‘ಕರ್ತವ್ಯ’ ಆಪ್ ನೋಂದಣಿ ಶೇ.70.6 ರಷ್ಟು ಪ್ರಗತಿ – ಮಾಧ್ಯಮಗಳ ವರದಿಗೆ ಸರ್ಕಾರದ ಸ್ಪಷ್ಟನೆ
HRMS ದತ್ತಾಂಶದ ಪ್ರಕಾರ, ಒಟ್ಟು 43 ಪ್ರಮುಖ ಇಲಾಖೆಗಳು ಹಾಗೂ 137 ಸರಣಿ ಇಲಾಖೆಗಳು/ಸಂಸ್ಥೆಗಳ ವ್ಯಾಪ್ತಿಯಲ್ಲಿರುವ 4,78,181 ನೌಕರರ ಪೈಕಿ 3,37,748 (ಶೇ. 70.6) ನೌಕರರು ಈಗಾಗಲೇ ಆಪ್‌ನಲ್ಲಿ ಯಶಸ್ವಿಯಾಗಿ ನೋಂದಾಯಿಸಿಕೊಂಡಿದ್ದಾರೆ.

ಬೆಂಗಳೂರು: ಪ್ರಸ್ತುತ ‘ಕರ್ತವ್ಯ’ (KAAMS) ಯೋಜನೆಯಡಿ ಉದ್ಯೋಗಿಗಳ ನೋಂದಣಿ ಪ್ರಕ್ರಿಯೆಯು ಅತ್ಯಂತ ವೇಗವಾಗಿ ನಡೆಯುತ್ತಿದ್ದು, ಈಗಾಗಲೇ ಶೇ.70.6ಕ್ಕಿಂತಲೂ ಹೆಚ್ಚು ನೌಕರರು ಯಶಸ್ವಿಯಾಗಿ ನೋಂದಾಯಿಸಿಕೊಂಡಿದ್ದಾರೆ ಎಂದು ಸರ್ಕಾರ ತಿಳಿಸಿದೆ.
“ಕರ್ತವ್ಯ ಆಪ್‌ನಲ್ಲಿ 2.13 ಲಕ್ಷ ರಾಜ್ಯದ ಸರ್ಕಾರಿ ಉದ್ಯೋಗಿಗಳು ನೋಂದಣಿಯಾಗಿಲ್ಲ” ಎಂಬ ಕೆಲ ಮಾಧ್ಯಮಗಳಲ್ಲಿ ವರದಿಗಳು ಬಂದ ಹಿನ್ನೆಲೆಯಲ್ಲಿ ಸರ್ಕಾರ ಈ ಅಧಿಕೃತ ಸ್ಪಷ್ಟೀಕರಣ ನೀಡಿದೆ.
ವೇಗದ ಪ್ರಗತಿ: ಮಾಧ್ಯಮಗಳಲ್ಲಿ ಪ್ರಕಟವಾಗಿದ್ದ 2,13,925 ನೌಕರರ ಅಪೂರ್ಣ ನೋಂದಣಿಯ ಅಂಕಿ-ಅಂಶಗಳು ಜೂನ್ 12, 2026 ರವರೆಗಿನ ಮಾಹಿತಿಯಾಗಿದ್ದವು. ಆದರೆ ಕಳೆದ 4-5 ದಿನಗಳಲ್ಲಿ ನಡೆಸಲಾದ ವಿಶೇಷ ಆಂದೋಲನದಿಂದಾಗಿ ಈ ಸಂಖ್ಯೆ ಜೂನ್ 18ರ ವೇಳೆಗೆ 1,40,433ಕ್ಕೆ ಕುಸಿದಿದೆ. ಅಂದರೆ ಕೇವಲ ಒಂದು ವಾರದಲ್ಲಿ ನೋಂದಣಿಯಾಗದ ನೌಕರರ ಸಂಖ್ಯೆಯಲ್ಲಿ ಶೇ.34.4 ರಷ್ಟು ಭಾರಿ ಇಳಿಕೆಯಾಗಿದೆ.
ನೋಂದಣಿ ಸ್ಥಿತಿಗತಿ: ಮಾನವ ಸಂಪನ್ಮೂಲ ನಿರ್ವಹಣಾ ವ್ಯವಸ್ಥೆ (HRMS) ದತ್ತಾಂಶದ ಪ್ರಕಾರ, ಒಟ್ಟು 43 ಪ್ರಮುಖ ಇಲಾಖೆಗಳು ಹಾಗೂ 137 ಸರಣಿ ಇಲಾಖೆಗಳು/ಸಂಸ್ಥೆಗಳ ವ್ಯಾಪ್ತಿಯಲ್ಲಿರುವ 4,78,181 ನೌಕರರ ಪೈಕಿ 3,37,748 (ಶೇ. 70.6) ನೌಕರರು ಈಗಾಗಲೇ ಆಪ್‌ನಲ್ಲಿ ಯಶಸ್ವಿಯಾಗಿ ನೋಂದಾಯಿಸಿಕೊಂಡಿದ್ದಾರೆ.
ದೈನಂದಿನ ಸಕ್ರಿಯ ಬಳಕೆ: ಜೂನ್ 18ರ ಬೆಳಗ್ಗೆ 11ಗಂಟೆಯ ಒಳಗೆ ಒಟ್ಟು ನೋಂದಾಯಿತ ಬಳಕೆದಾರರಲ್ಲಿ ಸುಮಾರು ಶೇ.57 ರಷ್ಟು (1,92,605 ನೌಕರರು) ಉದ್ಯೋಗಿಗಳು ಆಪ್ ಮೂಲಕ ತಮ್ಮ ಹಾಜರಾತಿಯನ್ನು ದಾಖಲಿಸಿದ್ದಾರೆ. ಬಾಕಿ ಉಳಿದಿರುವ ಶೇ.29.4 ರಷ್ಟು ನೌಕರರ ನೋಂದಣಿಗಾಗಿ ಇ-ಆಡಳಿತ ಕೇಂದ್ರವು (CeG) ವಿಶೇಷ ತರಬೇತಿ ಮತ್ತು ನೋಂದಣಿ ಶಿಬಿರಗಳನ್ನು ಆಯೋಜಿಸಿದೆ. ತಾಂತ್ರಿಕ ಸಮಸ್ಯೆಗಳ ಪರಿಹಾರಕ್ಕಾಗಿ ನೋಡಲ್ ಅಧಿಕಾರಿಗಳು, ಸಹಾಯವಾಣಿ ಮತ್ತು ಎಐ (AI) ಆಧಾರಿತ ವಾಯ್ಸ್ ಬಾಟ್ ಸೌಲಭ್ಯವನ್ನು ಕಲ್ಪಿಸಲಾಗಿದೆ.
ಎಲ್ಲ ಅಧಿಕಾರಿಗಳು ಮತ್ತು ನೌಕರರು ನಿಗದಿತ ಸಮಯದೊಳಗೆ ಶೇ.100 ರಷ್ಟು ನೋಂದಣಿ ಪೂರ್ಣಗೊಳಿಸುವಂತೆ ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಎಲ್ಲ ಇಲಾಖಾ ಮುಖ್ಯಸ್ಥರಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದ್ದಾರೆ.
ಇನ್ನು ‘ಕರ್ತವ್ಯ’ ತಂತ್ರಾಂಶವು ಸರ್ಕಾರಿ ನೌಕರರ ಹಾಜರಾತಿಯಲ್ಲಿ ಪಾರದರ್ಶಕತೆ ಮತ್ತು ಹೊಣೆಗಾರಿಕೆಯನ್ನು ತರಲು ರೂಪಿಸಲಾದ ಕ್ರಾಂತಿಕಾರಿ ಹೆಜ್ಜೆಯಾಗಿದೆ ಎಂದು ಸರ್ಕಾರ ಪುನರುಚ್ಚರಿಸಿದೆ.
Related









