ಕೇಂದ್ರ ಸರ್ಕಾರ 1966ರ ಸಕ್ಕರೆ ನಿಯಂತ್ರಣ ಕಾಯ್ದೆ ಬಗ್ಗೆ ಕೇಳಿರುವ ಅಭಿಪ್ರಾಯಕ್ಕೆ ರಾಜ್ಯ ಸರ್ಕಾರ ಸಮಿತಿ ರಚಿಸಿ ವರದಿ ತಯಾರಿಸಬೇಕು: ಕುರುಬೂರು ಶಾಂತಕುಮಾರ್ ಒತ್ತಾಯ
ರಾಜ್ಯ ಸರ್ಕಾರ ವಿಷಯ ಪರಿಣಿತರು, ಕಬ್ಬು ಬೆಳೆಗಾರರ ಸಂಘದ ರೈತ ಮುಖಂಡರು, ಆಡಳಿತಗಾರರು, ಕಾನೂನು ಸಲಹೆಗಾರರ ಒಳಗೊಂಡ ಸಮಿತಿ ರಚಿಸಿ ವರದಿ ತಯಾರಿಸಿ ಕೇಂದ್ರಕ್ಕೆ ಕಳಿಸಬೇಕು ಎಂದು ರಾಜ್ಯ ಕಬ್ಬು ಬೆಳೆಗಾರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್

ಮೈಸೂರು: ಕೇಂದ್ರ ಸರ್ಕಾರ 1966ರ ಸಕ್ಕರೆ ನಿಯಂತ್ರಣ ಕಾಯ್ದೆಯ ವಿಮರ್ಶೆ ಪರಿಸ್ಕರಣೆ ಮಾಡುವ ಬಗ್ಗೆ ಸಾರ್ವತ್ರಿಕವಾಗಿ ರಾಜ್ಯ ಸರ್ಕಾರ ಹಾಗೂ ಸಂಘ ಸಂಸ್ಥೆಗಳ ಅಭಿಪ್ರಾಯ ನೀಡಲು ಕೋರಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ವಿಷಯ ಪರಿಣಿತರು, ಕಬ್ಬು ಬೆಳೆಗಾರರ ಸಂಘದ ರೈತ ಮುಖಂಡರು, ಆಡಳಿತಗಾರರು, ಕಾನೂನು ಸಲಹೆಗಾರರ ಒಳಗೊಂಡ ಸಮಿತಿ ರಚಿಸಿ ವರದಿ ತಯಾರಿಸಿ ಕೇಂದ್ರಕ್ಕೆ ಕಳಿಸಬೇಕು ಎಂದು ರಾಜ್ಯ ಕಬ್ಬು ಬೆಳೆಗಾರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಒತ್ತಾಯಿಸಿದ್ದಾರೆ.

ಕಬ್ಬಿನ ಎಫ್‌ಆರ್‌ಪಿ ದರ ನಿಗದಿ ಮಾಡುವಾಗ ಕಬ್ಬಿನಿಂದ ಉತ್ಪತ್ತಿಯಾಗುವ ಸಿಪ್ಪೆ ಮತ್ತು ಅದರಿಂದ ಉತ್ಪಾದನೆಯಾಗುವ ವಿದ್ಯುತ್ ಮೊಲಸಿಸ್, ಇದರಿಂದ ಉತ್ಪತ್ತಿ ಯಾಗುವ ಮದ್ಯಸಾರ, ಯಥನಾಲ್ ಹಾಗೂ ಬಯೋ ಕಾಂಪೋಸ್ಟ್ ಗೊಬ್ಬರದ ಲಾಭವನ್ನು ಲೆಕ್ಕ ಹಾಕಿ ಕಬ್ಬಿನ ಎಫ್ ಆರ್ ಪಿ ದರ ನಿಗದಿ ಮಾಡಬೇಕು ಎಂದು ಮಂಗಳವಾರ ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದ್ದಾರೆ.
ಇನ್ನು ಕಬ್ಬಿನಿಂದ ಬರುವ ಸಕ್ಕರೆ ಇಳುವರಿ ಪ್ರಮಾಣವನ್ನು ಕನಿಷ್ಠ ಶೇ.9ಕ್ಕೆ ನಿಗದಿ ಮಾಡಬೇಕು. ಕಬ್ಬಿನ ಎಫ್ ಆರ್ ಪಿ ದರವನ್ನು ರೈತರ ಹೊಲದಲ್ಲಿನ ದರ ಎಂದು ನಿಗದಿ ಮಾಡಬೇಕು. ಕಟಾವು ಸಾಗಾಣಿಕೆಗೆ ಕಾರ್ಖಾನೆ ಉಸ್ತುವಾರಿ ಬಿಡಬೇಕು ಎಂದು ಹೇಳಿದ್ದಾರೆ.
ಅಲ್ಲದೆ ಕಬ್ಬಿಗೆ ಆಕಸ್ಮಿಕವಾಗಿ ಬೆಂಕಿ ಬಿದ್ದಾಗ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಹೊತ್ತಿಕೊಂಡಾಗ ಇಂತಹ ಕಬ್ಬನ್ನು ಕಾರ್ಖಾನೆಗೆ ಸರಬರಾಜು ಮಾಡಿದಾಗ ಕಬ್ಬು ನುರಿಸಿದ ಸಕ್ಕರೆ ಕಾರ್ಖಾನೆ. ರೈತರಿಗೆ ಎಫ್‌ಆರ್‌ಪಿ ದರದಲ್ಲಿ 25ರಷ್ಟು ಹಣ ಕಡಿತ ಮಾಡುವ ಪದ್ಧತಿ ತಪ್ಪಿಸಬೇಕು.
ಕಬ್ಬಿನ 12 ತಿಂಗಳ ವಾಯಿದೆ ಒಳಗೆ ಕಟಾವು ಮಾಡಬೇಕು. ಅನೇಕ ವೇಳೆ 14- 15 ತಿಂಗಳು ವಿಳಂಬವಾಗಿ ಕಟಾವು ಮಾಡಿದಾಗ ರೈತರು ಕಬ್ಬಿಗಾಗಿ ಮಾಡಿದ ಬ್ಯಾಂಕಿನ ಸಾಲದ ಹೆಚ್ಚುವರಿ ಬಡ್ಡಿಯನ್ನು ಕಾರ್ಖಾನೆ ಪಾವತಿಸಬೇಕು. ನೂತನ ಕಾರ್ಖಾನೆಗಳ ಆರಂಭಕ್ಕೆ ಯಾವುದೇ 25 ಕಿಲೋಮೀಟರ್ ವ್ಯಾಪ್ತಿ ನಿರ್ಧಾರ ತೆಗೆದು ಹಾಕಬೇಕು. ಹೆಚ್ಚು ಕಾರ್ಖಾನೆಗಳು ಆರಂಭವಾದಾಗ ರೈತರಿಗೆ ಸ್ಪರ್ಧಾತ್ಮಕ ಬೆಲೆ ಸಿಗುತ್ತದೆ ರಂಗರಾಜನ್ ವರದಿಯಲ್ಲಿಯು ಇದೆ ಪ್ರಸ್ತಾಪ ಮಾಡಿದ್ದಾರೆ.
ಕಬ್ಬು ಬೆಳೆಗಾರ ರೈತರಿಗೆ ಕಾರ್ಖಾನೆ ವ್ಯಾಪ್ತಿಗೆ ಮೀಸಲು ಪ್ರದೇಶ ನಿರ್ಧಾರ ಮಾಡಬಾರದು. ರೈತನಿಗೆ ಮುಕ್ತವಾಗಿರಬೇಕು ಅವನಿಗೆ ಇಷ್ಟ ಪಟ್ಟ ಕಾರ್ಖಾನೆ ಜತೆ ಒಪ್ಪಂದ ಮಾಡಿಕೊಳ್ಳಬಹುದು ಎಂಬ ಪರಿಸ್ಕರಣೆ ಮಾಡಿ. ಇನ್ನು ಕಬ್ಬಿನ ಕಟಾವು ಯಂತ್ರದ ಮೂಲಕ ಮಾಡುವ ಕಟಾವಿನ ವೇಸ್ಟೇಜ್ ಶೇಕಡ 2 ಕಿಂತ ಹೆಚ್ಚು ಕಡಿತ ಮಾಡಬಾರದು ಎಂದು ನಿಯಮ ಜಾರಿಗೆ ಬರಲಿ. ಈಗ ಶೇ.7-8ರಷ್ಟು ಕಡಿತ ಮಾಡಿ ಮೋಸ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.
ಕಬ್ಬಿನ ಹಣ ಪಾವತಿ ಮಾಡುವಾಗ ಯಾವುದೇ ಸಹಕಾರ ಬ್ಯಾಂಕ್ ಗಳಾಗಲಿ ಖಾಸಗಿ ಬ್ಯಾಂಕ್ ಗಳಾಗಲಿ ಹೊರತುಪಡಿಸಿ ರಾಷ್ಟ್ರೀಕೃತ ಬ್ಯಾಂಕುಗಳ ಮೂಲಕವೇ ರೈತರಿಗೆ ಹಣ ಪಾವತಿಯಾಗಬೇಕು. ಕೇಂದ್ರ ಹಾಗೂ ರಾಜ್ಯ ಸರ್ಕಾರ ನಿಗದಿ ಮಾಡಿದ ಕಬ್ಬಿನ ಹಣವನ್ನು ಪಾವತಿ ಮಾಡದ ಸಕ್ಕರೆ ಕಾರ್ಖಾನೆ ವಿರುದ್ಧ ಕ್ರಿಮಿನಲ್ ಮೊಕದಮ್ಮೆ ದಾಖಲಿಸುವ ಕಾನೂನು ಜಾರಿಗೆ ಬರಬೇಕು.
ಬ್ಯಾಂಕುಗಳಲ್ಲಿ ಹಾಗೂ ಖಾಸಗಿ ಫೈನಾನ್ಸ್ ಗಳಲ್ಲಿ ರೈತರಿಗೆ ಆಗುತ್ತಿರುವ ಸಮಸ್ಯೆಗಳ ಬಗ್ಗೆ ಚರ್ಚಿಸಲು. ಮೇ 7 ರಂದು ಬೆಂಗಳೂರಿನಲ್ಲಿ ಆರ್‌ಬಿಐ ಮುಖ್ಯಸ್ಥರನ್ನು ಭೇಟಿ ಮಾಡಲಾಗುವುದು. ಇನ್ನು ಏನಾದರೂ ಕಾನೂನು ತಿದ್ದುಪಡಿಯಲ್ಲಿ ಸೇರಿಸಬೇಕಾದರೆ ರಾಜ್ಯದ ಕಬ್ಬು ಬೆಳೆಗಾರ ರೈತರು ವಾಟ್ಸಪ್ ಮೂಲಕ ನನಗೆ ಕಳಿಸಬಹುದು ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಪಿ.ಸೂಮಶೇಖರ, ನೀಲಕಂಠಪ್ಪ, ಪೈ. ವೆಂಕಟೇಶ, ಮಂಜುನಾಥ ಮತ್ತಿತರರು ಇದ್ದರು.
Related









