ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕು ನಿಗಮಗಳ ನೌಕರರನ್ನು ಸರ್ಕಾರಿ ನೌಕರರು ಎಂದು ಘೋಷಿಸಿ ಸರ್ಕಾರಿ ಸೌಲಭ್ಯಗಳನ್ನು ನೀಡಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಕೂಟ ನವೆಂಬರ್ 19 ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಪ್ರಧಾನಮಂತ್ರಿಗಳಿಗೆ ಪತ್ರ ಚಳವಳಿ ಹಮ್ಮಿಕೊಂಡಿದೆ.
ಇದರ ಅಂಗವಾಗಿ ಈಗಾಗಲೇ ಬಿಎಂಟಿಸಿ ಮತ್ತು ಕೆಎಸ್‌ಆರ್‌ಟಿಸಿಯ ಬಹುತೇಕ ಡಿಪೋಗಳಿಗೆ ಭೇಟಿ ನೀಡಿ ನೌಕರರಿಗೆ ಮಾಹಿತಿ ಮುಟ್ಟಿಸಿದ್ದು, ನ.17ರಂದು ಎನ್‌ಡಬ್ಲ್ಯುಕೆಆರ್‌ಟಿಸಿ, ಎನ್‌ಇಕೆಆರ್‌ಟಿಸಿ ನೌಕರರನ್ನು ಭೇಟಿ ಮಾಡಿ ಈ ಚಳವಳಿಯಲ್ಲಿ ಭಾಗವಹಿಸುವಂತೆ ಕರೆ ನೀಡಲಿದ್ದೇವೆ. ಇನ್ನು ನ.19ರಂದು ನಡೆಯುವ ಚಳವಳಿಯಲ್ಲಿ ಮಠಾಧೀಶರು, ಕನ್ನಡಪರ ಸಂಘಟನೆಗಳು ಭಾಗವಹಿಸಲಿವೆ ಎಂದು ಕೂಟದ ಪದಾಧಿಕಾರಿಗಳು ತಿಳಿಸಿದ್ದಾರೆ.
ರಾಜ್ಯದ ಎಲ್ಲಾ ಸರ್ಕಾರಿ ಇಲಾಖೆಗಳ ಮತ್ತು ನಿಗಮ-ಮಂಡಳಿಗಳ ನೌಕರರು ಕೊರೊನಾದ ತುರ್ತುಪರಿಸ್ಥಿತಿ ಸಮಯದಲ್ಲಿ ಸಕಾಲದಲ್ಲಿ ಸರ್ಕಾರಿ ವೇತನದ ಜತೆಗೆ ಸರ್ಕಾರದ ಹಲವು ಸವಲತ್ತುಗಳನ್ನು ಪಡೆಯುತ್ತಿದ್ದಾರೆ. ಆದರೆ ನಮಗೆ ಮಾತ್ರ ಸೌಲಭ್ಯ ನೀಡುವಲ್ಲಿ ಸರ್ಕಾರ ಮಲತಾಯಿ ಧೋರಣೆ ಅನುಸರಿಸುತ್ತಿದೆ. ಹೀಗಾಗಿ ನಾವು ಬೇರೆ ದಾರಿ ಕಾಣದೆ ಪ್ರತಿಭಟನೆಯ ಹಾದಿ ತುಳಿಯಬೇಕಿದೆ ಎಂದು ಹೇಳಿದ್ದಾರೆ.
ಬೆಳಗ್ಗೆ 6 ಗಂಟೆಗೆ ಡಿಪೋಗಳಿಗೆ ಹೋಗಬೇಕು. ರಾತ್ರಿ 8-9ಗಂಟೆಗೆ ಮನೆ ಸೇರಬೇಕು. ಇಂಥ ಪರಿಸ್ಥಿತಿ ನಿರ್ಮಾಣವಾಗಿದ್ದು, ನಾವು ಯಾರಿಗೂ ಹೇಳಿಕೊಳ್ಳಲಾದ ಯಾತನೆಯನ್ನು ಅನುಭವಿಸುತ್ತಿದ್ದೇವೆ. ಹಾಗಾಗಿ ಎಲ್ಲಾ ನೌಕರರು ಒಗ್ಗಟ್ಟಾಗಿ ಹೋರಾಟಕ್ಕೆ ಕೈ ಜೋಡಿಸಿ ನಮ್ಮ ನಮ್ಮ ಹಕ್ಕುಗಳನ್ನು ಪಡೆಯೋಣ ಎಂದು ಒಕ್ಕೂಟ ಕರೆ ನೀಡಿದೆ.
ಯಾವತ್ತು ಏನು ಹೋರಾಟ?
ನವಂಬರ್ 19ರಂದು ಫ್ರೀಡಂ ಪಾರ್ಕ್‌ನಲ್ಲಿ ಪ್ರಧಾನಮಂತ್ರಿಗಳಿಗೆ ಪತ್ರ ಚಳುವಳಿ
ನಮ್ಮ ಹೋರಾಟಕ್ಕೆ ಸ್ಪಂದಿಸದಿದ್ದರೆ ಡಿಸೆಂಬರ್ 1ರಿಂದ ಅರ್ನಿದಿಷ್ಟಾವಧಿವರೆಗೆ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳುತ್ತಿದ್ದು ಈ ಹೋರಾಟದಲ್ಲಿ ಪ್ರತಿಯೊಬ್ಬ ನೌಕರರು ಮತ್ತು ಕುಟುಂಬದವರು ಭಾಗವಹಿಸಬೇಕು ಎಂದು ಒಕ್ಕೂಟ ಮನವಿ ಮಾಡಿದೆ.