NEWSನಮ್ಮರಾಜ್ಯಶಿಕ್ಷಣ

ನಾಳೆಯಿಂದ ದ್ವಿತೀಯ ಪಿಯು ಪರೀಕ್ಷೆ: ಮೊದಲ ದಿನ ಕನ್ನಡ, ಅರೆಬಿಕ್ Exam

ವಿಜಯಪಥ ಸಮಗ್ರ ಸುದ್ದಿ
  • ಪರೀಕ್ಷೆ ಬರೆಯಲು ಸಜ್ಜಾದ 5,174 ಕಾಲೇಜುಗಳ 7.10 ಲಕ್ಷ ವಿದ್ಯಾರ್ಥಿಗಳು 
  • ಪ್ರಶ್ನೆ ಪತ್ರಿಕೆ ಸೋರಿಕೆಯಾಗದಂತೆ ಕಠಿಣ ಕ್ರಮ:

ಬೆಂಗಳೂರು: ರಾಜ್ಯಾದ್ಯಂತ ದ್ವಿತೀಯ ಪಿಯು ಪರೀಕ್ಷೆ ನಾಳೆ ಫೆ.28ರಿಂದ ಆರಂಭವಾಗಲಿದೆ. ಮೊದಲ ದಿನ ಕನ್ನಡ, ಅರೆಬಿಕ್ ಭಾಷಾ ಪರೀಕ್ಷೆಗಳು ನಡೆಯಲಿವೆ.

ಇನ್ನು ಈ ಭಾರಿ 5,174 ಕಾಲೇಜುಗಳ 7.10 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ನೋಂದಣಿ ಮಾಡಿಕೊಂಡಿದ್ದಾರೆ. ವಿಜ್ಞಾನ ವಿಷಯದಲ್ಲಿ 2.92 ಲಕ್ಷ, ವಾಣಿಜ್ಯದಲ್ಲಿ 2.11 ಲಕ್ಷ ಹಾಗೂ ಕಲಾ ವಿಭಾಗದಲ್ಲಿ 1.42 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಲಿದ್ದಾರೆ. 1.217 ಪರೀಕ್ಷಾ ಕೇಂದ್ರಗಳನ್ನು ಸಜ್ಜುಗೊಳಿಸಲಾಗಿದ್ದು, ಪ್ರತಿ ಪರೀಕ್ಷಾ ಕೇಂದ್ರವೂ ಸಿಸಿಟಿವಿ ಕ್ಯಾಮೆರಾ ಒಳಗೊಂಡಿದೆ.

ಈ ಎಲ್ಲ ಸಿದ್ದತೆಯ ನಡುವೆ ಯಾವ ಯಾವ ದಿನ ಯಾವ ವಿಷಯಗಳ ಪರೀಕ್ಷೆ ನಡೆಯಲಿವೆ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.

ನಾಳೆ ಫೆ: 28 – ಕನ್ನಡ, ಅರೇಬಿಕ್,
ಮಾ: 2ಕ್ಕೆ ಭೂಗೋಳಶಾಸ್ತ್ರ, ಸಂಖ್ಯಾಶಾಸ್ತ್ರ ಮತ್ತು ಮನಃಶಾಸ್ತ್ರ
ಮಾ: 3ಕ್ಕೆ – ಇಂಗ್ಲಿಷ್,
ಮಾ: 4ಕ್ಕೆ ತಮಿಳು, ತೆಲುಗು, ಮಲಯಾಳಂ, ಮರಾಠಿ, ಉರ್ದು, ಸಂಸ್ಕತ ಮತ್ತು ಫ್ರೆಂಚ್,
ಮಾ: 5ಕ್ಕೆ ಇತಿಹಾಸ
ಮಾ: 6ಕ್ಕೆ-ಭೌತವಿಜ್ಞಾನ

ಮಾ: 7ಕ್ಕೆ- ಐಚ್ಛಿಕ ಕನ್ನಡ, ವ್ಯವಹಾರ ಅಧ್ಯಯನ ಮತ್ತು ಭೂಗರ್ಭಶಾಸ್ತ್ರ
ಮಾ: 9ಕ್ಕೆ -ರಸಾಯನ ವಿಜ್ಞಾನ, ಶಿಕ್ಷಣಶಾಸ್ತ್ರ ಮತ್ತು ಮೂಲ ಗಣಿತ
ಮಾ : 10ಕ್ಕೆ ಅರ್ಥಶಾಸ್ತ್ರ
ಮಾ : 11ಕ್ಕೆ ತರ್ಕಶಾಸ್ತ್ರ, ವಿದ್ಯುನ್ಮಾನ ಶಾಸ್ತ್ರ ಮತ್ತು ಗೃಹ ವಿಜ್ಞಾನ

ಮಾ : 12ಕ್ಕೆ ಹಿಂದಿ
ಮಾ: 13ಕ್ಕೆ ರಾಜ್ಯಶಾಸ್ತ್ರ
ಮಾ: 14ಕ್ಕೆ ಲೆಕ್ಕಶಾಸ್ತ್ರ ಮತ್ತು ಗಣಿತ
ಮಾ: 16ಕ್ಕೆ – ಸಮಾಜಶಾಸ್ತ್ರ, ಜೀವಶಾಸ್ತ್ರ ಹಾಗೂ ಗಣಕ ವಿಜ್ಞಾನ
ಮಾ: 17ಕ್ಕೆ ಹಿಂದುಸ್ತಾನಿ ಸಂಗೀತ, ಮಾಹಿತಿ ತಂತ್ರಜ್ಞಾನ, ರೀಟೇಲ್, ಆಟೋಮೊಬೈಲ್, ಹೆಲ್ತ್‌ ಕೇರ್, ಬ್ಯೂಟಿ ಆಂಡ್ ವೆಲ್‌ನೆಸ್

ಪ್ರಶ್ನೆ ಪತ್ರಿಕೆ ಸೋರಿಕೆಯಾಗದಂತೆ ಕಠಿಣ ಕ್ರಮ: ರಾಜ್ಯದ ದ್ವಿತೀಯ ಪಿಯುಸಿ ಮತ್ತು ಎಸ್ಸೆಸ್ಸೆಲ್ಸಿ ಪರೀಕ್ಷೆಗಳು ಜರುಗುವ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ಸಂಪೂರ್ಣ ಎಚ್ಚರಿಕೆಯ ಕ್ರಮ ಕೈಗೊಂಡಿದೆ. ನಾಳೆಯಿಂದ ದ್ವಿತೀಯ ಪಿಯುಸಿ ಪರೀಕ್ಷೆಗಳು ಆರಂಭವಾಗಲಿವೆ. ಈ ಪರೀಕ್ಷೆಗಳು ಮಾರ್ಚ್ 17ರ ತನಕ ನಡೆಯಲಿವೆ. ನಂತರ ಮಾರ್ಚ್ 18ರಿಂದ ಏಪ್ರಿಲ್ 2ರವರೆಗೆ SSLC ಪರೀಕ್ಷೆಗಳು ನಡೆಯಲಿವೆ.

ಈ ಎರಡೂ ಪ್ರಮುಖ ಪರೀಕ್ಷೆಗಳು ನಿಷ್ಪಕ್ಷಪಾತವಾಗಿ ಮತ್ತು ಸುರಕ್ಷಿತವಾಗಿ ನಡೆಯಬೇಕು ಎಂಬ ಉದ್ದೇಶದಿಂದ ಪೊಲೀಸರು ವಿಶೇಷ ಭದ್ರತಾ ವ್ಯವಸ್ಥೆ ಮಾಡಿದ್ದಾರೆ. ಅಲ್ಲದೇ ಪ್ರಶ್ನೆ ಪತ್ರಿಕೆ ಸೋರಿಕೆಯಾಗದಂತೆ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಅನುಮಾನಾಸ್ಪದ ವ್ಯಕ್ತಿಗಳ ಮೇಲೆ ಈಗಾಗಲೇ ನಿಗಾ ಇಡಲಾಗಿದೆ ಎಂದು ಪೊಲೀಸ್ ಇಲಾಖೆ ತಿಳಿಸಿದೆ.

ಕೇಂದ್ರಗಳ ಸುತ್ತ ಸಿಬ್ಬಂದಿ ನಿಯೋಜನೆ: ಪರೀಕ್ಷಾ ಕೇಂದ್ರಗಳ ಸುತ್ತ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ವಿದ್ಯಾರ್ಥಿಗಳು ಆತಂಕವಿಲ್ಲದೆ ಪರೀಕ್ಷೆ ಬರೆಯಲು ಸಾಧ್ಯವಾಗುವಂತೆ ಭದ್ರತೆ ಹೆಚ್ಚಿಸಲಾಗಿದೆ. ಯಾವುದೇ ಅಡ್ಡಿ, ಗೊಂದಲ ಅಥವಾ ಗಲಾಟೆಗಳಿಗೆ ಅವಕಾಶ ಕೊಡದಂತೆ ಸೂಕ್ತ ವ್ಯವಸ್ಥೆ ಮಾಡಲಾಗಿದೆ.

ಇತ್ತೀಚಿನ ವರ್ಷಗಳಲ್ಲಿ ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ವಂಚನೆ ನಡೆಸುವ ಕೆಲವು ಸಿಂಡಿಕೇಟ್‌ಗಳು ಸಾಮಾಜಿಕ ಜಾಲತಾಣಗಳ ಮೂಲಕ ಸುಳ್ಳು ಸುದ್ದಿಗಳನ್ನು ಹಂಚುತ್ತಿದ್ದವು. ಈ ಹಿನ್ನೆಲೆಯಲ್ಲಿ ಪೊಲೀಸರು ಫೇಸ್‌ಬುಕ್, ವಾಟ್ಸಾಪ್, ಇನ್‌ಸ್ಟಾಗ್ರಾಂ ಸೇರಿದಂತೆ ವಿವಿಧ ಸಾಮಾಜಿಕ ಮಾಧ್ಯಮಗಳ ಮೇಲೆ ಕಣ್ಣಿಟ್ಟಿದ್ದಾರೆ. ವಿದ್ಯಾರ್ಥಿಗಳು ಅಥವಾ ಪೋಷಕರನ್ನು ದಿಕ್ಕುತಪ್ಪಿಸುವ ಮಾಹಿತಿಯನ್ನು ಹರಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಲಾಗಿದೆ.

ಅಕ್ರಮ ಕಂಡು ಬಂದರೆ ನಿರ್ದಾಕ್ಷಿಣ್ಯ ಕ್ರಮ: ಯಾವುದೇ ವ್ಯಕ್ತಿ ಪರೀಕ್ಷಾ ಅಕ್ರಮಗಳಲ್ಲಿ ತೊಡಗಿಕೊಂಡಿರುವುದು ಕಂಡುಬಂದರೆ ಅವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುತ್ತದೆ. ಅವಶ್ಯವಿದ್ದಲ್ಲಿ ಕ್ರಿಮಿನಲ್ ಪ್ರಕರಣಗಳನ್ನು ದಾಖಲಿಸಲಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.

ಹಿಂದಿನ ವರ್ಷಗಳಲ್ಲಿ ಪರೀಕ್ಷಾ ಅಕ್ರಮಗಳಲ್ಲಿ ಭಾಗಿಯಾಗಿದ್ದ ಕೆಲವರ ಮೇಲೆ ಈ ಬಾರಿ ವಿಶೇಷ ನಿಗಾ ಇಡಲಾಗಿದೆ. ಪರೀಕ್ಷಾ ಸಂದರ್ಭಗಳಲ್ಲಿ ಅನುಮಾನಾಸ್ಪದ ಚಟುವಟಿಕೆ ಕಂಡುಬಂದರೆ ತಕ್ಷಣ ಕ್ರಮ ಕೈಗೊಳ್ಳಲು ಪೊಲೀಸ್ ಇಲಾಖೆ ಸಜ್ಜಾಗಿದೆ. ಎಲ್ಲ ಪರೀಕ್ಷಾ ಕೇಂದ್ರಗಳ ಸುತ್ತಲೂ ಸೆಕ್ಷನ್ 163ರ ಭಾರತೀಯ ನಾಗರಿಕ ಸುರಕ್ಷಾ ಸಂಹಿತಾ ಜಾರಿಗೊಳಿಸಲಾಗಿದೆ. ಈ ನಿಯಮದ ಪ್ರಕಾರ ಪರೀಕ್ಷಾ ಕೇಂದ್ರದ 200 ಮೀಟರ್ ವ್ಯಾಪ್ತಿಯಲ್ಲಿ ಅನಧಿಕೃತವಾಗಿ ಜನರು ಸೇರಲು ಅವಕಾಶ ಇರುವುದಿಲ್ಲ.

ಪರೀಕ್ಷೆ ನಡೆಯುವ ವೇಳೆ ಹೊರಗಿನವರು ಗುಂಪು ಸೇರಿ ನಿಲ್ಲುವುದನ್ನು ತಡೆಯಲಾಗುತ್ತದೆ. ಯಾವುದೇ ಸುಳ್ಳು ಸುದ್ದಿಗಳನ್ನು ನಂಬಬೇಡಿ. ಪ್ರಶ್ನೆಪತ್ರಿಕೆ ಸೋರಿಕೆಯಾಗಿದೆ ಎಂಬ ಸಂದೇಶಗಳು ಬಂದರೆ ತಕ್ಷಣ ಸಮೀಪದ ಪೊಲೀಸ್ ಠಾಣೆಗೆ ತಿಳಿಸಿ. ಮಕ್ಕಳನ್ನು ಆತಂಕಪಡಿಸಬೇಡಿ ಎಂದು ಪೊಲೀಸ್ ಇಲಾಖೆ ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ಮನವಿ ಮಾಡಿದೆ.

ಇನ್ನು ಈ ಬಾರಿ ಪರೀಕ್ಷೆಗಳು ಸುಸೂತ್ರವಾಗಿ ಮತ್ತು ಶಾಂತಿಯುತವಾಗಿ ನಡೆಯಲು ಪೊಲೀಸ್ ಇಲಾಖೆ ಸಂಪೂರ್ಣ ಸಿದ್ಧವಾಗಿದ್ದು, ವಿದ್ಯಾರ್ಥಿಗಳು ಆತ್ಮವಿಶ್ವಾಸದಿಂದ ಪರೀಕ್ಷೆ ಬರೆಯಬೇಕು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Megha
the authorMegha

Leave a Reply

error: Content is protected !!