ಬೆಂಗಳೂರು: ಸ್ಯಾಂಡಲ್‌ವುಡ್ ಡ್ರಗ್ಸ್ ಜಾಲ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೊಳಗಾಗಿರುವ ನಟಿ ಸಂಜನಾ ಗಲ್ರಾನಿಗೆ 14 ದಿನ ನ್ಯಾಯಾಂಗ ಬಂಧನಕ್ಕೆ ಕೋರ್ಟ್ ಆದೇಶಿಸಿದೆ.
ಸಿಸಿಬಿ ಕಸ್ಟಡಿ ಅವಧಿ ಇಂದು ಅಂತ್ಯಗೊಂಡ ಹಿನ್ನೆಲೆಯಲ್ಲಿ ನಟಿಯನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ 1ನೇ ಎಸಿಎಂಎಂ ಕೋರ್ಟ್ ಗೆ ಹಾಜರುಪಡಿಸಲಾಯಿತು.
ಆರೋಪಿಯ ವಿಚಾರಣೆ ನಡೆಸಿದ ಕೋರ್ಟ್, ಬಂಧಿತ ನಟಿ ಸಂಜನಾಗೆ 14 ದಿನ ನ್ಯಾಯಾಂಗ ಬಂಧನಕ್ಕೆ ಒಳಪಡಿಸಿ ಆದೇಶ ಹೊರಡಿಸಿದೆ. ಈ ಹಿನ್ನೆಲೆಯಲ್ಲಿ ಸಂಜನಾ ಸೆಪ್ಟೆಂಬರ್ 29ರ ವರೆಗೆ ನ್ಯಾಯಾಂಗ ಬಂಧನಕ್ಕೆ ಒಳಪಟ್ಟಿದ್ದು ಪರಪ್ಪನ ಅಗ್ರಹಾರ ಜೈಲಿಗೆ ಕರೆದೊಯ್ಯುತ್ತಿದ್ದಾರೆ. ಇದರೊಂದಿಗೆ ಡ್ರಗ್ ಪ್ರಕರಣದಲ್ಲಿ ಜೈಲು ಸೇರಿದ ಸ್ಯಾಂಡಲ್ ವುಡ್ ನ ಎರಡನೇ ನಟಿ ಎಂಬ ಕುಖ್ಯಾತಿಗೆ ಪಾತ್ರರಾಗಿದ್ದಾರೆ.
ಸಂಜನಾ ಅವರೊಂದಿಗೆ ವೀರೇನ್ ಖನ್ನಾ, ರವಿಶಂಕರ್ನನ್ನೂ ಜೈಲಿಗೆ ಕಳುಹಿಸಲಾಗಿದೆ. ಸೆ.14ರಂದು ನಟಿ ರಾಗಿಣಿ ದ್ವಿವೇದಿ ಮತ್ತು ಡ್ರಗ್ ಪೆಡ್ಲರ್ ಲೂಮ್ ಪೆಪರ್, ರಾಹುಲ್, ನಿಯಾಜ್, ಪ್ರಶಾಂತ್ ರಾಂಕಾ ಜೈಲು ಸೇರಿದ್ದಾರೆ.
ಈ ಮಧ್ಯೆ, ಜಾಮೀನು ಕೋರಿ ನಟಿ ರಾಗಿಣಿ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಇಂದು ನಡೆದಿದ್ದು ಮತ್ತೆ ಸೆ.19ಕ್ಕೆ ಮುಂದೂಡಿಕೆ ಮಾಡಲಾಗಿದೆ. ಇದೇ ವೇಳೆ ಡ್ರಗ್ ಪೆಡ್ಲರ್ ರಾಹುಲು, ಶಿವಪ್ರಕಾಶ್, ವಿನಯ್ ಕುಮಾರ್, ವೈಭವ್ ಜೈನ್ ಅವರ ಜಾಮೀನು ವಿಚಾರಣೆಯನ್ನೂ ಮುಂದೂಡಲಾಗಿದೆ.