KSRTC ಕೋಲಾರ ವಿಭಾಗದ ಅಧಿಕಾರಿಗಳ ದರ್ಪ- ಚಾಲಕರ ಹೆದರಿಸಿ ವಿಶ್ರಾಂತಿ ರಹಿತ ಡಬಲ್ ಡ್ಯೂಟಿ, ಸಿಂಗಲ್ ಪೇಮೆಂಟ್, ಒಟಿ ಕೇಳಿದರೆ ಅಮಾನತು ಮಾಡುವ ನೀಚರು
ಮೇಲಧಿಕಾರಿಗಳ ಆದೇಶಕ್ಕೂ ಕಿಮ್ಮತ್ತಿಲ್ಲ, ಬಿಟ್ಟಿ ದುಡಿಮೆ, ಈರೀತಿ ಅಪಘಾತವಾದರೆ ಅಮಾನತಿನ ಶಿಕ್ಷೆ, ಕೇಳೋರಿಲ್ಲ ಹೇಳೋರಿಲ್ಲ, ಈ ಅಧಿಕಾರಿಗಳ ದರ್ಪಕ್ಕೆ ಕೊನೆಯೇ ಇಲ್ಲ, ಎಂಡಿ ಅನಿಸಿಕೊಂಡವರು ಕಚೇರಿ ಬಿಟ್ಟು ಹೊರೆಗೆ ಬರೋದೆ ಇಲ್ಲ!!!

ಶಿಗ್ಗಾವ್: ಚಾಲಕನ ನಿಯಂತ್ರಣ ತಪ್ಪಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್ ಪಲ್ಟಿ ಹೊಡೆದ ಪರಿಣಾಮ ಹಲವಾರು ಮಂದಿ ಪ್ರಯಾಣಿಕರು ಗಾಯಗೊಂಡಿರುವ ಘಟನೆ ಶಿಗ್ಗಾವ್ ಬಳಿ ಇಂದು ಬೆಳಗ್ಗೆ 4.30ರ ಸುಮಾರಿಗೆ ನಡೆದಿದೆ.

ಕೋಲಾರ ವಿಭಾಗದ ಮುಳಬಾಗಿಲು ಘಟಕದಿಂದ ಹುಬ್ಬಳ್ಳಿಗೆ ಹೋಗುತ್ತಿದ್ದ KA07 F1896 ವಾಹನವು ಶಿಗ್ಗಾವ್ ಬಳಿ ಚಾಲಕನ ನಿಯಂತ್ರಣ ತಪ್ಪಿ ಅಪಘಾತವಾಗಿದೆ. ಅಪಘಾತದಿಂದ ಕೆಲ ಪ್ರಯಾಣಿಕರ ತಲೆ, ಕೈ, ಕಾಲುಗಳಿಗೆ ಗಾಯವಾಗಿದ್ದು, ಆಂಬುಲೆನ್ಸ್ ಮೂಲಕ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇನ್ನು ಮುಳಬಾಗಿಲಿನಿಂದ ಒಬ್ಬನೇ ಚಾಲಕ ಹುಬ್ಬಳ್ಳಿ ವರೆಗೂ ವಿಶ್ರಾಂತಿ ರಹಿತ ಚಾಲನೆ ಮಾಡಿಕೊಂಡು ಹೋಗುತ್ತಿದ್ದರಿಂದ ಈ ಅಪಘಾತ ಸಂಬವಿಸಿದೆ. ಘಟಕದ ಹಾಗೂ ವಿಭಾಗದ ಅಧಿಕಾರಿಗಳು ಇಬ್ಬರು ಚಾಲಕರು ಮತ್ತು ನಿರ್ವಾಹಕರನ್ನು ಕೊಡಬೇಕು ಆದರೆ, ಇಲ್ಲಿನ ಅಧಿಕಾರಿಗಳು ಒಬ್ಬನೇ ಚಾಲಕ ಮತ್ತು ನಿರ್ವಾಹಕರನ್ನು ಕಳುಹಿಸುತ್ತಿರುವುದರಿಂದ ಇಂತಹ ಘಟನೆಗಳು ಮರುಕುಳಿಸುತ್ತಿವೆ, ಇದಕ್ಕೆ ಯಾರು ಜವಾಬ್ದಾರರು?
ಇನ್ನು ಕೋಲಾರ ವಿಭಾಗದಲ್ಲಿ ಮೇಲಧಿಕಾರಿಗಳ ಆದೇಶವನ್ನು ಗಾಳಿತೂರಿ ಇಲ್ಲಿನ ಅಧಿಕಾರಿಗಳು ನೌಕರರಿಗೆ ಕಿರುಕುಳ ನೀಡುವುದು ಇಬ್ಬರು ಸಿಬ್ಬಂದಿಗಳನ್ನು ಹಾಕುವ ಬದಲು ಒಬ್ಬೊಬ್ಬರನ್ನು ಡ್ಯೂಟಿ ಕಳುಹಿಸುತ್ತಿದ್ದಾರೆ. ಅಲ್ಲದೆ, ಈ ನೌಕರರಿಗೆ ಒಟಿಯನ್ನು ಕೊಡುತ್ತಿಲ್ಲ. ಕಾನೂನು ಪ್ರಕಾರ ಈ ಚಾಲನಾ ಸಿಬ್ಬಂದಿಗಳಿಗೆ ಡಬಲ್ ವೇತನ ಕೊಡಬೇಕು. ಆದರೆ, ಯಾವುದನ್ನು ಕೊಡದೆ 8 ಗಂಟೆಗೆ ಬದಲಿಗೆ 24 ಗಂಟೆ ಬಿಟ್ಟಿಯಾಗಿ ದುಡಿಸಿಕೊಳ್ಳುತ್ತಿದ್ದಾರೆ.
ಈ ರೀತಿ ಚಾಲನಾ ಸಿಬ್ಬಂದಿಗಳನ್ನು ಕೋಲಾರ ವಿಭಾಗದ ಅಧಿಕಾರಿಗಳು ವಿಶ್ರಾಂತಿ ರಹಿತವಾಗಿ ಡ್ಯೂಟಿ ಮಾಡಿಸುತ್ತಿರುವುದರಿಂದ ಅವರಿಗೆ ಒಟಿಯೂ ಇಲ್ಲ ಜತೆಗೆ ದೈಹಿಕ ಮತ್ತು ಮಾನಸಿಕವಾಗಿ ವಿಶ್ರಾಂತಿ ಇಲ್ಲದೆ ಸರಿಯಾಗಿ ನಿದ್ರೆಯನ್ನು ಮಾಡದೆ ದೇಹ ದಣಿಯುತ್ತಿರುವುದರಿಂದ ಇಂತಹ ಅಪಘಾತಗಳು ಸಂಭವಿಸುತ್ತಿವೆ. ಆದರೆ, ಈ ಅಪಘಾತವಾದಾಗ ಸರಿಯಾದ ಸಹಕಾರ ನೀಡದೆ ಚಾಲನಾ ಸಿಬ್ಬಂದಿಗಳ ಮೇಲೆ ದೂರು ಹೊರಿಸಿ ಅಮಾನತು ಮಾಡುತ್ತಿದ್ದಾರೆ.
ಇನ್ನು ಚಾಲನಾ ಸಿಬ್ಬಂದಿಗಳು ಕೂಡ ತಮ್ಮ ಹಕ್ಕನ್ನು ಕೇಳದೆ ಇಂಥ ಅಧಿಕಾರಿಗಳ ದರ್ಪಕ್ಕೆ ಹೆದರೆ ವಿಶ್ರಾಂತಿ ರಹಿತ ಡ್ಯೂಟಿ ಮಾಡುತ್ತಿರುವುದು ಅಲ್ಲದೆ ಡಬಲ್ ವೇತನ ಪಡೆಯುವ ಜಾಗದಲ್ಲಿ ಬರುಇ ವೇತನ ಪಡೆಯುತ್ತಿದ್ದಾರೆ. ಇನ್ನು ಈ ರೀತಿಯ ಅಧಿಕಾರಿಗಳ ದರ್ಪವನ್ನು ಪ್ರಶ್ನಿಸಿದ ರಾಮಚಂದ್ರ ರೆಡ್ಡಿ ಎಂಬ ಚಾಲನಾ ಸಿಬ್ಬಂದಿಯೊಬ್ಬರು ಈ ಅಧಿಕಾರಿಗಳು ಇನ್ನಿಲ್ಲ ಕಿರುಕುಳ ನೀಡಿ ಸೇವೆಯಿಂದಲೇ ವಜಾ ಮಾಡಿದ್ದಾರೆ.
ಮುಖ್ಯ ಸಂಚಾರ ವ್ಯವಸ್ಥಾಪಕರ ಆದೇಶದಲ್ಲೇನಿದೆ?: ವಿಭಾಗೀಯ ನಿಯಂತ್ರಣಾಧಿಕಾರಿಗಳು 480 ಕಿ.ಮೀ ಕ್ಕಿಂತ ಹೆಚ್ಚಿನ ಅನುಸೂಚಿ ಕಿ.ಮೀ ಇರುವ ವೇಗದೂತ ಅನುಸೂಚಿಗಳಿಗೆ ಚಾಲಕ, ನಿರ್ವಾಹಕರನ್ನು ಕರ್ತವ್ಯಕ್ಕೆ ನಿಯೋಜಿಸುವ ಬಗ್ಗೆ ತಾತ್ಸಾರ ಮಾಡಬಾರದು.
ಈ ವಿಷಯಕ್ಕೆ ಸಂಬಂಧಿಸಿದಂತೆ, ವಿಭಾಗಗಳ ವ್ಯಾಪ್ತಿಯಲ್ಲಿ ಬರುವ ಬಸ್ ಘಟಕಗಳಲ್ಲಿ 480 ಕಿಮೀಗಿಂತ ಹೆಚ್ಚಿನ ಅನುಸೂಚಿ ಕಿ.ಮೀ.ಇರುವ ವೇಗದೂತ ಅನುಸೂಚಿಗಳಿಗೆ ಚಾಲನಾ ಸಿಬ್ಬಂದಿಗಳನ್ನು ನಿಯೋಜಿಸುವ ಬಗ್ಗೆ ಈಗಾಗಲೇ ಉಲ್ಲೇಖಿತ ಪತ್ರಗಳಲ್ಲಿ ಅಗತ್ಯ ನಿರ್ದೇಶನಗಳನ್ನು ನೀಡಲಾಗಿದೆ. ಅದಾಗ್ಯೂ ಸಹ ಈ ನಿರ್ದೇಶನಗಳನ್ನು ಪಾಲಿಸದೇ ಇರುವುದರಿಂದ ಕೇಂದ್ರ ಕಚೇರಿಗೆ ದೂರುಗಳು ಬರುತ್ತಿವೆ.
ನಿಮ್ಮ ವಿಭಾಗಗಳಿಂದ 480 ಕಿಮೀಗಿಂತ ಹೆಚ್ಚಿನ ಅನುಸೂಚಿ ಕಿ.ಮೀ. ಕಾರ್ಯಾಚರಣೆಯಲ್ಲಿರುವ ವೇಗದೂತ ಅನುಸೂಚಿಗಳಿಗೆ ಇಬ್ಬರು ಚಾಲಕರು ಮತ್ತು ಓರ್ವ ನಿರ್ವಾಹಕರನ್ನು ಕರ್ತವ್ಯಕ್ಕೆ ನಿಯೋಜಿಸಲು ಕ್ರಮ ಕೈಗೊಳ್ಳುವುದು. ಈ ವಿಷಯದಲ್ಲಿ ಯಾವುದೇ ದೂರುಗಳಿಗೆ ಆಸ್ಪದ ನೀಡದಂತೆ ಕ್ರಮ ಕೈಗೊಳ್ಳಲು ಸಂಬಂಧಪಟ್ಟ ಘಟಕ ವ್ಯವಸ್ಥಾಪಕರಿಗೆ ಸೂಚನೆ ನೀಡಿ ಅಗತ್ಯ ಕ್ರಮ ಜರಗಿಸಲು ಈ ಮೂಲಕ ಕೋರಲಾಗಿದೆ ಎಂದು ತಿಳಿಸಿದ್ದಾರೆ.
ಇನ್ನು ಕೋಲಾರ ವಿಭಾಗದಲ್ಲಿ ಸಿಬ್ಬಂದಿ ಬದಲಾವಣೆ ಮಾಡುವಂತೆ ಆದೇಶವಿದೆ. ಆದರೆ, ಈ ಆದೇಶವನ್ನು ಗಾಳಿತೂರಿ ಸಿಬ್ಬಂದಿಗಳ ಬದಲಾವಣೆ ಮಾಡದೆ ಒಬ್ಬರೇ ಚಾಲಕರು ಒಬ್ಬರು ನಿರ್ವಾಹಕರಿಂದಲೇ ಡ್ಯೂಟಿ ಮಾಡಿಸುತ್ತಿದ್ದಾರೆ. ಅಲ್ಲದೆ ಈ ಬಗ್ಗೆ ಸತ್ಯವನ್ನು ಮರೆಮಾಚಿ ನೌಕರರನ್ನು ಭಾರಿ ಕೀಳಾಗಿ ನಡೆಸಿಕೊಳ್ಳುತ್ತಿದ್ದಾರೆ. ಜತೆಗೆ ಸಿಬ್ಬಂದಿ ಬದಲಾವಣೆ ಮಾಡಬೇಕಲ್ಲವೇ ಎಂದು ತಮ್ಮ ಹಕ್ಕನ್ನು ಕೇಳುವ ಚಾಲನಾ ಸಿಬ್ಬಂದಿಗಳನ್ನು ಟಾರ್ಗೆಟ್ ಮಾಡಿ ಸೇವೆಯಿಂದ ಅಮಾನತು ಮಾಡುವಂತಹ ನೀಚ ಕೃತ್ಯಕ್ಕೆ ಈ ಅಧಿಕಾರಿಗಳು ಕೈಹಾಕುತ್ತಿದ್ದಾರೆ.
ಈ ಅಧಿಕಾರಿಗಳ ದರ್ಪಕ್ಕೆ ನಲುಗಿರುವ ಚಾಲನಾ ಸಿಬ್ಬಂದಿ ತಮ್ಮ ಹಕ್ಕನ್ನು ಕೇಳದೆ ಈ ನೀಚರು ಹೇಳಿದಂತೆ ಕೇಳಿಕೊಂಡು ಭಯದಲ್ಲೇ ಡ್ಯೂಟಿ ಮಾಡುತ್ತಿದ್ದಾರೆ. ಈ ಬಗ್ಗೆ ಸಂಬಂಧಪಟ್ಟ ಸಾರಿಗೆ ಸಚಿವರು ಹಾಗೂ ಕೆಲಸಕ್ಕೆ ಬಾರದಂತೆ ಇರುವ ಎಂಡಿಗಳು ಇನ್ನಾದರೂ ನೌಕರರಿಗೆ ಆಗುತ್ತಿರುವ ಸಮಸ್ಯೆ ಅನ್ಯಾಯವನ್ನು ಸರಿ ಪಡಿಸುವ ನಿಟ್ಟಿನಲ್ಲಿ ಕ್ರಮಕ್ಕೆ ಮುಂದಾಗಬೇಕಿದೆ.
Related









