ಬೆಂಗಳೂರು: ಬಿಬಿಎಂಪಿ ವತಿಯಿಂದ ಡಾಂಬರು ಮಿಶ್ರಣ ತಯಾರಿಕಾ ಘಟಕವನ್ನು(Hot Mix Plant) ಸ್ಥಾಪಿಸಿ ಡಾಂಬರು ಮಿಶ್ರಣವನ್ನು ಉತ್ಪಾದಿಸಿ ರಸ್ತೆಗುಂಡಿಗಳನ್ನು ಮುಚ್ಚಲು ಕ್ರಮಕೈಗೊಂಡಿದ್ದು, ರಸ್ತೆಗುಂಡಿಗಳನ್ನು ಮುಚ್ಚಲು ಸಮರ್ಪಕ ಮೇಲ್ವಿಚಾರಣೆ ಹಾಗೂ ಇದರ ಕಾರ್ಯಚಟುವಟಿಕೆಯ ಮೇಲೆ ನಿಗಾವಹಿಸದೇ ಇರುವುದನ್ನು ಕಂಡು ಬಿಬಿಎಂಪಿ ಆಡಳಿತಾಧಿಕಾರಿ ಗೌರವ್ ಗುಪ್ತ ಬೇಸರ ವ್ಯಕ್ತಪಡಿಸಿದರು.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ವತಿಯಿಂದ ಕಣ್ಣೂರು ಬಳಿ ಸ್ಥಾಪಿಸಿರುವ ಡಾಂಬರು ಮಿಶ್ರಣ ಘಟಕ (Hot Mix Plant)ವನ್ನು ಇಂದು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ನಿತ್ಯ ಎಷ್ಟು ಲೋಡ್ ಡಾಂಬರು ಯಾವ ವಲಯಕ್ಕೆ ಕಳುಹಿಸಲಾಗುತ್ತಿದೆ, ಯಾವ ರಸ್ತೆಗಳಲ್ಲಿ ರಸ್ತೆಗುಂಡಿಗಳನ್ನು ಮುಚ್ಚಲಾಗುತ್ತಿದೆ, ಇದುವರೆಗೆ ಎಷ್ಟು ರಸ್ತೆಗಳಲ್ಲಿ ಗುಂಡಿಗಳನ್ನು ಮುಚ್ಚಲಾಗಿದೆ, ಯಾವ ಮೆಟಿರಿಯಲ್ ಬಳಸುತ್ತಿದ್ದೀರಾ, ಅದರ ಕ್ವಾಲಿಟಿ ಮತ್ತು ಕ್ವಾಂಟಿಟಿ ಏನಿದೆ, ಇಂಜಿನಿಯರ್‌ಗಳು ನೀಡುವ ಇಂಡೆಂಟ್ ಮಾಹಿತಿಯ ರಿಜಿಸ್ಟರ್‌ನ ನಿಖರ ಮಾಹಿತಿಯನ್ನು ನೀಡಬೇಕು ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.
ರಸ್ತೆ ಗುಂಡಿಗಳನ್ನು ಮುಚ್ಚುವ ವಿಚಾರವಾಗಿ, ಯಾವ ವಲಯಕ್ಕೆ ಎಷ್ಟು ಲೋಡ್ ಡಾಂಬರು ಕಳಿಸುತ್ತಿದ್ದಿರಾ, ಇಂಡೆಂಟ್ ಪಡೆದು ಪ್ರತಿ ನಿತ್ಯ ಯಾವ್ಯಾವ ಸ್ಥಳಕ್ಕೆ ಎಷ್ಟು ಟನ್ ರವಾನೆಯಾಗಲಿದೆ ಎಂಬ ಮಾಹಿತಿ ಲಭ್ಯವಿರಬೇಕು. ಇರುವ ಹಾಟ್ ಮಿಕ್ಸ್ ಪ್ಲಾಂಟ್‌ನ ಸಾಮರ್ಥ್ಯವನ್ನು ಪೂರ್ಣವಾಗಿ ಸದ್ಬಳಕೆ ಮಾಡಿಕೊಂಡು, ತ್ವರಿತವಾಗಿ ರಸ್ತೆಗುಂಡಿಗಳನ್ನು ಮುಚ್ಚಲು ಕ್ರಮವಹಿಸಬೇಕು. ಪ್ಲಾಂಟ್ ನಿಂದ ಪ್ರತಿನಿತ್ಯ ಡಾಂಬರು ಎಲ್ಲಿಗೆ ಹೋಗುತ್ತಿದೆ ಎಂಬ ಸಂಪೂರ್ಣ ಮಾಹಿತಿ ರಿಜಿಸ್ಟರ್‌ನಲ್ಲಿ ನಮೂದಿಸಬೇಕು ಇಲ್ಲದಿದ್ದರೆ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಡಾಂಬರಿಗೆ ಅವಶ್ಯವಿರುವ ಮೆಟೀರಿಯಲ್ಸ್ ಅನ್ನು ಎಲ್ಲಿಂದ ತರಲಾಗುತ್ತಿದೆ. ಯಾವ ಜೆಲ್ಲಿ ಬಳಕೆ ಮಾಡಲಾಗುತ್ತಿದೆ. ಪ್ರತಿ ನಿತ್ಯ ಹೊರಹೋಗುವ ಡಾಂಬರು ಪ್ರಮಾಣದ Weighing Bridge Report ರಿಜಿಸ್ಟರ್ ನಿರ್ವಹಣೆ ಮಾಡಬೇಕು. ಗುತ್ತಿಗೆದಾರರಿಂದ ಸರಿಯಾಗಿ ಕೆಲಸ ಮಾಡಿಸಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು. ಜತೆಗೆ ಡಾಂಬರು ಕಳುಹಿಸುವ ಬಗ್ಗೆ ರಿಯಲ್ ಟೈಮ್ ಮಾಹಿತಿ ನೀಡಬೇಕು.
ಯಾವ ಟ್ರಕ್ ಎಲ್ಲಿಗೆ ಕಳುಹಿಸಲಾಗುತ್ತಿದೆ, ಎಷ್ಟು ಗುಂಡಿಗಳನ್ನು ಮುಚ್ಚಲಾಗಿದೆ ಎಂಬ ಮಾಹಿತಿಯನ್ನು ಸಂಗ್ರಹಿಸಬೇಕು ಎಂದು ಸೂಚನೆ ನೀಡಿದರು. ಈ ಮಾಹಿತಿಯು ಆಡಳಿತಗಾರರು, ಆಯುಕ್ತರು, ಎಲ್ಲಾ ವಿಶೇಷ ಆಯುಕ್ತರು, ಜಂಟಿ ಆಯುಕ್ತರು, ಪ್ರಧಾನ ಅಭಿಯಂತರರು ಮತ್ತು ಮುಖ್ಯ ಅಭಿಯಂತರರಿಗೆ ಪ್ರತಿ ದಿನ ಲಭ್ಯವಾಗಬೇಕು ಎಂದು ಸೂಚಿಸಿದರು.
ವಿಶೇಷ ಆಯುಕ್ತ (ಯೋಜನೆ) ಮನೋಜ್ ಜೈನ್, ಪಾಲಿಕೆ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಎಂ.ಆರ್.ವೆಂಕಟೇಶ್, ಮುಖ್ಯ ಅಭಿಯಂತರ (ರಸ್ತೆ ಮೂಲಭೂತ ಸೌಕರ್ಯ) ಪ್ರಹ್ಲಾದ್ ಹಾಗೂ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.
ನೀವು ಎಷ್ಟೇ ಹೇಳಿದರೂ ಅಧಿಕಾರಿಗಳು ಮಾಡುವುದನ್ನೇ ಮಾಡೋದು ನಿಮ್ಮ ಮಾತಿಗೆ ಬೆಲೆ ಬರಬೇಕಾದರೆ ಅವರು ಮಾಡುವ ಕೆಲಸವನ್ನು ಒಮ್ಮೆ ನೀವೇ ನಿಂತು ನೋಡಬೇಕು ಬಂದ ಪುಟ್ಟ ಹೋದ ಪುಟ್ಟ ಎಂಬಂತೆ ನೀವು ಅವರಿಗೆ ತಾಕೀತು ಮಾಡಿ ಹೋದರೆ ಪ್ರಯೋಜನವಿಲ್ಲ