KSRTC: ನೌಕರರ ವೇತನ ಹೆಚ್ಚಳ ಸಂಬಂಧದ ಹೋರಾಟ ನಿಲ್ಲುವುದಿಲ್ಲ ಹೈ ಕೋರ್ಟ್ ನಿರ್ದೇಶನದಂತೆ ಮುಂದುವರಿಯಲಿದೆ- ಚಂದ್ರಶೇಖರ್
ಏ.22ರ ಇಂದು ಕೂಟದ ಬೆಂಗಳೂರಿನ ಕಚೇರಿಯಲ್ಲಿ ಸಭೆ ಸೇರಿದ ಪದಾಧಿಕಾರಿಗಳು.ಬೆಂಗಳೂರು: ಆತ್ಮೀಯ ನಮ್ಮ ಸಾರಿಗೆ ನೌಕರರೆ ಹೈ ಕೋರ್ಟ್‌ನಲ್ಲಿ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹಕ್ಕೆ ಅನುಮತಿಸುವ ಬಗ್ಗೆ ಹಾಕಿದ್ದ WP ಪ್ರಕರಣವು ಇಂದು ವಿಚಾರಣೆಗೆ ಬಂದಿತ್ತು. ಈ ವೇಳೆ ನ್ಯಾಯಾಧೀಶರು ನೀಡಿದ ನಿರ್ದೇಶನಗಳ ಬಗ್ಗೆ ಇಲ್ಲಿಯವರೆಗೆ ವಕೀಲರೊಂದಿಗೆ ಸುದೀರ್ಘವಾಗಿ ಚರ್ಚಿಸಿ ಬಳಿಕ ಕೋರ್ಟ್‌ನಿಂದ ಬಂದು ಕೂಟದ ಕಚೇರಿಯಲ್ಲಿ ಕಾರ್ಯಕರ್ತರೊಂದಿಗೆ ಸುದೀರ್ಘವಾಗಿ ಚರ್ಚಿಸಲಾಯಿತು. WP ಬಗ್ಗೆ ಸಂಬಂಧಪಟ್ಟಂತೆ ಬಂದ ನಿರ್ದೇಶನವನ್ನು ರಾಜ್ಯಾಧ್ಯಕ್ಷ ಚಂದ್ರಶೇಖರ್ ಅವರು ವಿಜಯಪಥಕ್ಕೆ ತಿಳಿಸಿದ್ದಾರೆ.

ಅವರ ಹೇಳಿಕೆಯನ್ನು ಯಥಾವತ್ತಾಗಿ ನಿಮ್ಮ ಮುಂದೆ ವಿಜಯಪಥ ವರದಿ ರೂಪದಲ್ಲಿ ನೀಡುತ್ತಿದೆ:
8-4-2024 ರಿಂದ ಚಿತ್ರದುರ್ಗದ ಜಿಲ್ಲಾಧಿಕಾರಿಗಳ ಕಚೇರಿಯಿಂದ ಪ್ರಾರಂಭಗೊಂಡ ನಮ್ಮ ಪಾದಯಾತ್ರೆ ಜಾಥಾ, 21-4-2026ಕ್ಕೆ ಬೆಂಗಳೂರಿಗೆ ತಲುಪುವ ಮೂಲಕ ನಮ್ಮ ಪಾದಯಾತ್ರೆ ಪೂರ್ಣಗೊಂಡು, ಫ್ರೀಡಂ ಪಾರ್ಕ್‌ನಲ್ಲಿ 21-4-2026 ರಿಂದ ಪ್ರಾರಂಭಗೊಳ್ಳಬೇಕಾಗಿದ್ದ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹಕ್ಕೆ ಪೊಲೀಸ್ ಇಲಾಖೆಯವರು ಅನುಮತಿಯನ್ನು ನೀಡಲು ಸಾಧ್ಯವಿಲ್ಲ ಎಂಬ ಕಾರಣಕ್ಕೆ ಒಂದು ಸ್ವಲ್ಪ ಗೊಂದಲಗಳು ಉಂಟಾದವು.
ಆದರೂ ನಾವು ಅಲ್ಲಿಂದ (ಚಿತ್ರದುರ್ಗದಿಂದ ಸುಮಾರು 230 ಕಿಮೀ) ಬಂದಿದ್ದೇವೆ, ಸತ್ಯಾಗ್ರಹವನ್ನು ಮಾಡೇ ಮಾಡಬೇಕು ಎಂದು ಹೇಳಿದಾಗ ಪೊಲೀಸ್ ನವರು ನಮ್ಮನ್ನೆಲ್ಲಾ ಬಂಧಿಸಿ ಸುಮಾರು ರಾತ್ರಿ 11 ಗಂಟೆಗೆ ನಮ್ಮನ್ನೆಲ್ಲಾ ಬಿಡುಗಡೆ ಮಾಡಿದರು.
ಇನ್ನು ಬಿಡುಗಡೆ ಮಾಡುವಾಗ ಆದಂತಹ ಮಾತಿನ ಚಕಮಕಿಗಳನ್ನೆಲ್ಲಾ ನೀವು ಸಾಮಾಜಿಕ ಜಾಲತಾಣದಲ್ಲಿ ನೋಡಿರಬಹುದು. ಆದರೆ ಕೂಟ ಮತ್ತು ಒಕ್ಕೂಟದವರು ಯಾವುದೇ ಕಾರಣಕ್ಕೂ ನಮ್ಮ ಹಕ್ಕುಗಳಿಗಾಗಿ, ನೌಕರರ ಹಿತದೃಷ್ಟಿಯಿಂದ ನಾವು ಮಾಡುತ್ತಿರುವ ಹೋರಾಟವನ್ನು ಬಿಡಲು ಸಾಧ್ಯವಿಲ್ಲ ಎಂಬ ಮಾತನ್ನು ನಾವು ನಿನ್ನೆಯೂ ಪೊಲೀಸ್ ಇಲಾಖೆಯ ಮುಂದೆ ಆಡಿದ್ದೇವೆ.
ಸ್ನೇಹಿತರೆ, ಇಂತಹ ಹೋರಾಟಗಳನ್ನು ಮಾಡುವಾಗ ಸರ್ಕಾರಗಳು ಮಾಡುವ ಮೊದಲ ಕೆಲಸ ಪೊಲೀಸ್ ಇಲಾಖೆಯ ಮೂಲಕ ನೌಕರರ ಹೋರಾಟಗಳನ್ನು ಹತ್ತಿಕ್ಕುವ ಕೆಲಸ. ಅದು ನಿನ್ನೆಯೂ ನಡೆದಿದೆ. ಈ ಹಿಂದೆ ಆಶಾ ಕಾರ್ಯಕರ್ತೆಯರ ಹೋರಾಟ, ಜಾತಿ ಸಮುದಾಯಗಳ ಹೋರಾಟಗಳಲ್ಲಿಯೂ ಹೀಗೆಯೆ ನಡೆದಿದೆ. 2023 ರಲ್ಲಿ ನಾವೇ ಮೂರು-ನಾಲ್ಕು ದಿನ ಇದೇ ಫ್ರೀಡಂ ಪಾರ್ಕ್‌ನಲ್ಲಿ ಅನಿರ್ದಿಷ್ಟಾವಧಿ ಹೋರಾಟಗಳನ್ನು ಮಾಡಿದ್ದೇವೆ.
ಆದರೆ, ಈ ಬಾರಿ ಸಾರಿಗೆ ನೌಕರರ ಕೂಟ ಮತ್ತು ಒಕ್ಕೂಟ ಸತತ 14 ದಿನಗಳ ಕಾಲ ಈ ಉರಿ ಬಿಸಿಲಿನಲ್ಲಿ ಪಾದಯಾತ್ರೆ ಮಾಡಿ ಬಂದಿದ್ದರಿಂದ ಸಾವಿರಾರು ಸಂಖ್ಯೆಯಲ್ಲಿ ನೌಕರರು ಸೇರಿ ದೊಡ್ಡ ಮಟ್ಟದ ಹೋರಾಟವಾಗುವ ಸಾಧ್ಯತೆ ಇರುವುದರಿಂದ ಸರ್ಕಾರ ಪೊಲೀಸರನ್ನು ಬಳಸಿಕೊಂಡಿದೆ. ಇದನ್ನು ಮನಗಂಡು ನಾವು ಮೊದಲೇ ಹೈಕೋರ್ಟ್‌ನಲ್ಲಿ ರಿಟ್ ಅರ್ಜಿ (Writ Petition) ಸಲ್ಲಿಸಿದ್ದೆವು. ಇಂದು ಆ ಪ್ರಕರಣ ನ್ಯಾಯಾಲಯದ ಮುಂದೆ ಬಂದಿತ್ತು.
ನ್ಯಾಯಾಲಯವು ಪೊಲೀಸ್ ಇಲಾಖೆಗೆ ಮತ್ತು ನಮಗೆ 2022 ರ ಸರ್ಕಾರದ ಗೆಜೆಟ್ ಪ್ರಕಾರ ಕೆಲವು ನಿರ್ದೇಶನಗಳನ್ನು ನೀಡಿದೆ. ಒಂದು ನಿರ್ದಿಷ್ಟ ಸಮಯದಲ್ಲಿ ಹೋರಾಟ ಹಮ್ಮಿಕೊಳ್ಳುವಂತೆ ನ್ಯಾಯಾಪೀಠ ಸಲಹೆ ನೀಡಿದೆ. ಘನ ನ್ಯಾಯಾಲಯದ ನಿರ್ದೇಶನದಂತೆ ನಾವು ಮುಂದಿನ ವಾರದಲ್ಲಿ ಅತೀ ಶೀಘ್ರದಲ್ಲಿಯೇ ಮತ್ತೊಮ್ಮೆ ಪೊಲೀಸ್ ಅನುಮತಿ ಪಡೆದು ಸತ್ಯಾಗ್ರಹವನ್ನು ಮುಂದುವರಿಸಲಿದ್ದೇವೆ.
ನಮ್ಮ ಪ್ರಮುಖ ಬೇಡಿಕೆಗಳೆಂದರೆ:
1-1-2024 ರಿಂದಲೇ ನಮಗೆ ಸರಿಸಮಾನ ವೇತನ ನೀಡಬೇಕು.
38 ತಿಂಗಳ ವೇತನದ ಹಿಂಬಾಕಿಯನ್ನು ನೀಡಬೇಕು.
ಕಾರ್ಮಿಕ ಸಂಘಟನೆಗಳ ಚುನಾವಣೆ ನಡೆಸಬೇಕು.
ಕೆಲವರಿಗೆ ತಿರುಗೇಡು ನೀಡಿದ ಚಂದ್ರು:
ನಾವು ನೌಕರರನ್ನು ದಾರಿ ತಪ್ಪಿಸುತ್ತಿಲ್ಲ. ನಾವು ಕಾನೂನುಬದ್ಧವಾಗಿ ಹೋರಾಟ ಮಾಡುತ್ತಿದ್ದೇವೆ. ಏಪ್ರಿಲ್ 2, 2026 ರಂದೇ ಡಿಜಿ ಮತ್ತು ಐಜಿಪಿಯವರಿಗೆ ಪಾದಯಾತ್ರೆ ಬಗ್ಗೆ ಪತ್ರ ನೀಡಲಾಗಿತ್ತು. ನಂತರ ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೂ ಪತ್ರ ನೀಡಲಾಗಿತ್ತು. ಎಲ್ಲಾ ಇಲಾಖೆಗಳಿಗೆ (ಕೆಎಸ್ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕರು, ಕಾರ್ಮಿಕ ಆಯುಕ್ತರು, ಆರೋಗ್ಯ ಇಲಾಖೆ) ಮುನ್ನೆಚ್ಚರಿಕೆಯಾಗಿ ಪತ್ರಗಳನ್ನು ನೀಡಲಾಗಿತ್ತು. ಆದರೆ ಇದನ್ನು ತಿಳಿಯದೆ ಕೆಲವರು ಬಾಯಿಗೆ ಬಂದಂತೆ ಹೇಳಿಕೆ ನೀಡಿದ್ದಾರೆ ಇದು ಅವರಿಗೆ ಶೋಭೆ ತರುವಂತಹದಲ್ಲ ಎಂದು ತಿರುಗೇಟು ನೀಡಿದ್ದಾರೆ.
ನೌಕರರೆ ಮುಂದಿನ ವಾರ ಹೋರಾಟದ ದಿನಾಂಕವನ್ನು ಘೋಷಿಸುತ್ತೇವೆ. ಯಾವುದೇ ಗೊಂದಲಕ್ಕೆ ಒಳಗಾಗದೇ ಬೇರೆಯವರ ಹೇಳಿಕೆಗಳಿಗೆ ಕಿವಿಗೊಡದೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ನಮ್ಮ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಿಕೊಳ್ಳೋಣ.” ಎಲ್ಲರೂ ಒಗ್ಗಟ್ಟಾಗಿ ಬನ್ನಿ ಎಂದು ಮನವಿ ಮಾಡಿದ್ದಾರೆ.
Related









