KSRTC: 38 ತಿಂಗಳ ವೇತನ ಹೆಚ್ಚಳದ ಹಿಂಬಾಕಿ ಪಡೆಯಲು ಹೋರಾಟಕ್ಕೆ ಸಿದ್ಧ- 97ನೇ ಮಾಸಿಕ ಸಭೇಲಿ ನಿವೃತ್ತದ ನಿರ್ಧಾರ

ಬೆಂಗಳೂರು: ಬಿಎಂಟಿಸಿ ಹಾಗೂ ಕೆಎಸ್ಆರ್‌ಟಿಸಿ, ಚಿಕ್ಕಬಳ್ಳಾಪುರ ಕೆಎಸ್ಆರ್‌ಟಿಸಿ ನಿವೃತ್ತ ನೌಕರರ ಟ್ರಸ್ಟ್ ವತಿಯಿಂದ ಲಾಲ್ ಬಾಗ್ ಆವರಣದಲ್ಲಿ ಭಾನುವಾರ ಫೆ.1ರಂದು ಹಮ್ಮಿಕೊಂಡಿದ್ದ ಇಪಿಎಸ್-95 ಪಿಂಚಿಣಿದಾರರ 97ನೇ ಮಾಸಿಕ ಸಭೆ ಅತ್ಯಂತ ಯಶಸ್ವಿಯಾಗಿ ಜರುಗಿತು.

ಈ ಸಭೆಯಲ್ಲಿ 2020ರ ನಂತರ ನಿವೃತ್ತರಾದ ಬಿಎಂಟಿಸಿ ಹಾಗೂ ಕೆಎಸ್ಆರ್‌ಟಿಸಿ ನೌಕರರು ತಮ್ಮ ನಿವೃತ್ತಿಯ ನಂತರ ಸಂಸ್ಥೆಯಿಂದ ತಮಗೆ ಬರಬೇಕಾದ 38 ತಿಂಗಳ ವೇತನ ಪರಿಷ್ಕರಣಾ ಬಾಕಿ, ಪಿಎಫ್, ರಜೆ ನಗರೀಕರಣ ಹಾಗೂ ಹೈಯರ್ ಪೆನ್ಷನ್ (higher pension), ಇತ್ಯಾದಿ ಬಾಕಿ ಮೊತ್ತಕ್ಕೆ ಸಂಬಂಧಿಸಿದಂತೆ, ಸಭೆಯಲ್ಲಿ ಸದಸ್ಯರು ದನಿಯೆತ್ತಿದರು.
ಈ ವೇಳೆ ಇತ್ತೀಚೆಗೆ ಸಾರಿಗೆ ಸಂಸ್ಥೆಯಲ್ಲಿ ನಿವೃತ್ತರಾದ ನೌಕರರು, ಪ್ರತಿ ಜಿಲ್ಲೆಯಲ್ಲಿಯೂ ತಮ್ಮದೇ ಆದ ಸಂಘವನ್ನು ಸ್ಥಾಪಿಸಿಕೊಂಡು, ಹೋರಾಟ ಮಾಡಲು ಸಿದ್ದರಾಗಬೇಕು, ನಿಮಗೆ ಬೇಕಾದ ಅವಶ್ಯ ದಾಖಲೆಗಳನ್ನು ನೀಡಲಾಗುವುದು ಎಂದು ಸಭೆಯಲ್ಲಿ ತೀರ್ಮಾನಿಸಲಾಯಿತು ಎಂದು ಸಭೆಯಲ್ಲಿ ತೀರ್ಮಾನಿಸಲಾಯಿತು ಎಂದು ಬಿಎಂಟಿಸಿ & ಕೆಎಸ್‌ಆರ್‌ಟಿಸಿ ನಿವೃತ್ತ ನೌಕರರ ಸಂಘ ಅಧ್ಯಕ್ಷ ನಂಜುಂಡೇಗೌಡ ತಿಳಿಸಿದ್ದಾರೆ.

ಇನ್ನು ಅಧಿಕ ಹೆಚ್ಚುವರಿ ಪಿಂಚಣಿಗೆ ಸಂಬಂಧಿಸಿದಂತೆ ಸರ್ವೋಚ್ಚ ನ್ಯಾಯಾಲಯವು ನೀಡಿರುವ ತೀರ್ಪು ಹಾಗೂ ವಿವಿಧ ರಾಜ್ಯಗಳ ಉಚ್ಚ ನ್ಯಾಯಾಲಯಗಳು ನೀಡಿರುವ ತೀರ್ಪಿನ ಬಗ್ಗೆ ಪರಾಮರ್ಶೆ ನಡೆಸಿ, ನ್ಯಾಯಾಲಯಗಳ ತೀರ್ಪುಗಳನ್ನು ಅನುಷ್ಠಾನಗೊಳಿಸುವಂತೆ ಆಗ್ರಹಿಸಿ, ಪಿಎಫ್ ಕಚೇರಿ ಆವರಣದಲ್ಲಿ ಕಳೆದ ವಾರ ಇಪಿಎಸ್ ನಿವೃತ್ತರು ನಡೆಸಿದ ಪ್ರತಿಭಟನೆ ಸಾರ್ವಜನಿಕರಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿದೆ ಎಂದು ಸಭೆಯಲ್ಲಿ ಚರ್ಚಿಸಲಾಯಿತು.
ಈ ಮಾಸಿಕ ಸಭೆಗೆ ವಿಶೇಷ ಆಹ್ವಾನಿತರಾಗಿ ಆಗಮಿಸಿದ ಸಿಐಟಿಯು ಪ್ರಧಾನ ಕಾರ್ಯದರ್ಶಿ ಎಚ್.ಎಸ್.ಮಂಜುನಾಥ್ ಅವರು ಮಾತನಾಡಿ, ಸಂಸ್ಥೆಯಿಂದ ನಿವೃತ್ತರಾದ ಹಾಗೂ ಹಾಲಿ ಸೇವೆಯಲ್ಲಿರುವ ನೌಕರರು ಆರ್ಥಿಕ ಸಂಕಷ್ಟಗಳನ್ನು ಎದುರಿಸುತ್ತಿದ್ದು, ಪ್ರತಿ ನಾಲ್ಕೂ ವರ್ಷಗಳಿಗೊಮ್ಮೆ ಜರುಗುವ ವೇತನ ಪರಿಷ್ಕರಣೆ ಸಂದರ್ಭದಲ್ಲಿ ಹೋರಾಟದ ಮೂಲಕವೇ? ಉಪವಾಸ ಸತ್ಯಾಗ್ರಹ, ಮುಷ್ಕರ ಮಾಡುವ ಮೂಲಕ ಪಡೆಯಬೇಕಾಗಿರುವುದು ಅತ್ಯಂತ ದುರಾದೃಷ್ಟಕರ ಸಂಗತಿ ಎಂದು ಅಸಮಾಧಾನ ವ್ಯಕ್ತಪಡಿಸಿದ ಅವರು, ಇನ್ನು ಈ ಎಲ್ಲ ಪಡೆಯುವುದಕ್ಕಾಗಿ ನಾವೆಲ್ಲರೂ ಸಂಘಟಿತರಾಗಿ ಹೋರಾಟ ಮಾಡಬೇಕು ಎಂದು ಕರೆ ನೀಡಿದರು.
ಸಂಘದ ಅಧ್ಯಕ್ಷ ನಂಜುಂಡೇಗೌಡ ಅವರು ಕಾನೂನಿಗೆ ಸಂಬಂಧಿಸಿದ ಎಲ್ಲ ಅಂಶಗಳ ಬಗ್ಗೆ ಸಭೆಯಲ್ಲಿ ಪ್ರಸ್ತಾಪಿಸಿ, ನಮ್ಮಲ್ಲಿ ಕಾಯುವ ತಾಳ್ಮೆಯಿದ್ದಲ್ಲಿ, ನ್ಯಾಯಕ್ಕೆ ಇಂದಲ್ಲ, ನಾಳೆ ಜಯ ಶತಸಿದ್ಧ ಎಂದು ಹೇಳಿದರು.
ಚಿಕ್ಕಬಳ್ಳಾಪುರ ಕೆಎಸ್ಆರ್‌ಟಿಸಿ ನಿವೃತ್ತ ನೌಕರರ ಟ್ರಸ್ಟ್ ಅಧ್ಯಕ್ಷ ಬ್ರಹ್ಮಚಾರಿ ಮಾತನಾಡಿ, ಉಗ್ರ ಪ್ರತಿಭಟನೆಯಿಂದ ಮಾತ್ರ ಕೇಂದ್ರ ಸರ್ಕಾರವನ್ನು ಮಣಿಸಲು ಸಾಧ್ಯ, ಅದಕ್ಕಾಗಿ ತಾವೆಲ್ಲರೂ ಸಿದ್ಧರಾಗಬೇಕು ಎಂದು ಸಲಹೆ ನೀಡಿದರು.

ಅಗಲಿದ ಅನಂತ ಸುಬ್ಬರಾವ್‌ಗೆ ಶ್ರದ್ಧಾಂಜಲಿ: ಇದಕ್ಕೂ ಮುನ್ನ ಮೈ ಕೊರೆಯುವ ಚಳಿಯನ್ನು ಲೆಕ್ಕಿಸದೆ, ಎಂದಿನಂತೆ ಸದಸ್ಯರು ಮಾಸಿಕ ಸಭೆಗೆ ಆಗಮಿಸಿದ್ದರು. ಸಭೆಯಲ್ಲಿ ಮುಖ್ಯವಾಗಿ ಚರ್ಚಿಸಿ, ನಿರ್ಣಯಿಸಿದ ಅಂಶವೇನೆಂದರೆ, ಅಗಲಿದ ಮಹಾನ್ ಚೇತನ, ಕಾಮ್ರೇಡ್ ಅನಂತ ಸುಬ್ಬರಾವ್ ಅವರ ಆತ್ಮಕ್ಕೆ ಶಾಂತಿ ಕೋರಿ ಎರಡು ನಿಮಿಷ ಮೌನ ಆಚರಿಸುವ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಕೆಎಸ್ಆರ್‌ಟಿಸಿ ಸ್ಟಾಫ್ ಅಂಡ್ ವರ್ಕರ್ಸ್ ಫೆಡರೇಶನ್ ಅಧ್ಯಕ್ಷರು, ನಾಲ್ಕೂ ಸಾರಿಗೆ ನಿಗಮಗಳ ಜಂಟಿ ಕ್ರಿಯಾ ಸಮಿತಿ ಮುಖಂಡರು ಆಗಿದ್ದ, ಅನಂತ ಸುಬ್ಬರಾವ್ ಅವರು ಕಳೆದ ಐದು ದಶಕಗಳಿಂದ ಸಂಸ್ಥೆಯಲ್ಲಿ ಕಾರ್ಮಿಕರ ಹಕ್ಕುಗಳಿಗಾಗಿ ನಡೆಸಿದ ಹೋರಾಟ ಅವಿಸ್ಮರಣೀಯ ಎಂದು ಸಭೆಯಲ್ಲಿ ಚರ್ಚಿಸಿ ನಿರ್ಣಯಿಸಲಾಯಿತು.
ನಿರಾಸೆ ತಂದ ಬಜೆಟ್-ಇಪಿಎಸ್ ಪಿಂಚಣಿದಾರರ ಅಸಮಾಧಾನ: ಸಭೆಯಲ್ಲಿ ತೀವ್ರ ಚರ್ಚೆಗೆ ಗ್ರಾಸವಾದ ಅಂಶಗಳೇನೆಂದರೆ?. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು 2025-26ನೇ ಸಾಲಿನ ಬಜೆಟ್ ಮಂಡಿಸಲಿದ್ದು, ಇಂದಾದರೂ ನಿವೃತ್ತರ ಆಶೋತ್ತರಗಳು ಈಡೇರುತ್ತವೆ ಎಂಬ ನಿರೀಕ್ಷೆಯಲ್ಲಿದ್ದೇವೆ ಎಂದು ಮುಖಂಡರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಈ ಬಜೆಟ್ ಅಧಿವೇಶನದಲ್ಲಿ ನಮ್ಮ ಸಂಸದರು ಇಪಿಎಸ್ ನಿವೃತ್ತರ ಪರ ಧ್ವನಿ ಎತ್ತಿ, ನಮ್ಮ ಮೂಲಭೂತ ಬೇಡಿಕೆಗಳನ್ನು ಚರ್ಚಿಸಿ, 7,500 ರೂ. + ಭತ್ಯೆ ನೀಡುತ್ತಾರೆ ಎಂದು ದೇಶಾದ್ಯಂತ ಇರುವ 78 ಲಕ್ಷ ನಿವೃತ್ತ ನೌಕರರು ಜಾತಕ ಪಕ್ಷಿಗಳಂತೆ ಕಾಯುತ್ತಿದ್ದು, ಬೇಡಿಕೆ ಈಡೇರಿಸಬೇಕೆಂದು ಆಗ್ರಹಿಸಿದರು. ಆದರೆ ಬಜೆಟ್‌ನಲ್ಲಿ ಈ ನಿವೃತ್ತ ನೌಕರರ ಪರ ಯಾವೊಂದು ತೀರ್ಮಾನವನ್ನು ತೆಗೆದುಕೊಂಡಿಲ್ಲ ಎಂಬ ವಿಷಯ ಕೇಳಿ ಭಾರಿ ನೋವಾಯಿತು ಎಂದು ಎಲ್ಲ ಇಪಿಎಸ್ ಪಿಂಚಣಿದಾರರು ಅಸಮಾಧಾನ ವ್ಯಕ್ತಪಡಿಸಿದರು.
ಸಂಘದ ಪದಾಧಿಕಾರಿಗಳಾದ ನಾಗರಾಜು, ಕೃಷ್ಣಮೂರ್ತಿ ಹಾಗೂ ನೌಕರರ ಮಹಾಮಂಡಳದ ಕಾರ್ಯದರ್ಶಿ ಕೆ.ಎಲ್.ಮಂಜುನಾಥ್ ಇದ್ದು, ಅರ್ಥ ಪೂರ್ಣ ಚರ್ಚೆಯೊಂದಿಗೆ, ಸಭೆಯ ನಿರ್ವಹಣೆಯನ್ನು ಅತ್ಯಂತ ಯಶಸ್ವಿಯಾಗಿ ನಡೆಸಿಕೊಟ್ಟರು. ಸಂಘದ ಸಂಘಟನಾ ಕಾರ್ಯದರ್ಶಿ ಮನೋಹರ್ ಅವರು ಎಲ್ಲ ಇಪಿಎಸ್ ನಿವೃತ್ತರನ್ನು ಸ್ವಾಗತಿಸಿದರು.
Related









