ಗೆಳೆಯ ನೀಡುತ್ತಿದ್ದ ಮಾನಸಿಕ ಕಿರುಕುಳಕ್ಕೆ ಬೇಸತ್ತು ದಂತ ವೈದ್ಯಕೀಯ ಸ್ನಾತಕೋತ್ತರ ವಿದ್ಯಾರ್ಥಿನಿ ಆತ್ಮಹತ್ಯೆ


ಮುಂಬೈ: ದಂತ ವೈದ್ಯಕೀಯ ಸ್ನಾತಕೋತ್ತರ ಪದವಿ ವಿದ್ಯಾರ್ಥಿನಿಯೊಬ್ಬರುಯ ಗೆಳೆಯನ ಮಾನಸಿಕ ಕಿರುಕುಳದಿಂದ ಬೇಸತ್ತು ಮುಂಬೈನ ತನ್ನ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.

ಮುಂಬೈ ನಗರದ ನಿವಾಸಿ ಸ್ತುತಿ ಸೋನ್ವಾನೆ (24) ಆತ್ಮಹತ್ಯೆ ಮಾಡಿಕೊಂಡ ಯುವತಿ. ಎಂಡಿಎಸ್ ವ್ಯಾಸಂಗ ಮಾಡುತ್ತಿದ್ದ ಸ್ತುತಿ, ಹುಡುಗನೊಬ್ಬನನ್ನು ಪ್ರೀತಿಸುತ್ತಿದ್ದಳು. ಈಕೆ ಮೋಸ ಮಾಡಿದ್ದಾಳೆಂದು ಗೆಳೆಯ ಅವಮಾನಿಸುತ್ತಿದ್ದ. ಜತೆಗೆ ಮನಸ್ಸಿಗೆ ನೋವುಂಟು ಮಾಡುವ ಹೇಳಿಕೆ ನೀಡುತ್ತಿದ್ದ.
ಹೀಗಾಗಿ ಇದರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಹೇಳಲಾಗುತ್ತಿದೆ. ಈ ಈಕೆ ಬರೆದಿರುವ ಡೆತ್ನೋಟ್ನಲ್ಲಿ ದೆಹಲಿಯ ಹೃದಯವಿದ್ರಾವಕ ಶ್ರದ್ಧಾ ವಾಕರ್ ಹತ್ಯೆ ಪ್ರಕರಣವನ್ನು ಉಲ್ಲೇಖಿಸಿದ್ದಾಳೆ.
ಮುಂಬೈನ ಆಂಟೋಪ್ ಹಿಲ್ ಬಳಿ ಸ್ತುತಿ ತನ್ನ ಪೋಷಕರು ಮತ್ತು ಸಹೋದರಿಯೊಂದಿಗೆ ವಾಸಿಸುತ್ತಿದ್ದಳು. ನಿನ್ನೆ ಬೆಳಗ್ಗೆ 11 ಗಂಟೆಯವರೆಗೆ ಆಕೆ ತನ್ನ ಕೋಣೆಯಿಂದ ಹೊರಬರದಿದ್ದಾಗ, ಪೋಷಕರು ಕರೆ ಮಾಡಿದ್ದಾರೆ.
ಆದರೆ, ಯಾವುದೇ ಪ್ರತಿಕ್ರಿಯೆ ಬರಲಿಲ್ಲ. ಕೋಣೆಯ ಬಾಗಿಲು ಒಡೆದು ನೋಡಿದಾಗ, ಅವಳು ಸೀಲಿಂಗ್ಫ್ಯಾನ್ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಕಂಡುಬಂದಿದೆ.
ಈ ಘಟನೆ ಸಂಬಂಧ ಪೊಲೀಸರು ಅಸಹಜ ಸಾವಿನ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಆಕೆಯ ಗೆಳೆಯನ ಪಾತ್ರದ ಬಗ್ಗೆ ತನಿಖೆ ನಡೆಸುತ್ತಿರುವ ಪೊಲೀಸರು ಆಕೆಯ ಕುಟುಂಬ ಸದಸ್ಯರ ಹೇಳಿಕೆಗಳನ್ನು ದಾಖಲಿಸಿಕೊಂಡಿದ್ದಾರೆ.
Related









