ಕಾರ ಬಂದ ನಂತರ ಅಂದರೆ ಜೂನ್ 9ರ ಬಳಿಕ ಈ ವಿಚಾರ ಸ್ಪಷ್ಟವಾಗಲಿದೆ.
ಸಿಬಿಐ ಯಾವೆಲ್ಲ ತನಿಖೆ ಮಾಡುತ್ತೆ?: ಉನ್ನತ ಸ್ಥಾನಗಳಲ್ಲಿ ಭ್ರಷ್ಟಾಚಾರ, ಗಂಭೀರ ವಂಚನೆ, ಸಾಮಾಜಿಕ ಅಪರಾಧ ಮತ್ತು ಲಾಭಕೋರತನಕ್ಕೆ ಸಂಬಂಧಿಸಿದ ಗಂಭೀರ ಅಪರಾಧಗಳು, ಹತ್ಯೆಗಳು, ಅಪಹರಣಗಳು ಮುಂತಾದ ಸಾಂಪ್ರದಾಯಿಕ ಅಪರಾಧಗಳ ತನಿಖೆಯನ್ನು ಸಿಬಿಐ ಮಾಡುತ್ತದೆ.
ನಕಲಿ ಭಾರತೀಯ ಕರೆನ್ಸಿ ನೋಟುಗಳಿಗೆ ಸಂಬಂಧಿಸಿದ ಅಪರಾಧ, ಬ್ಯಾಂಕ್ ವಂಚನೆಗಳು ಮತ್ತು ಸೈಬರ್ ಅಪರಾಧ, ಮಾದಕವಸ್ತುಗಳು, ಪ್ರಾಚೀನ ವಸ್ತುಗಳು ಸಾಂಸ್ಕೃತಿಕ ಆಸ್ತಿಗಳ ದೊಡ್ಡ ಪ್ರಮಾಣದ ಕಳ್ಳಸಾಗಣೆ ಸೇರಿದಂತೆ ಪ್ರಮುಖ ಹಣಕಾಸು ಹಗರಣಗಳ ತನಿಖೆಯನ್ನು ಸಿಬಿಐ ಮಾಡುತ್ತದೆ.
ಒಂದು ವೇಳೆ ಪ್ರಕರಣದ ತನಿಖೆ ನಡೆಸುವಾಗ ವಿದೇಶದಲ್ಲಿ ಅಕ್ರಮ ಹಣ ವರ್ಗಾವಣೆ, ವಿದೇಶದಿಂದ ಅಕ್ರಮ ದೇಣಿಗೆ ಸ್ವೀಕರಿಸಿದ್ದಕ್ಕೆ ದಾಖಲೆಗಳು ಸಿಕ್ಕಿದರೆ ಆಗ ಪ್ರಕರಣಕ್ಕೆ ಜಾರಿ ನಿರ್ದೇಶನಾಲಯ ಪ್ರವೇಶ ಮಾಡುತ್ತದೆ.