ಬೆಂಗಳೂರು: ಸರ್ಕಾರಿ ನೌಕರರ ಖಾಸಗಿ ಬದುಕಿಗೂ ಕಡಿವಾಣ ಹಾಕುವ ರೀತಿಯಲ್ಲಿ ಸರ್ಕಾರ ಕಾನೂನನ್ನು ರೂಪಿಸುತ್ತಿದ್ದು, ಇದು ನೌಕರರ ಅರ್ಧ ಬದುಕನ್ನೇ ನಿರ್ನಾಮ ಮಾಡಲು ಹೊರಟಿದೆ ಎಂದು ನೌಕರರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.
ಹೌದು! ಸರ್ಕಾರಿ ಸೇವೆಯಲ್ಲಿದ್ದುಕೊಂಡೇ ಟಿವಿ, ನಾಟಕ, ಸಿನೆಮಾಗಳಲ್ಲಿ ಬಣ್ಣ ಹಚ್ಚುವ ಪ್ರತಿಭಾವಂತ ಸರ್ಕಾರಿ ನೌಕರರಿಗೆ ಮೂಗುದಾರ ಹಾಕಲು ಸರ್ಕಾರ ಸಜ್ಜಾಗಿದೆ. ಈ ಸಂಬಂಧ ಕಾನೂನು ರೂಪಿಸುತ್ತಿದ್ದು ಅದು ಜಾರಿಗೆ ಬದರೆ ನೌರಿಯಲ್ಲಿದ್ದುಕೊಂಡು ಅಭಿನಯದ ಗೀಳು ಹಚ್ಚಿಕೊಂಡಿರುವ ಅನೇಕ ಕಲಾವಿದರು ನಿರಾಸೆಗೆ ಒಳಗಾಗಲಿದ್ದಾರೆ.
ಸರ್ಕಾರಿ ಸೇವೆಯಲ್ಲಿರುವವರು ಸಿನಿಮಾ, ಟಿವಿ, ನಾಟಕಗಳಲ್ಲಿ ಇನ್ನು ಮುಂದೆ ಬಣ್ಣ ಹಚ್ಚುವಂತಿಲ್ಲ ಮತ್ತು ಯಾವುದೇ ಸಂದರ್ಭದಲ್ಲಿಯೂ ಸರ್ಕಾರದ ವಿರುದ್ಧ ಚಕಾರವೆತ್ತುವಂತಿಲ್ಲ. ಅಲ್ಲದೇ ನೌಕರರು ಸಾರ್ವಜನಿಕ ಸ್ಥಳಗಳಲ್ಲಿ ಮದ್ಯಪಾನ ಮಾಡುವುದನ್ನೂ ಸಹ ಕರಡು ನಿಯಮಾವಳಿಯಲ್ಲಿ ನಿರ್ಬಂಧಿಸಲಾಗಿದೆ.
ಸಾಲದೆಂಬಂತೆ ಸರ್ಕಾರಿ ನೌಕರರು ಇಲಾಖಾವಾರು ಮುಖ್ಯಸ್ಥರ ಅನುಮತಿ ಇಲ್ಲದೇ ಯಾವುದೇ ರೀತಿಯ ವಿದೇಶ ಪ್ರವಾಸಗಳನ್ನು ಸಹ ಹೋಗುವಂತಿಲ್ಲ ಎಂದು ಮಾರ್ಗಸೂಚಿಯಲ್ಲಿ ತಿಳಿಸಿದೆ.
ಸಾರ್ವಜನಿಕರ ಅಭಿಪ್ರಾಯಕ್ಕೆಂದು ಈ ಕರಡು ನಿಯಾಮವಳಿಯನ್ನು ಬಿಡಲಾಗಿದ್ದು, ಶೀಘ್ರವೇ ಇದಕ್ಕೆ ಕಾನೂನಿನ ರೂಪ ಸಿಗಲಿದೆ. ಪೊಲೀಸ್ ಅಧಿಕಾರಿಯಾಗಿದ್ದ ಪ್ರಸ್ತುತ ಕೃಷಿ ಸಚಿವ ಬಿ.ಸಿ. ಪಾಟೀಲ್, ನಿವೃತ್ತ ಐಎಎಸ್ ಅಧಿಕಾರಿ ಕೆ. ಶಿವರಾಮ ಅವರು ಸೇವಾವಧಿಯಲ್ಲಿ ಬಣ್ಣದ ಲೋಕದಲ್ಲಿ ಮಿಂಚಿದ್ದನ್ನು ಇಲ್ಲಿ ಸ್ಮರಿಸಬಹುದು.