ಮಂಡ್ಯ: ಸಾಲ ಕೊಟ್ಟ ಮಹಿಳೆಯನ್ನೇ ಕಾರು ಚಾಲಕ ಕೊಂದು, ಎರಡು ದಿನ ಕಾರಿನಲ್ಲಿ ಶವವಿಟ್ಕೊಂಡು ಸುತ್ತಾಡಿ, ಬಳಿಕ ಪೆಟ್ರೋಲ್ ಸುರಿದು ಸುಟ್ಟುಹಾಕಿರುವ ಘಟನೆ ಜಿಲ್ಲೆಯ ಮಳವಳ್ಳಿ ತಾಲೂಕಿನ ಬೆಳಕವಾಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಚಿಕ್ಕಬಾಗಿಲು ಗ್ರಾಮದ ನಿವಾಸಿ ಜಯಮ್ಮ (56) ಕೊಲೆಯಾದ ಮಹಿಳೆ. ಅದೇ ಗ್ರಾಮದ ಸುರೇಶ್ ಎಂಬಾತ ಕೊಲೆ ಮಾಡಿದ ಆರೋಪಿ. ಈಕೆ ಗ್ರಾಮದಲ್ಲಿ ಕಷ್ಟವೆಂದು ಬರುವವರಿಗೆ ಕೈ ಸಾಲ ಕೊಡುವ ಮೂಲಕ ಬಡವರಿಗೆ ಸಹಾಯ ಮಾಡುವ ಉದ್ದೇಶ ಹೊಂದಿ ಬಡ್ಡಿ ವ್ಯವಹಾರ ಮಾಡಿಕೊಂಡು ತಮ್ಮ ಜೀವನ ಸಾಗಿಸುತ್ತಿದ್ದರು. ಆದರೆ ಕಷ್ಟ ಎಂದು ಸಾಲ ಪಡೆದುಕೊಂಡಿದ್ದ ಸುರೇಶ್ ಹಣಕೊಡಲಾಗದೆ ಕೊಲೆ ಮಾಡಿದ್ದಾನೆ ಎನ್ನಲಾಗಿದೆ.
ಆರೋಪಿ ಸುರೇಶ್ ಬೆಂಗಳೂರಿನಲ್ಲಿ ಕಾರು ಚಾಲಕನಾಗಿದ್ದನು. ಆದರೆ ಲಾಕ್‍ಡೌನ್ ವೇಳೆ ಊರಿಗೆ ಮರಳಿ ಬಂದಿದ್ದ. ಕೆಲಸವಿಲ್ಲದೇ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದರಿಂದ ಜಯಮ್ಮ ಅವರ ಬಳಿ ಬಡ್ಡಿಗೆ ಸಾಲ ಪಡೆದಿದ್ದ. ಬಳಿಕ ಅವರಿಬ್ಬರ ನಡುವೆ ಅನೇಕ ಬಾರಿ ಹಣದ ವ್ಯವಹಾರ ನಡೆದಿತ್ತು. ಆರೋಪಿ ಸುರೇಶ್ ಜಯಮ್ಮ ಅವರ ಬಳಿ ಇದ್ದ ಹಣ ಮತ್ತು ಒಡವೆ ಮೇಲೆ ಕಣ್ಣು ಹಾಕಿ ಕೊಲೆ ಮಾಡಿದ್ದಾನೆ ಎಂದು ಸಹ ಹೇಳಲಾಗುತ್ತಿದೆ.
ಘಟನೆ: ಸೆ.13ರಂದು ಜಯಮ್ಮ ಅವರ ಕಿರಿಯ ಮಗನಿಗೆ ಮದುವೆ ಮಾಡಲು ಹೆಣ್ಣು ತೋರಿಸುತ್ತೇನೆಂದು ತನ್ನ ಕಾರಿನಲ್ಲೇ ಕರೆದುಕೊಂಡು ಹೋಗಿ ಕೊಲೆ ಮಾಡಿದ್ದಾನೆ. ಎರಡು ದಿನ ಶವವನ್ನು ಕಾರಿನಲ್ಲೇ ಇಟ್ಟುಕೊಂಡು ಓಡಾಡಿದ್ದಾನೆ. ಬಳಿಕ ಮೈಸೂರಿನ ವರುಣ ಸಮೀಪ ಪೆಟ್ರೋಲ್ ಸುರಿದು ಶವವನ್ನು ಸುಟ್ಟು ಹಾಕಿದ್ದಾನೆ. ಕೆಲಸದ ಮೇಲೆ ಬೆಂಗಳೂರಿಗೆ ಹೋಗಿದ್ದ ಜಯಮ್ಮನ ಕಿರಿಯ ಮಗ ಕುಮಾರ್ ಸೆ.18ರಂದು ಊರಿಗೆ ಬಂದಾಗ ತಾಯಿ ಊರಿನಲ್ಲಿ ಇಲ್ಲದಿರೋದು ತಿಳಿದಿದೆ. ಎಲ್ಲೋ ಹೋಗಿದ್ದಾರೆ ಬರುತ್ತಾರೆ ಎಂದು ಸುಮ್ಮನಾಗಿದ್ದಾನೆ.
ಆದರೆ, ಸೆ.19ರಂದು ಬೆಳಕವಾಡಿ ಪೊಲೀಸ್ ಠಾಣೆ ಎಸ್‍ಐ ಸ್ವತಃ ಕರೆ ಮಾಡಿ ಕರೆಸಿಕೊಂಡು ಬಲವಂತವಾಗಿ ತಾಯಿ ನಾಪತ್ತೆಯಾಗಿದ್ದಾಳೆಂದು ದೂರು ಬರೆಸಿಕೊಂಡಿದ್ದಾರೆ. ಇದರಿಂದ ಗಾಬರಿಗೊಂಡ ಕುಮಾರ್ ಪೊಲೀಸರಿಗೆ ನನ್ನ ತಾಯಿ ಕಾಣೆಯಾಗಿರುವ ವಿಚಾರ ಹೇಗೆ ತಿಳಿಯಿತು ಎಂದು ಗೊಂದಲಕ್ಕೆ ಸಿಲುಕಿದ್ದಾನೆ. ಅಲ್ಲದೇ ಭಾನುವಾರ ಮತ್ತೆ ಎಸ್‌ಐ ಕರೆ ಮಾಡಿ ಸುರೇಶ್ ನಿನ್ನ ತಾಯಿಯನ್ನು ಕೊಲೆಗೈದು ಠಾಣೆಗೆ ಬಂದು ಶರಣಾಗಿದ್ದಾನೆಂದು ಹೇಳಿದ್ದಾರೆ.
ಆರೋಪಿ ಸುರೇಶ್ ಸಹೋದರ ಮಳವಳ್ಳಿ ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದಾನೆ. ಅದಕ್ಕಾಗಿ ಪೊಲೀಸರು ಆರೋಪಿಗೆ ಪ್ರಕರಣದಲ್ಲಿ ಸಹಾಯ ಮಾಡುತ್ತಿದ್ದಾರೆಂದು ಜಯಮ್ಮ ಅವರ ಮಕ್ಕಳು ಆರೋಪಿಸಿದ್ದಾರೆ. ಈ ಕುರಿತು ಸದ್ಯ ಬೆಳಕವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಸತ್ಯದ ದಾರಿಯಲ್ಲಿ ನಡೆದು ಆರೋಪಿಗೆ ತಕ್ಕ ಶಿಕ್ಷೆ ಕೊಡಿಸಬೇಕು ಎಂದು ತಾಯಿ ಕಳೆದುಕೊಂಡಿರುವ ಮಕ್ಕಳು ಒತ್ತಾಯಿಸಿದ್ದಾರೆ.