4-6 ತಿಂಗಳಿನಲ್ಲಿ ಬೆಂಗಳೂರಿನ ರಸ್ತೆಗಳಿಗೆ ಹೊಸ ಲುಕ್: ಸಚಿವ ಕೃಷ್ಣ ಬೈರೇಗೌಡ
ನಗರದ ಆರ್ಟೀರಿಯಲ್ ಮತ್ತು ಸಬ್ ಆರ್ಟೀರಿಯಲ್ ರಸ್ತೆಗಳನ್ನು ಹೊರತುಪಡಿಸಿ, ಹದಗೆಟ್ಟಿರುವ ವಾರ್ಡ್ ರಸ್ತೆಗಳ ಅಭಿವೃದ್ಧಿಗೆ 2000 ಕೋಟಿ ರೂ. ವಿಶೇಷ ಅನುದಾನ ಬಿಡುಗಡೆ ಮಾಡಲಾಗಿದೆ. ಅಧ್ವಾನವಾಗಿರುವ ವಾರ್ಡ್ ರಸ್ತೆಗಳನ್ನು ಗುರುತಿಸಿ ಹೊಸದಾಗಿ ಡಾಂಬರ್ ಹಾಕಲು ಅಂದಾಜು ಪಟ್ಟಿ ಸಿದ್ಧಪಡಿಸಿ, ಅಲ್ಪಾವಧಿ ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಿ ಕೂಡಲೇ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲು ಆದೇಶ ಹೊರಡಿಸಲಾಗಿದೆ

ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರಾಧಿಕಾರದ (ಜಿಬಿಎ) ವ್ಯಾಪ್ತಿಯಲ್ಲಿನ ಐದು ನಗರ ಪಾಲಿಕೆಗಳಲ್ಲಿನ ವಾರ್ಡ್ ರಸ್ತೆಗಳ ಅಭಿವೃದ್ಧಿಗೆ 2 ಸಾವಿರ ಕೋಟಿ ರೂ. ವಿಶೇಷ ಅನುದಾನ ಬಿಡುಗಡೆ ಮಾಡಲಾಗಿದೆ ಎಂದು ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.
ಇನ್ನು ಈ ಅನುದಾನವನ್ನು ಹಾಳಾಗಿರುವ ರಸ್ತೆಗಳನ್ನು ಗುರುತಿಸಿ, ಟೆಂಡರ್ ಕರೆದು ಅಭಿವೃದ್ಧಿ ಕಾಮಗಾರಿಗಳಿಗೆಳಿಗೆ ಬಳಸಿಕೊಳ್ಳಲು ಪ್ರಾರಂಭಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಸುದ್ದಿಗಾರರಿಗೆ ತಿಳಿಸಿದರು.
ಸಿಎಂ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಹೊಸ ಸರ್ಕಾರ ಅಧಿಕಾರ ಸ್ವೀಕರಿಸಿದ ಬಳಿಕ ಜನರ ನಿರೀಕ್ಷೆಗಳು ಹೆಚ್ಚಾಗಿವೆ. ಅದಕ್ಕೆ ತಕ್ಕಂತೆ ಕೆಲಸ ಮಾಡಲು ಹಲವು ಯೋಜನೆಗಳನ್ನು ರೂಪಿಸಲಾಗುತ್ತಿದೆ. ಮುಖ್ಯಮಂತ್ರಿ ಶಿವಕುಮಾರ್ ನೇತೃತ್ವದಲ್ಲಿ ಕೈಗೊಂಡಿರುವ ತೀರ್ಮಾನಗಳನ್ನು ತ್ವರಿತವಾಗಿ ಮತ್ತು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ನಿರ್ದೇಶನ ನೀಡಿದ್ದೇನೆ ಎಂದರು.
ಇನ್ನು ನಗರದ ಆರ್ಟೀರಿಯಲ್ ಮತ್ತು ಸಬ್ ಆರ್ಟೀರಿಯಲ್ ರಸ್ತೆಗಳನ್ನು ಹೊರತುಪಡಿಸಿ, ಹದಗೆಟ್ಟಿರುವ ವಾರ್ಡ್ ರಸ್ತೆಗಳ ಅಭಿವೃದ್ಧಿಗೆ 2000 ಕೋಟಿ ರೂ. ವಿಶೇಷ ಅನುದಾನ ಬಿಡುಗಡೆ ಮಾಡಲಾಗಿದೆ. ಅಧ್ವಾನವಾಗಿರುವ ವಾರ್ಡ್ ರಸ್ತೆಗಳನ್ನು ಗುರುತಿಸಿ ಹೊಸದಾಗಿ ಡಾಂಬರ್ ಹಾಕಲು ಅಂದಾಜು ಪಟ್ಟಿ ಸಿದ್ಧಪಡಿಸಿ, ಅಲ್ಪಾವಧಿ ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಿ ಕೂಡಲೇ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲು ಆದೇಶ ಹೊರಡಿಸಲಾಗಿದೆ ಎಂದು ವಿವರಿಸಿದರು.
ಜಿಬಿಎ ಮುಖ್ಯ ಆಯುಕ್ತರು ಹಾಗೂ 5 ನಗರ ಪಾಲಿಕೆಗಳ ಆಯುಕ್ತರು ತಮ್ಮ ವ್ಯಾಪ್ತಿಯಲ್ಲಿನ ಹದಗೆಟ್ಟಿರುವ ರಸ್ತೆಗಳ ಪಟ್ಟಿ ಮಾಡಬೇಕು. ಬಳಿಕ ಎಲ್ಲ ಅಗತ್ಯ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿ, ಆದಷ್ಟು ಶೀಘ್ರವಾಗಿ ಕಾಮಗಾರಿಗಳನ್ನು ಶುರು ಮಾಡಬೇಕೆಂದು ಸೂಚಿಸಿದ್ದೇನೆ ಎಂದರು.
4-6 ತಿಂಗಳೊಳಗೆ ಬೆಂಗಳೂರು ರಸ್ತೆಗಳಿಗೆ ಹೊಸ ಲುಕ್ ಬರಬೇಕು: ವಾರ್ಡ್ ರಸ್ತೆಗಳ ಅಭಿವೃದ್ಧಿ ಸಂಬಂಧ ಅಂದಾಜು ಪಟ್ಟಿ ಹಾಗೂ ಟೆಂಡರ್ ಪ್ರಕ್ರಿಯೆಯನ್ನು ಎರಡು ತಿಂಗಳೊಳಗೆ ಪೂರ್ಣಗೊಳಿಸಿ, 4 ರಿಂದ 6 ತಿಂಗಳ ಅವಧಿಯಲ್ಲಿ ಕಾಮಗಾರಿಗಳನ್ನು ಮುಗಿಸುವ ಗುರಿ ಹೊಂದಲಾಗಿದೆ. ಗುಣಮಟ್ಟದಲ್ಲಿ ಯಾವುದೇ ರಾಜಿ ಮಾಡಿಕೊಳ್ಳದೆ ಮಳೆಯಿಲ್ಲದ ಸಂದರ್ಭದಲ್ಲಿ ಅಗತ್ಯ ಕಾಮಗಾರಿಗಳನ್ನು ಕೈಗೊಳ್ಳಲಾಗುವುದು.
ಪ್ರಮಾಣಿತ ಕಾರ್ಯ ವಿಧಾನದ ಅನುಸಾರ ಸಂಬಂಧಿತ ಎಲ್ಲ ಅಂಗ ಸಂಸ್ಥೆಗಳೊಂದಿಗೆ ಸಮನ್ವಯ ಸಾಧಿಸಿ ಡಾಂಬರೀಕರಣ ಕಾಮಗಾರಿ ಕೈಗೊಳ್ಳಲಾಗುವುದು. ಪೂರ್ವಾನುಮತಿ ಪಡೆಯದೆ ರಸ್ತೆಗಳನ್ನು ಅಗೆಯದಂತೆ ಕಟ್ಟುನಿಟ್ಟಿನ ಕ್ರಮ ವಹಿಸಲಾಗುವುದು ಎಂದು ಹೇಳಿದರು.
ಐ ಫೀಲ್ ವೆರಿ ಬ್ಯಾಡ್: ರಸ್ತೆ ಡಾಂಬರೀಕರಣ ಕಾಮಗಾರಿ ನಡೆಯುವ ಸಂದರ್ಭದಲ್ಲಿ ಖುದ್ದು ನಾನೇ ಸ್ಥಳ ಪರಿಶೀಲನೆ ನಡೆಸುತ್ತೇನೆ. ಅಧಿಕಾರಿಗಳಿಗೂ ನಿಯಮಿತ ಪರಿಶೀಲನೆ ನಡೆಸುವಂತೆ ಸೂಚಿಸಲಾಗಿದೆ. ರಸ್ತೆ ಗುಣಮಟ್ಟ ಹೆಚ್ಚಿಸುವುದು ನಮ್ಮ ಆದ್ಯತೆಯಾಗಿದ್ದು, ಗುಣಮಟ್ಟದಲ್ಲಿ ಯಾವುದೇ ರಾಜಿ ಇರುವುದಿಲ್ಲ ಎಂದ ಅವರು, ಬೆಂಗಳೂರು ರಸ್ತೆ ಗುಂಡಿಗಳ ಬಗ್ಗೆ ಸಾರ್ವಜನಿಕರು ಹೇಳಿದ ಪರಿ ಐ ಫೀಲ್ ವೆರಿ ಬ್ಯಾಡ್ ಎಂಬ ರೀತಿ ಇತ್ತು ಎಂದರು.
ಅಧಿಕಾರಿಗಳ ವಿರುದ್ಧ ಕ್ರಮ: ಸಚಿವ ಕೃಷ್ಣ ಬೈರೇಗೌಡ ಅವರು ಘನತ್ಯಾಜ್ಯ ನಿರ್ವಹಣೆ ಸಂಬಂಧ ಮೊನ್ನೆ ಅಧಿಕಾರಿಗಳೊಂದಿಗೆ ಸುದೀರ್ಘ ಸಭೆ ನಡೆಸಿದ್ದಾರೆ. ಈ ವೇಳೆ ಮುಂದಿನ ದಿನಗಳಲ್ಲಿ ವಿಂಗಡಿಸದ ಕಸ ಸ್ವೀಕರಿಸುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಹಾಗೂ ಅಂತಹ ಕಸ ಸಂಗ್ರಹಿಸುವ ಗುತ್ತಿಗೆದಾರರಿಗೆ ದಂಡ ವಿಧಿಸಲಾಗುವುದು ಎಂದು ಸಚಿವರು ಎಚ್ಚರಿಕೆ ನೀಡಿದ್ದಾರೆ.







