7ಕೋಟಿಗೂ ಹೆಚ್ಚು ಮಂದಿಗೆ ಸಿಹಿಸುದ್ದಿ: UPI-ATMನಲ್ಲಿ ಶೇ.75ರಷ್ಟು ಪಿಎಫ್ ಹಣ ವಿತ್ಡ್ರಾಗೆ ಅವಕಾಶ- ಜೂನ್ ಅಂತ್ಯದಿಂದ ಜಾರಿ ಸಾಧ್ಯತೆ
ಪಿಎಫ್ ಕ್ಲೈಮ್ನ ಆಟೋಸೆಟಲ್ಮೆಂಟ್ ಮಿತಿಯನ್ನು 1 ಲಕ್ಷ ರೂ.ಗಳಿಂದ 5 ಲಕ್ಷ ರೂ.ಗಳವರೆಗೆ ಏರಿಕೆ ಮಾಡಲಾಗಿದೆ. ಇನ್ನು ಇದಕ್ಕಾಗಿ ಫಲಾನುಭವಿಗಳು ಉಮಂಗ್ ಆ್ಯಪ್ನಲ್ಲಿ ಫೇಸ್ ಅಥೆಂಟಿಕೇಷನ್ ತಂತ್ರಜ್ಞಾನವನ್ನು ಬಳಸಬೇಕಿದೆ.

ನ್ಯೂಡೆಲ್ಲಿ: ನೌಕರಿಯಲ್ಲಿದ್ದು ಪಿಎಫ್ ಸೌಲಭ್ಯ ಹೊಂದಿರುವ ಖಾಸಗಿ ಹಾಗೂ ಸರ್ಕಾರಿ ನೌಕರರಿಗೆ ಕೇಂದ್ರ ಸರ್ಕಾರ ಗುಡ್ ನ್ಯೂಸ್ ನೀಡಿದೆ. ಇನ್ನು ಮುಂದೆ ಯುಪಿಐ ಇಲ್ಲ ಎಟಿಎಂ ಬಳಸಿಕೊಂಡು ನೀವು ನಿಮ್ಮ ಪಿಎಫ್ ಖಾತೆಯಲ್ಲಿರುವ ಶೇ.75ರಷ್ಟು ಹಣವನ್ನು ಪಡೆಯುವುದಕ್ಕೆ (ವಿತ್ಡ್ರಾಗೆ) ಅವಕಾಶ ಕಲ್ಪಿಸಿಕೊಟ್ಟಿದೆ.
ಈ ಬಗ್ಗೆ ಕೇಂದ್ರ ಕಾರ್ಮಿಕ ಸಚಿವ ಮನ್ಸುಖ್ ಮಾಂಡವೀಯ ಅವರು ಸುಳಿವು ನೀಡಿದ್ದು, ಬ್ಯಾಂಕ್ ಖಾತೆ ಹೊಂದಿರುವ ಯುಪಿಐಗಳು, ಇಪಿಎಫ್ ಲಿಂಕ್ ಹೊಂದಿರುವ ಎಟಿಎಂಗಳಲ್ಲಿ ಶೇ.75ರಷ್ಟು ಪಿಎಫ್ ಹಣವನ್ನು ಬಳಸಿಕೊಳ್ಳಲು ಅವಕಾಶವಿದೆ ಎಂದು ತಿಳಿಸಿದ್ದಾರೆ.
ಇನ್ನು ಈ ಸೌಲಭ್ಯವು ಇದೇ ಜೂನ್ ತಿಂಗಳ ಅಂತ್ಯದಿಂದ ಜಾರಿಗೆ ಬರುವ ಸಾಧ್ಯತೆ ಇದೆ. ಇನ್ನು ಈ ಬಗ್ಗೆ ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ ಜತೆ ಪ್ರಾಯೋಗಿಕ ಪರೀಕ್ಷೆಗಳೂ ಈಗಾಗಲೇ ನಡೆದಿದ್ದು ಅವುಕೂಡ ಪೂರ್ಣಗೊಂಡಿವೆ.
ಇದರ ಜತೆಗೆ ಇಪಿಎಫ್ಓ 3.0ಗೆ ಸುಧಾರಣೆ ತರಲಾಗಿದ್ದು, ಪಿಎಫ್ ಕ್ಲೈಮ್ನ ಆಟೋಸೆಟಲ್ಮೆಂಟ್ ಮಿತಿಯನ್ನು 1 ಲಕ್ಷ ರೂ.ಗಳಿಂದ 5 ಲಕ್ಷ ರೂ.ಗಳವರೆಗೆ ಏರಿಕೆ ಮಾಡಲಾಗಿದೆ. ಇನ್ನು ಇದಕ್ಕಾಗಿ ಫಲಾನುಭವಿಗಳು ಉಮಂಗ್ ಆ್ಯಪ್ನಲ್ಲಿ ಫೇಸ್ ಅಥೆಂಟಿಕೇಷನ್ ತಂತ್ರಜ್ಞಾನವನ್ನು ಬಳಸಬೇಕಿದೆ.
ಪಿಎಫ್ ಬಡ್ಡಿದರ 8.25ಕ್ಕೆ ನಿಗದಿ: ಈ ಮಧ್ಯೆ, ಪ್ರಸ್ತುತ ಹಣಕಾಸು ವರ್ಷದಲ್ಲಿ ಪಿಎಫ್ ಬಡ್ಡಿದರವನ್ನು 8.25ಕ್ಕೆ ನಿಗದಿ ಮಾಡಲಾಗಿದ್ದು, ಈ ತಿಂಗಳಿನಿಂದಲೇ ಅನ್ವಯವಾಗಲಿದೆ. ಈ ಹಿಂದೆ ಅಂದರೆ, 2025ನೇ ಹಣಕಾಸು ವರ್ಷದಲ್ಲೂ ಪಿಎಫ್ ಬಡ್ಡಿದರ ಶೇ.8.25ಕ್ಕೆ ನಿಗದಿ ಮಾಡಲಾಗಿತ್ತು.
ಈಗ ಮತ್ತೆ 2026ನೇ ಹಣಕಾಸು ವರ್ಷದಲ್ಲಿ ನೌಕರರ ಭವಿಷ್ಯ ನಿಧಿ(EPF)ಯ ಮೇಲಿನ ಬಡ್ಡಿದರವನ್ನು ಶೇ.8.25 ಮುಂದುವರೆಸಲು ಕೇಂದ್ರ ಸರ್ಕಾರ ಕಳೆದ ಜೂನ್ನಲ್ಲಿ ಅಂದರೆ ಇದೇ ತಿಂಗಳು ಅನುಮೋದಿಸಿದೆ. ಇದರಿಂದಾಗಿ ಇಪಿಎಫ್ಒನ 7 ಕೋಟಿಗೂ ಹೆಚ್ಚು ಚಂದಾದಾರರಿಗೆ ಅನುಕೂಲವಾಗಿದೆ.
2022-23ರಲ್ಲಿ ಪಿಎಫ್ ಮೇಲಿನ ಬಡ್ಡಿದರವನ್ನು ಶೇ. 8.15ಕ್ಕೆ ಇಳಿಸಿತ್ತು. ಆದರೆ, ಇದನ್ನು 2023-24 ಹಾಗೂ 2024-25ನೇ ಸಾಲಿನಲ್ಲಿ ಶೇ. 8.25ಕ್ಕೆ ಹೆಚ್ಚಿಸಿತ್ತು. ಸದ್ಯ ಇದನ್ನು ಪ್ರಸಕ್ತ ಹಣಕಾಸು ವರ್ಷಕ್ಕೂ ಮುಂದುವರಿಸಲು ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ.
Related









