ಮೈಸೂರು: ಪ್ರೇಮ ವಿವಾಹವಾಗಿದ್ದ ಗೃಹಿಣಿಯೊಬ್ಬಳು ಅನುಮಾನಾಸ್ಪದವಾಗಿ ಮೃತಪಟ್ಟಿರುವ ಘಟನೆ ಜಿಲ್ಲೆಯ ಮೆಲ್ಲಹಳ್ಳಿ ಗಾಮದಲ್ಲಿ ನಡೆದಿದೆ.
ಮಂಜುಳಾ(20) ಮೃತರು. ಸಾವಿಗೆ ಕಾರಣ ಏನು ಎಂದು ಇನ್ನು ಖಚಿತವಾಗಿಲ್ಲ. ಆದರೆ ವರದಕ್ಷಿಣೆ ಕಿರುಕುಳ ಹಿನ್ನೆಲೆಯಲ್ಲಿ ಕೊಲೆ ಮಾಡಲಾಗಿದೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ಹಳ್ಳಿಕೆರೆಹುಂಡಿಯ ಮಂಜುಳಾ ಹಾಗೂ ಮೆಲ್ಲಹಳ್ಳಿ ಗ್ರಾಮದ ಹೇಮಂತ್ ಪ್ರೀತಿಸಿ ಮದುವೆ ಆಗಿದ್ದರು. ಒಂದು ಮಗು ಜನಿಸಿದ ನಂತರ ಪತಿ ಮನೆಯವರು ತವರು ಮನೆಯಿಂದ 2 ಲಕ್ಷ ಹಣ ತರುವಂತೆ ಕಿರುಕುಳ ನೀಡುತ್ತಿದ್ದರಂತೆ. ಈ ವೇಳೆ ಮಂಜುಳಾ ತಂದೆ ಪುಟ್ಟಸ್ವಾಮಿ ಗೌಡ ಹಣ ನೀಡಲು ಒಂದು ತಿಂಗಳ ಸಮಯ ಕೇಳಿದ್ದರು. ಆದ್ರೆ ಮಂಗಳವಾರ ಅನುಮಾನಸ್ಪದವಾಗಿ ಮಂಜುಳಾ ಮೃತಪಟ್ಟಿದ್ದಾರೆ.
ಮಂಜುಳಾ ಪತಿ ಕುಟುಂಬಸ್ಥರು ಈಕೆಯ ಪಾಲಕರಿಗೆ ಸಾವಿನ ಬಗ್ಗೆ ಮಾಹಿತಿ ನೀಡದೇ ಅಂತ್ಯಕ್ರಿಯೆ ಮಾಡಲು ಮುಂದಾಗಿದ್ದರು. ಈ ವೇಳೆ ಮಂಜುಳಾ ಪಾಲಕರು ಆಪ್ತರಿಂದ ಹೇಗೋ ಮಾಹಿತಿ ಪಡೆದು ಪೊಲೀಸರ ಸಮೇತ ತೆರಳಿ ಅಂತ್ಯಕ್ರಿಯೆ ನಿಲ್ಲಿಸಿದ್ದಾರೆ. ಮಂಜುಳಾ ಮೃತದೇಹಕ್ಕೆ ಬೆಂಕಿ ಹಚ್ಚುವ ವೇಳೆ ಪೊಲೀಸರು ತಡೆದಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಗಂಡ ಹೇಮಂತ್, ಮಾವ ಪುಟ್ಟಸ್ವಾಮಿ, ಅತ್ತೆ ಭಾಗ್ಯ, ಮೈದುನ ಯಶವಂತ್ ವಿರುದ್ಧ ವರುಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.