ತಪ್ಪಿಸಿಕೊಳ್ಳಲು ಯತ್ನಿಸಿದ ಕೊಲೆ ಪ್ರಕರಣದ ಪ್ರಮುಖ ಆರೋಪಿ: ಕಾಲಿಗೆ ಹಾಡುಹಗಲೇ ಗುಂಡು ಹಾರಿಸಿ ಬಂಧಿಸಿದ ಪೊಲೀಸರು
ಘಟನಾ ಸ್ಥಳಕ್ಕೆ ಮಂಡ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ಡಾ.ವಿ.ಜೆ. ಶೋಭಾರಾಣಿ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. "ಸ್ಥಳ ಮಹಜರು ವೇಳೆ ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿ ತಪ್ಪಿಸಿಕೊಳ್ಳಲು ಯತ್ನಿಸಿದಾಗ, ಕಿರುಗಾವಲು ಸಿಪಿಐ ಶ್ರೀಧರ್ ಅವರ ಸಮ್ಮುಖದಲ್ಲಿ ಪಿಎಸ್‌ಐ ರವಿಕುಮಾರ್ ಆರೋಪಿ ಮೇಲೆ ಫೈರಿಂಗ್ ಮಾಡಿ ಬಂಧಿಸಿದ್ದಾರೆ ಎಂದು ಎಸ್‌ಪಿ ತಿಳಿಸಿದ್ದಾರೆ.

ಮಂಡ್ಯ: ಜಿಲ್ಲೆಯ ಮಳವಳ್ಳಿ ತಾಲೂಕಿನ ಭೀಮನಹಳ್ಳಿಯಲ್ಲಿ ಇತ್ತೀಚೆಗೆ ನಡೆದಿದ್ದ ಮಹೇಶ್ ಎಂಬುವವರ ಬರ್ಬರ ಕೊಲೆ ಪ್ರಕರಣದ ಪ್ರಮುಖ ಆರೋಪಿ ಕಾಲಿಗೆ ಹಾಡುಹಗಲೇ ಪೊಲೀಸರು ಗುಂಡು ಹಾರಿಸಿ ಬಂಧಿಸಿದ್ದಾರೆ.
ಈ ಘಟನೆ ಹಲಗೂರು ಸಮೀಪದ ಹುಲ್ಲೇಗಾಲ ಬಳಿ ಇಂದು ಗುರುವಾರ (ಜೂ.18) ಬೆಳಗ್ಗೆ ನಡೆದಿದೆ. ಕೊಲೆ ಪ್ರಕರಣದ ಮುಖ್ಯ ಆರೋಪಿ (A1) ಸಿದ್ದರಾಜು ಅಲಿಯಾಸ್ ‘ಸೀಜರ್ ಸಿದ್ದು’ ಎಂಬಾತನೇ ಪೊಲೀಸರ ಪೈರಿಂಗ್‌ನಿಂದ ಕಾಲುಗಾಯ ಮಾಡಿಕೊಂಡವನು. ಗಾಯಗೊಂಡ ಆರೋಪಿಯನ್ನು ಮಂಡ್ಯ ಸರ್ಕಾರಿ (ಮಿಮ್ಸ್) ಆಸ್ಪತ್ರೆಗೆ ದಾಖಲಿಸಲಾಗಿದೆ.
ಮೊನ್ನೆಯಷ್ಟೇ ಭೀಮನಹಳ್ಳಿ ನಿವಾಸಿ ಮಹೇಶ್ ಎಂಬಾತನನ್ನು ಮೆಸೇಜ್ ವಿಚಾರಕ್ಕೆ ಸಿದ್ದರಾಜು ಹಾಗೂ ಆತನ ಸಹಚರರು ಹತ್ಯೆ ಮಾಡಿದ್ದರು. ವಾಹನಗಳ ಸೀಜಿಂಗ್ ಕೆಲಸ ಮಾಡುತ್ತಿದ್ದ ಆರೋಪಿ ಸಿದ್ದರಾಜುನನ್ನು ಬಂಧಿಸಿದ್ದ ಕಿರುಗಾವಲು ಪೊಲೀಸರು, ಇಂದು ಮಹಜರು ಪ್ರಕ್ರಿಯೆಗಾಗಿ ಮಳವಳ್ಳಿ ತಾಲೂಕಿನ ಹಲಗೂರು ಸಮೀಪದ ಹುಲ್ಲೇಗಾಲಕ್ಕೆ ಕರೆದುಕೊಂಡು ಹೋಗಿದ್ದರು.
ಅಲ್ಲಿ ಸ್ಥಳ ಮಹಜರು ನಡೆಸುವ ವೇಳೆ ಆರೋಪಿ ಸಿದ್ದರಾಜು ಪೊಲೀಸರಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಆಗ ಕರ್ತವ್ಯದಲ್ಲಿದ್ದ ಪೊಲೀಸ್ ಸಿಬ್ಬಂದಿ ಮೇಲೆ ಏಕಾಏಕಿ ಹಲ್ಲೆ ನಡೆಸಿ ಎಸ್ಕೆಪ್ ಆಗಲು ಮುಂದಾಗಿದ್ದಾನೆ. ಪರಿಸ್ಥಿತಿ ಕೈಮೀರುತ್ತಿದ್ದಂತೆ ಎಚ್ಚೆತ್ತ ಪೊಲೀಸರು ಆತ್ಮರಕ್ಷಣೆಗಾಗಿ ಹಾಗೂ ಆರೋಪಿ ಬಂಧನಕ್ಕಾಗಿ ಕಾಲಿಗೆ ಗುಂಡು ಹಾರಿಸಿ ಕೆಡವಿದ್ದಾರೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಭೇಟಿ: ಘಟನಾ ಸ್ಥಳಕ್ಕೆ ಮಂಡ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ಡಾ.ವಿ.ಜೆ. ಶೋಭಾರಾಣಿ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. “ಸ್ಥಳ ಮಹಜರು ವೇಳೆ ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿ ತಪ್ಪಿಸಿಕೊಳ್ಳಲು ಯತ್ನಿಸಿದಾಗ, ಕಿರುಗಾವಲು ಸಿಪಿಐ ಶ್ರೀಧರ್ ಅವರ ಸಮ್ಮುಖದಲ್ಲಿ ಪಿಎಸ್‌ಐ ರವಿಕುಮಾರ್ ಆರೋಪಿ ಮೇಲೆ ಫೈರಿಂಗ್ ಮಾಡಿ ಬಂಧಿಸಿದ್ದಾರೆ ಎಂದು ಎಸ್‌ಪಿ ತಿಳಿಸಿದ್ದಾರೆ.
Related









