ಏ.6ರಂದು KSRTC ಎಂಡಿ ಜತೆ ಸಾರಿಗೆ ನೌಕರರ ಸಂಘಟನೆಗಳ ಸಭೆ- 2024 ರಿಂದ ವೇತನ ಹೆಚ್ಚಳ ಮಾಡದಿದ್ದರೆ ಹೋರಾಟ ಅನಿವಾರ್ಯ

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ವ್ಯವಸ್ಥಾಪಕ ನಿರ್ದೇಶಕ ಅಕ್ರಮ್ ಪಾಷ ಅವರ ಅಧ್ಯಕ್ಷತೆಯಲ್ಲಿ ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ಹಾಗೂ ಒಕ್ಕೂಟ ಪದಾಧಿಕಾರಿಗಳ ಸಭೆಯನ್ನು ಏ.6ರಂದು ಕರೆಯಲಾಗಿದೆ.

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಕೇಂದ್ರ ಕಚೇರಿಯ ಸಮ್ಮೇಳನ ಸಭಾಂಗಣದಲ್ಲಿ ಅಂದು ಮಧ್ಯಾಹ್ನ 3ಗಂಟೆಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ನೌಕರರ ಸಂಘಟನೆಗಳ ಒಕ್ಕೂಟ, ಕರ್ನಾಟಕ ರಸ್ತೆ ಸಾರಿಗೆ ಮಜ್ದೂರ್ ಸಂಘ ಒಕ್ಕೂಟ ಹಾಗೂ KSRTC & BMTC ಯುನೈಟೆಡ್ ಎಂಪ್ಲಾಯೀಸ್ ಯೂನಿಯನ್ ಪದಾಧಿಕಾರಿಗಳ ಸಭೆ ಕರೆಯಲಾಗಿದೆ.
ಬಳಿಕ ಮಧ್ಯಾಹ್ನ 4ಗಂಟೆಗೆ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ಪದಾಧಿಕಾರಿಗಳ ಸಭೆ ವ್ಯವಸ್ಥಾಪಕ ನಿರ್ದೇಶಕರ ಅಧ್ಯಕ್ಷತೆಯಲ್ಲಿ ನಿಗದಿಪಡಿಸಲಾಗಿದೆ.
ಇನ್ನು ಸ್ಥಳಾವಕಾಶದ ಲಭ್ಯತೆಯ ದೃಷ್ಟಿಯಿಂದ ಪ್ರತಿ ಕಾರ್ಮಿಕ ಸಂಘಟನೆಯಿಂದ ಇಬ್ಬರು ಪದಾಧಿಕಾರಿಗಳು ಮಾತ್ರ ಹಾಜರಾಗಬೇಕು ಎಂದು ತಿಳಿಸಿದ್ದಾರೆ.
ಜಂಟಿ ಕ್ರಿಯಾ ಸಮಿತಿ ಪದಾಧಿಕಾರಿಗಳು, ಬಿಎಂಟಿಸಿ, ಎನ್‌ಡಬ್ಲ್ಯುಕೆಆರ್‌ಟಿಸಿ ಹಾಗೂ ಕೆಕೆಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕರು ಕೂಡ ಅಗತ್ಯ ಮಾಹಿತಿಗಾಗಿ ಹಾಗೂ ಅಗತ್ಯ ಮಾಹಿತಿಯೊಂದಿಗೆ ಸಭೆಗೆ ಹಾಜರಾಗಲು ಕೋರಿದ್ದಾರೆ.
ಇನ್ನು ಈ ಹಿಂದೆ ನಡೆದ ಸಭೆಯಲ್ಲಿ ನೌಕರರಿಗೆ ಸಂಬಂಧಿಸಿದ ವೇತನ ಹೆಚ್ಚಳ ಹಾಗೂ 2020ರ ಜನವರಿ 1ರಿಂದ ಅನ್ವಯವಾಗುವಂತೆ ಆಗಿರುವ ಶೇ.15ರಷ್ಟು ವೇತನ ಹೆಚ್ಚಳದ 38 ತಿಂಗಳ ಹಿಂಬಾಕಿ ಸಂಬಂಧ ಸಂಘಟನೆಗಳು ಕೊಡಲೇಬೇಕು ಎಂದು ಪಟ್ಟು ಹಿಡಿದಿದ್ದರಿಂದ ಮತ್ತೊಮ್ಮೆ ಸಭೆ ಕರೆಯಲಾಗುವುದು ಎಂದು ಎಂಡಿ ಹೇಳಿದ್ದರು.
ಅದರಂತೆ ಈಗ ಅಂದರೆ ಏ.6ರಂದು ಸಭೆ ಕರೆದಿದ್ದಾರೆ. ಆದರೆ, ಈ ಸಂಭೆಯಲ್ಲೂ ಎಂಡಿ ಅವರು ನಾವು 26 ತಿಂಗಳ ಹಿಂಬಾಕಿ ಹಾಗೂ 2025 ಏ.1ರಿಂದ ಜಾರಿಗೆ ಬರುವಂತೆ ವೇತನ ಹೆಚ್ಚಳ ಮಾಡಲಾಗುವುದು ಎಂಬ ಬಗ್ಗೆ ಮತ್ತೊಮ್ಮೆ ಸಂಘಟನೆಗಳ ಪದಾಧಿಕಾರಗಳ ಜತೆ ಚರ್ಚಿಸಿ ಮನವೊಲಿಸುವ ಕೆಲಸ ಮಾಡಲಿದ್ದಾರೆ ಎನ್ನಲಾಗಿದೆ.
ಈ ನಡುವೆ ಸರ್ಕಾರ 26 ತಿಂಗಳ ಹಿಂಬಾಕಿ ಕೊಡಲು ಈಗಾಗಲೇ ಘೋಷಣೆ ಮಾಡಿದೆ. ಅದರಂತೆ ಅನುದಾನವನ್ನು ಬಿಡುಗಡೆ ಮಾಡಿದೆ. ಇನ್ನು ಸಾರಿಗೆಯ 4 ನಿಗಮಗಳಿಂದ ಉಳಿದ 12 ತಿಂಗಳ ಹಿಂಬಾಕಿಯನ್ನು ಕೊಡಬೇಕು ಎಂಬ ಒತ್ತಾಯವನ್ನು ಸಂಘಟನೆಗಳ ಪದಾಧಿಕಾರಿಗಳು ಮಂಡಿಸುವ ಸಾಧ್ಯತೆ ಹೆಚ್ಚಿದೆ. ಆದರೆ, ಇದಕ್ಕೆ ಎಂಡಿ ಹಾಗೂ ನಿಗಮಗಳ ಆಡಳಿತ ಮಂಡಳಿ ಯಾವ ರೀತಿ ಸ್ಪಂದಿಸುತ್ತದೆ ಎಂಬುದನ್ನು ಕಾದು ನೋಡಬೇಕಿದೆ.
ಇನ್ನೊಂದು ಪ್ರಮುಖವಾಗಿ 2024 ಜನವರಿ 1ರಿಂದ ಮತ್ತೆ ನೌಕರರ ವೇತನ ಹೆಚ್ಚಳವಾಗಬೇಕು. ಆದರೆ, ಅದನ್ನು ಮತ್ತೆ 15 ತಿಂಗಳುಗಳ ಕಾಲ ಮುಂದಕ್ಕೆ ಹಾಕ್ಕಿ ಅಂದರೆ 2025 ಏ.1ರಿಂದ ಕೊಡುತ್ತೇವೆ ಎಂದು ಹೇಳುತ್ತಿರುವುದನ್ನು ಯಾವುದೇ ಸಂಘಟನೆಗಳ ಪದಾಧಿಕಾರಿಗಳು ಒಪ್ಪುತ್ತಿಲ್ಲ. ಹೀಗಾಗಿ ಕೊನೆಗೆ 2025 ಜನವರಿ 1ರಿಂದ ಕೊಡುತ್ತೇವೆ ಎಂದು ಅಂತಿಮ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆಯೂ ದಟ್ಟವಾಗಿದೆ.
ಆದರೆ, ಇದಕ್ಕೆ ನೌಕರರ ಪರ ಸಂಘಟನೆಗಳ ಪದಾಧಿಕಾರಿಗಳು ಯಾವರೀತಿ ನಡೆದುಕೊಳ್ಳುತ್ತಾರೆ ಎಂಬುವುದರ ಮೇಲೆ ನೌಕರರ ವೇತನ ಹೆಚ್ಚಳದ ಭವಿಷ್ಯ ಅಡಗಿದೆ. ಕಾರಣ ಇದು ಕಾನೂನು ಬದ್ಧವಾಗಿ ನೌಕರರಿಗೆ 2024 ಜನವರಿ 1ರಿಂದಲೇ ಆಗಬೇಕು. ಆದರೆ, ಈ ನಿಯಮವನ್ನೇ ಗಾಳಿಗೆ ತೂರಿ ಸರ್ಕಾರ ಸರ್ವಾಧಿಕಾರಿಯಂತೆ ನೌಕರರ ವೇತನ ಹೆಚ್ಚಳ ವಿಷಯದಲ್ಲಿ ನಡೆದುಕೊಳ್ಳುತ್ತಿರುವುದು ಭಾರಿ ನೋವು ತಂದಿದೆ ಎಂದು ಸಂಘಟನೆಗಳ ಮುಖಂಡರೊಬ್ಬರು ಹೇಳಿಕೆ ನೀಡಿದ್ದು, ಒಂದು ವೇಳೆ 2024 ಜನವರಿ 1ರಿಂದ ವೇತನ ಹೆಚ್ಚಳ ಮಾಡಲು ಒಪ್ಪದಿದ್ದರೆ ಹೋರಾಟ ಮಾಡಲಾಗುವುದು ಎಂದು ಸರ್ಕಾರಕ್ಕೆ ಹಾಗೂ ಸಾರಿಗೆ ನಿಗಮಗಳ ಆಡಳಿತ ಮಂಡಳಿಗಳಿಗೆ ಎಚ್ಚರಿಕೆ ನೀಡಿದ್ದಾರೆ.
Related









