KSRTC: ಮೂರು ವರ್ಷಕ್ಕೂ ಹೆಚ್ಚುಕಾಲ ಒಂದೇ ಕಡೆ ಬೇರುಬಿಟ್ಟಿರುವ ನೌಕರರ ವರ್ಗಾವಣೆಗೆ ಆದೇಶ
ಕೆಎಸ್ಆರ್ಟಿಸಿ ನಿಗಮದ ವಿಭಾಗ/ ಘಟಕಗಳಲ್ಲಿ ಹಲವು ಸಿಬ್ಬಂದಿ ಮೂರು ವರ್ಷಗಳಿಗಿಂತ ಹೆಚ್ಚಿನ ಅವಧಿ ಒಂದೇ ಕಡೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಕುರಿತು ದೂರುಗಳು ಬಂದ ಹಿನ್ನೆಲೆಯಲ್ಲಿ ಈ ಕ್ರಮಕ್ಕೆ ಸರ್ಕಾರ ಆದೇಶ ನೀಡಿದೆ

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ಆಡಳಿತಕ್ಕೆ ವೇಗ ನೀಡುವ ಉದ್ದೇಶದೊಂದಿಗೆ ಒಂದೇ ಕಡೆ ಮೂರು ಅಥವಾ ಮೂರು ವರ್ಷಕ್ಕೂ ಹೆಚ್ಚಿನ ಅವಧಿವರೆಗೆ ಕರ್ತವ್ಯ ನಿರ್ವಹಿ ಸುತ್ತಿರುವ ಅಧಿಕಾರಿಗಳು/ ನೌಕರರ ಎತ್ತಗಂಡಿ ಮಾಡಬೇಕು ಎಂದು ಮುಖ್ಯ ಸಿಬ್ಬಂದಿ ವ್ಯವಸ್ಥಾಪಕರು ಆದೇಶ ಹೊರಡಿಸಿದ್ದಾರೆ.
ಒಂದೇ ಕಡೆ 3 ವರ್ಷಗಳಿಗಿಂತ ಹೆಚ್ಚಿನ ಅವಧಿಯವರೆಗೆ ಕರ್ತವ್ಯ ನಿರ್ವಹಿ ಸುತ್ತಿರುವ ಸಿಬ್ಬಂದಿಯನ್ನು ವರ್ಗಾವಣೆ ಮಾಡಲು ಕ್ರಮ ಕೈಗೊಳ್ಳುವಂತೆ ಎಂಡಿ ಅಕ್ರಮ್ ಪಾಷಾ ಅವರಿಗೆ ಸಾರಿಗೆ ಇಲಾಖೆ ಕಾರ್ಯದರ್ಶಿ ತಿಳಿಸಿದ್ದಾರೆ.
ಕೆಎಸ್ಆರ್ಟಿಸಿ ನಿಗಮದ ವಿಭಾಗ/ ಘಟಕಗಳಲ್ಲಿ ಹಲವು ಸಿಬ್ಬಂದಿ ಮೂರು ವರ್ಷಗಳಿಗಿಂತ ಹೆಚ್ಚಿನ ಅವಧಿ ಒಂದೇ ಕಡೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಕುರಿತು ದೂರುಗಳು ಬಂದಿವೆ.
ಹೀಗಾಗಿ ಆಡಳಿತ ದೃಷ್ಟಿಯಿಂದಾಗಿ ಮೂರು ವರ್ಷಗಳಿಗಿಂತ ಹೆಚ್ಚಿನ ಕಾಲ ಒಂದೇ ಶಾಖೆ ಅಥವಾ ವಿಷಯದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಯನ್ನು ಕೂಡಲೇ ಬೇರೆ ಕಡೆಗೆ ವರ್ಗಾವಣೆ ಮಾಡಬೇಕು.
ಜತೆಗೆ ನಿಗಮದಲ್ಲಿ ಚಾಲ್ತಿಯಲ್ಲಿರುವ ಸುತ್ತೋಲೆ/ ನಿಯಮಗಳ ಪ್ರಕಾರ ಕ್ರಮ ಕೈಗೊಂಡು ಆಡಳಿತ ವರ್ಗವನ್ನು ಚುರುಕುಗೊಳಿಸಲು ಕ್ರಮ ಕೈಗೊಳ್ಳಬೇಕು ಮತ್ತು ಈ ಕುರಿತು ಸರ್ಕಾರಕ್ಕೆ ವರದಿ ಸಲ್ಲಿಸಬೇಕು ಎಂದು ಸಾರಿಗೆ ಇಲಾಖೆ ಕಾರ್ಯದರ್ಶಿ ನಿರ್ದೇಶನೀಡಿದ್ದು, ಈ ಹಿನ್ನೆಲೆಯಲ್ಲಿ ಮುಖ್ಯ ಸಿಬ್ಬಂದಿ ವ್ಯವಸ್ಥಾಪಕರು ಈ ಆದೇಶ ಹೊರಡಿಸಿದ್ದಾರೆ.
ಅಲ್ಲದೆ ನಿಗಮದ ಎಲ್ಲ ಮುಖ್ಯಸ್ಥರು, ಹಿರಿಯ, ವಿಭಾಗೀಯ ನಿಯಂತ್ರಣಾಧಿಕಾರಿಗಳು, ಕಾರ್ಯ ವ್ಯಸ್ಥಾಪಕರು, ಪ್ರಾಂಶುಪಾಲರು ಕ್ರಮ ಕೈಗೊಂಡು ಎಂಡಿ ಅವರಿಗೆ ವರದಿ ಸಲ್ಲಿಸಬೇಕು. ಬಳಿಕ ಎಂಡಿ ಅಕ್ರಮ್ ಪಾಷ ಅವರು ಸರ್ಕಾರಕ್ಕೆ ವರದಿಸಲ್ಲಿಸಲಿದ್ದಾರೆ.
ಸಾರಿಗೆ ನಿಗಮಗಳಲ್ಲಿ ಹಲವು ವರ್ಷಗಳಿಂದ ಒಂದೇ ಕಡೆ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿ ಕೆಲ ನೌಕರರಿಗೆ ಮಾನಸಿಕವಾಗಿ ಕಿರುಕುಳ ನೀಡುವುದು ರಜೆ ಕೊಡದೆ ಗೈರುಹಾಜರಿ ತೋರಿಸಿ ವೇತನ ಕಡಿತ ಮಾಡುವುದು ಸೇರಿದಂತೆ ಹಲವು ರೀತಿಯಲ್ಲಿ ಕಿರುಕುಳ ನೀಡುತ್ತಿದ್ದಾರೆ.
ಈ ಹಿನ್ನೆಲೆಯಲ್ಲಿ ಸರ್ಕಾರಕ್ಕೆ ಹಲವು ನೌಕರರು ದೂರು ಸಲ್ಲಿಸಿದ್ದು, ಆ ದೂರಿನ ಮೇರೆ ಸರ್ಕಾರ ಸಾರಿಗೆ ಇಲಾಖೆಯ ಕಾರ್ಯದರ್ಶಿ ಅವರು ಈ ಆದೇಶ ಮಾಡಿದ್ದು, ಅದನ್ನು ಪಾಲಿಸಲು ಸಂಸ್ಥೆಯ ಮುಖ್ಯ ಸಿಬ್ಬಂದಿ ವ್ಯವಸ್ಥಾಪಕರು ಮುಂದಾಗಿದ್ದಾರೆ. ಒಟ್ಟಾರೆ ನೌಕರರಿಗೆ ಆಗುತ್ತಿರುವ ಮಾನಸಿಕ ಕಿರುಕುಳ ಇದರಿಂದ ಸ್ವಲ್ಪಮಟ್ಟಿಗಾದರೂ ಕಡಿಮೆ ಆಗಬಹುದು ಅಂಬೋಣ..!
Related









