ಬೆಂಗಳೂರು: ಆಸ್ತಿ ಹರಾಜಿಗೂ ಮುನ್ನ 30.47 ಲಕ್ಷ ಆಸ್ತಿ ತೆರಿಗೆ ವಸೂಲಿ ಮಾಡಿದ ದಕ್ಷಿಣ ನಗರ ಪಾಲಿಕೆ ಅಧಿಕಾರಿಗಳು ಆಸ್ತಿ ತೆರಿಗೆ ಪಾವತಿಸದ ಕಳ್ಳರಿಗೆ ಭಯದ ವಾತಾವರಣ ಸೃಷ್ಟಿಸಿದ್ದಾರೆ.

ಇಂದು ಬೆಂಗಳೂರು ದಕ್ಷಿಣ ನಗರ ಪಾಲಿಕೆಯ ಜಯನಗರ ಹಾಗೂ ಬೊಮ್ಮನಹಳ್ಳಿ ವಲಯಗಳಲ್ಲಿ ಅತಿ ಹೆಚ್ಚು ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿರುವ ಪ್ರತಿ ವಲಯಗಳಲ್ಲಿ 50 ಆಸ್ತಿಗಳನ್ನು ಹರಾಜು ಪ್ರಕ್ರಿಯೆಗೆ ಒಳಪಡಿಸಲಾಯಿತು. ಈ ಕುರಿತಂತೆ ಪ್ರಚಾರಕ್ಕಾಗಿ ಪತ್ರಿಕಾ ಪ್ರಕಟಣೆಯನ್ನು ಸಹ ನೀಡಲಾಗಿತ್ತು.
ಬೊಮ್ಮನಹಳ್ಳಿ ವಲಯಕ್ಕೆ ಸಂಬಂಧಿಸಿದಂತೆ ಇಂದು ಬೆಳಗ್ಗೆ 11 ಗಂಟೆಯಿಂದ ಮಧ್ಯಾಹ್ನ 1.30 ಗಂಟೆಯವರೆಗೆ ಈ ವಲಯ ವ್ಯಾಪ್ತಿಯಲ್ಲಿ ಅತೀ ಹೆಚ್ಚು ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿರುವ ವಸತಿ/ ವಸತಿಯೇತರ ವರ್ಗದ ಒಟ್ಟು 50 ಆಸ್ತಿಗಳನ್ನು ಪಟ್ಟಿ ಮಾಡಿ, ಹರಾಜು ಪ್ರಕ್ರಿಯೆಗೆ ಒಳಪಡಿಸಲಾಗಿತ್ತು. ಇನ್ನು ಇವುಗಳ ಬಾಕಿ ಮೊತ್ತ 95,58,260 ರೂ. ಆಗಿತ್ತು.
ಈ ಎಲ್ಲ 50 ಆಸ್ತಿಗಳಿಗೆ ಈಗಾಗಲೇ Proclamation order ಗಳನ್ನು ಜಾರಿ ಮಾಡಿದ್ದು, ಮಾ.13ರಂದು ಹರಾಜು ಪ್ರಕ್ರಿಯೆಗೆ ಒಳಪಡಿಸಲು ವ್ಯಾಪಕ ಪ್ರಚಾರ ನೀಡಿ ಹರಾಜು ಪ್ರಕ್ರಿಯೆಯನ್ನು ಕೈಗೊಳ್ಳಲಾಗಿತ್ತು. ಈ ಪೈಕಿ 17 ಬೇ-ಬಾಕಿ ಆಸ್ತಿದಾರರು ಹರಾಜು ಪ್ರಕ್ರಿಯೆಗೂ ಮುನ್ನವೇ ಚಲನ್ ಅಥವಾ ಆನ್ಲೈನ್ ಮೂಲಕ ಪಾವತಿ ಮಾಡಿದ್ದು, ಈ ಬಗ್ಗೆ ಸಹಾಯಕ ಕಂದಾಯ ಅಧಿಕಾರಿಗಳು ವಿವರ ನೀಡಿದ್ದಾರೆ.
ಅದರಂತೆ 17 ಬೇ-ಬಾಕಿದಾರರಿಂದ ಒಟ್ಟಾರೆ 27,58,070 ರೂ. ಮೊತ್ತದ ಕಂದಾಯವನ್ನು ಹರಾಜು ಪ್ರಕ್ರಿಯೆಗೂ ಮುನ್ನ ಪಾವತಿ ಮಾಡಿರುವುದಾಗಿ ಸಹಾಯಕ ಕಂದಾಯ ಅಧಿಕಾರಿಗಳು ತಿಳಿಸಿದರು. ಅಂತಹ ಎಲ್ಲ ಬೇಬಾಕಿದಾರರಿಗೆ ಹರಾಜು ಪ್ರಕ್ರಿಯೆಯಿಂದ ಅವರ ಆಸ್ತಿಗಳನ್ನು ಕೈಬಿಟ್ಟಿರುವ ಬಗ್ಗೆ ನಿಯಮಾನುಸಾರ ಹಿಂಬರಹ ಜಾರಿ ಮಾಡಲು ಸಂಬಂಧಪಟ್ಟ ಸಹಾಯಕ ಕಂದಾಯ ಅಧಿಕಾರಿಗಳಿಗೆ ಸೂಚಿಸಲಾಗಿದೆ.
ಇನ್ನುಳಿದ 33 ಬೇ-ಬಾಕಿದಾರರು ಇಲ್ಲಿಯವರೆಗೂ ಪಾವತಿಸಿಲ್ಲ ಮತ್ತು ಈ ಆಸ್ತಿಗಳ ಹರಾಜು ಕರೆಯಲಾಗಿದ್ದು, ಸ್ಥಳದಲ್ಲಿ ಹಾಜರಿದ್ದ ಕೆಲವು ಸಾರ್ವಜನಿಕರು ಠೇವಣಿ ಮೊತ್ತ ಪಾವತಿಸಿ ಬಿಡ್ ಮಾಡಲು ಅಗತ್ಯ ಸಿದ್ಧತೆಯೊಂದಿಗೆ ಹರಾಜು ಪ್ರಕ್ರಿಯೆಗೆ ಬಂದಿಲ್ಲ. ಮತ್ತು ಈ ಹರಾಜು ಪ್ರಕ್ರಿಯೆಯನ್ನು ಮಧ್ಯಾಹ್ನ 1-30 ಗಂಟೆಯವರೆಗೆ ಮುಂದುವರೆಸಲಾಗಿ, ಯಾವುದೇ ಸಾರ್ವಜನಿಕರು ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸಿ ಬಿಡ್ ಮಾಡಲು ಮುಂದೆ ಬಂದಿಲ್ಲ. ಆದುದರಿಂದ ಉಳಿದ 33 ಬೇ-ಬಾಕಿದಾರರ ಆಸ್ತಿಗಳನ್ನು ಮುಂದಿನ ದಿನಗಳಲ್ಲಿ ಮತ್ತೊಮ್ಮೆ ಹರಾಜು ಪ್ರಕ್ರಿಯೆಗೆ ಒಳಪಡಿಸಲು ಸಿದ್ಧತೆ ಮಾಡಿಕೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇನ್ನು ಜಯನಗರ ವಲಯಕ್ಕೆ ಸಂಬಂಧಿಸಿದಂತೆ, ಜಂಟಿ ಆಯುಕ್ತರು ಬೆಂ.ದ.ನ.ಪಾ (ವಲಯ-1)ರ ಕಂದಾಯ ವಿಭಾಗದ ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆ ಪಾವತಿಸದ ಸ್ವತ್ತುಗಳು ಒಟ್ಟು ಸಂಖ್ಯೆ:50 ಸ್ವತ್ತುಗಳಿಂದ ಒಟ್ಟು 83,59,133 ರೂ.ಗಳು ಬಾಕಿ ಇರುವುದಾಗಿ ಸಭೆಯಲ್ಲಿ ತಿಳಿಸಿದರು. ಇದರಲ್ಲಿ ಒಟ್ಟು 02 (ಎರಡು) ಮಾಲೀಕರು ಒಟ್ಟು 2,89,352 ರೂ.ಗಳ ಆಸ್ತಿ ತೆರಿಗೆಯನ್ನು ಪಾವತಿ ಮಾಡಿದ್ದಾರೆ. ಉಳಿದಂತೆ ಒಟ್ಟು 48 ಸ್ವತ್ತುಗಳಿಂದ 80,69,781 ರೂ. ಬಾಕಿ ಇದೆ.
ಬಿಡ್‌ದಾರರಾದ ನಾಗಪ್ಪ ಬಿರೆದಾರ್ (ಮೊಬೈಲ್ ಸಂಖ್ಯೆ:9035090919) ಮತ್ತು ವಿನಯ್ (ಮೊಬೈಲ್ ಸಂಖ್ಯೆ:8746984142) ಆಸ್ತಿಗಳ ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸಿ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿರುವಂತಹ ಸ್ವತ್ತುಗಳ ಪಟ್ಟಿಯನ್ನು ಪರಿಶೀಲಿಸಿ ಈ ಪಟ್ಟಿಯಲ್ಲಿರುವಂತಹ ಸ್ವತ್ತುಗಳನ್ನು ಬಿಡ್ ಮಾಡಲು ಯಾವುದೇ ಆಸಕ್ತಿಯನ್ನು ತೋರಿಸಿಲ್ಲ.
ಜಂಟಿ ಆಯುಕ್ತರು (ಜಯನಗರ ವಲಯ-1) ಅವರು ಮಾತನಾಡಿ, ಬೆಂಗಳೂರು ದಕ್ಷಿಣ ನಗರ ಪಾಲಿಕೆ (ಜಯನಗರ ವಲಯ-1) ರವರ ವ್ಯಾಪ್ತಿಗೊಳಪಡುವ ಕಂದಾಯ ಅಧಿಕಾರಿ (ಜಯನಗರ/ಅಂಜನಾಪುರ/ಉತ್ತರಹಳ್ಳಿ) ರವರ ವ್ಯಾಪ್ತಿಯಲ್ಲಿರುವ ಆಸ್ತಿ ತೆರಿಗೆಯನ್ನು ಬಾಕಿ ಉಳಿಸಿಕೊಂಡಿರುವಂತಹ ಸ್ವತ್ತುಗಳಿಗೆ ಯಾವುದೇ ಬಿಡ್‌ದಾರರು ಆಸಕ್ತಿ ತೋರದಿರುವ ಕಾರಣ ಸದರಿ ಸ್ವತ್ತುಗಳನ್ನು ಪಾಲಿಕೆ ವಶಕ್ಕೆ ತೆಗೆದುಕೊಂಡು ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡು ಸ್ವತ್ತುಗಳ ಖಾತೆಯನ್ನು ಬೆಂಗಳೂರು ದಕ್ಷಿಣ ನಗರ ಪಾಲಿಕೆ ಹೆಸರಿಗೆ ಖಾತಾ ವರ್ಗಾವಣೆ ಮಾಡಲು ಸಭೆಯಲ್ಲಿ ತಿಳಿಸಿದರು.
ಮುಂದುವರಿದು, ಬೆಂಗಳೂರು ದಕ್ಷಿಣ ನಗರ ಪಾಲಿಕೆ (ಜಯನಗರ ವಲಯ-1)ರ ವ್ಯಾಪ್ತಿಯಲ್ಲಿರುವ ಅತಿ ಹೆಚ್ಚು ಆಸ್ತಿ ತೆರಿಗೆಯನ್ನು ಬಾಕಿ ಉಳಿಸಿಕೊಂಡಿರುವ ಸ್ವತ್ತುಗಳಿಗೆ ಬೆಸ್ಕಾಂ ಮತ್ತು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ರವರು ನೀಡಿರುವ ಸಂಪರ್ಕವನ್ನು ಕಡಿತಗೊಳಿಸಲು ಸಂಬಂಧಪಟ್ಟ ಇಲಾಖೆಗಳಿಗೆ ಪತ್ರ ಬರೆಯಲು ಅಧಿಕಾರಿಗಳಿಗೆ ಸೂಚಿಸಿದರು.
ಆಸ್ತಿ ತೆರಿಗೆಯನ್ನು ಬಾಕಿ ಉಳಿಸಿಕೊಂಡಿರುವ ಸ್ತತ್ತುಗಳ ಮಾಲೀಕರುಗಳಿಗೆ ಇನ್ನು ಹೆಚ್ಚು ಪ್ರಚಾರವನ್ನು ಮಾಡಿ ಆಸ್ತಿ ತೆರಿಗೆಯನ್ನು ಪಾವತಿಸುವಂತೆ ಕ್ರಮ ಕೈಗೊಳ್ಳಲು ಸೂಚಿಸಿದರು. ಸ್ವತ್ತಿನ ಮಾಲೀಕರು ಆಸ್ತಿ ತೆರಿಗೆಯನ್ನು ಪಾವತಿಸದೇ ಇದ್ದಲ್ಲಿ ಅಂತಹ ಸ್ವತ್ತುಗಳ ಹರಾಜು ಪ್ರಕ್ರಿಯೆಯನ್ನು ಮುಂದಿನ ದಿನಾಂಕದಂದು ಮತ್ತೊಮ್ಮೆ ಕೈಗೊಳ್ಳುವುದಾಗಿ ತಿಳಿಸಿದರು.
Related










