NEWSನಮ್ಮಜಿಲ್ಲೆ

KKRTC ಚಿಂಚೋಳಿ: ಇರಗಪಳ್ಳಿ ಗ್ರಾಮಕ್ಕೆ ದಶಕದ ನಂತರ ಬಸ್ ಸೌಲಭ್ಯ- ಗ್ರಾಮಸ್ಥರಲ್ಲಿ ಮನೆ ಮಾಡಿದ ಸಂಭ್ರಮ

ವಿಜಯಪಥ ಸಮಗ್ರ ಸುದ್ದಿ

ಚಿಂಚೋಳಿ: ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಯ ಚಿಂಚೋಳಿ ಘಟಕದಿಂದ ತಾಲೂಕಿನ ಇರಗಪಳ್ಳಿ ಗ್ರಾಮಕ್ಕೆ ಮತ್ತೆ ಅಂದರೆ ದಶಕದ ನಂತರ ಬಸ್ ಸೌಲಭ್ಯ ಕಲ್ಪಿಸಲಾಗಿದ್ದು ಗ್ರಾಮಸ್ಥರಲ್ಲಿ ಸಂಭ್ರಮ ಮನೆ ಮಾಡಿದೆ.

ಬಸ್‌ ನಿನ್ನೆ ಅಂದರೆ ಸೋಮವಾರ ಬಂದಾಗ, ಬಸ್‌ಗೆ ಬಾಳೆ ದಿಂಡು ಕಟ್ಟಿ, ಪೂಜೆ ಸಲ್ಲಿಸಿದ ಗ್ರಾಮಸ್ಥರು ಚಾಲಕ ಪ್ರಕಾಶ, ನಿರ್ವಾಹಕ ಮಾಳಪ್ಪ ಮತ್ತು ಸುಲೇಪೇಟ ಬಸ್ ನಿಲ್ದಾಣದ ನಿಯಂತ್ರಕರಾದ ಶಿವರಾಮರೆಡ್ಡಿ ಭಕ್ತಂಪಳ್ಳಿ ಅವರನ್ನು ಸನ್ಮಾನಿಸಿದರು.

ರಾಯಚೂರು ವನ್ನಾರಪಳ್ಳಿ ರಾಜ್ಯ ಹೆದ್ದಾರಿ 75ರಲ್ಲಿ ಬರುವ ಕೊರಡಂಪಳ್ಳಿಯಿಂದ ಇರಗಪಳ್ಳಿ ಗ್ರಾಮಕ್ಕೆ ತೆರಳುವ ರಸ್ತೆ ಸಂಪೂರ್ಣ ಹಾಳಾಗಿದ್ದರಿಂದ ಬಸ್ ಓಡಾಟವನ್ನು ದಶಕದ ಹಿಂದೆಯೇ ನಿಲ್ಲಿಸಲಾಗಿತ್ತು.

ಈಗ ಸಚಿವ ಡಾ.ಶರಣಪ್ರಕಾಶ ಪಾಟೀಲರು ರಸ್ತೆ ನಿರ್ಮಾಣಕ್ಕೆ ಅಗತ್ಯ ಅನುದಾನ ಮಂಜೂರು ಮಾಡಿಸಿದ್ದರಿಂದ ರಸ್ತೆ ಪುನರ್ ನಿರ್ಮಾಣ ಮಾಡಲಾಗಿದೆ. ಹೀಗಾಗಿ ಇದರಿಂದ ಗ್ರಾಮಕ್ಕೆ ದಶಕದ ನಂತರ ಮತ್ತೆ ಸಾರಿಗೆ ಬಸ್‌ ಸೌಕರ್ಯ ಒದಗಿ ಬಂದಿದೆ ಎಂದು ಗ್ರಾಮದ ಮುಖಂಡರು ತಿಳಿಸಿದ್ದಾರೆ.

ಬಸ್ ಸೌಲಭ್ಯ ಇಲ್ಲದ ಕಾರಣ ಗ್ರಾಮಸ್ಥರು ಹಾಗೂ ನಮ್ಮೂರಿನ ಶಾಲಾ ಮಕ್ಕಳಿಗೂ ತೊಂದರೆಯಾಗುತ್ತಿತ್ತು. ಈ ಬಗ್ಗೆ ಸಚಿವರ ಗಮನಕ್ಕೆ ತಂದಾಗ ಅವರು ಹೊಸದಾಗಿ ಬಸ್ ಸೌಲಭ್ಯ ಕಲ್ಪಿಸಲು ಘಟಕ ವ್ಯವಸ್ಥಾಪಕರಿಗೆ ಸೂಚಿಸಿದ್ದರು. ಘಟಕ ವ್ಯವಸ್ಥಾಪಕ ಸುರೇಶಕುಮಾರ ತೇಗಲತಿಪ್ಪಿ ಅವರು, ಸರ್ವೆ ಮಾಡಿ ಮೇಲಧಿಕಾರಿಗಳಿಗೆ ಪ್ರಸ್ತಾವನೆ ಸಲ್ಲಿಸಿ ಮಾರ್ಗದ ಅನುಮತಿ ಪಡೆದು ಬಸ್ ಸೌಲಭ್ಯ ಕಲ್ಪಿಸಿದ್ದಾರೆ.

ಸದ್ಯ ಗ್ರಾಮಸ್ಥರ ಸಮಸ್ಯೆ ಸ್ಪಂದಿಸಿದ ಸಚಿವರು ಮತ್ತು ಘಟಕ ವ್ಯವಸ್ಥಾಪಕರಿಗೆ ಬಸ್‌ ಸೌಲಭ್ಯ ನೀಡಿರುವುದಕ್ಕೆ ಸಮಸ್ತ ಗ್ರಾಮಸ್ಥರು ಧನ್ಯವಾದ ಸಲ್ಲಿಸಿದ್ದಾರೆ.

ಈ ವೇಳೆ ಸುಭಾನರೆಡ್ಡಿ ಪಟಮಿದಿ, ಮಂಜೂರು ಪಟೇಲ್, ಇಬ್ರಾಹಿಂ ಪಟೇಲ್, ರಿಯಾಜ್ ಪಟೇಲ್, ಸಂತೋಷ ತವದಿ, ಬಾಬುರಾವ್ ಉಪ್ಪಿನ್, ಮಾರುತಿ ತಳವಾರ, ಕೈಲಾಸ ಬೆನ್ನೂರು, ಜಗಪ್ಪ ಮೊಮ್ಮಾಯಿ, ಪ್ರಭು ಹಲಚೇರಿ, ನರಸಪ್ಪ ಹಲಚೇರಿ, ರಾಮಚಂದ್ರ ತಳವಾರ, ನಾಗೇಂದ್ರಪ್ಪ ಪೂಜಾರಿ, ಶ್ರೀನಾಥ ಅಕ್ಕಮಪಳ್ಳಿ, ಹಣಮಂತ ಹೊಸಮನಿ, ನಾಗೇಶ ಮಡಿವಾಳ ಮೊದಲಾದವರು ಇದ್ದರು.

Megha
the authorMegha

Leave a Reply

error: Content is protected !!