ಬೆಂಗಳೂರು: ನಾನು ಎಂಪಿ ಚುನಾವಣೆಗೆ ಸ್ಪರ್ಧೆ ಮಾಡಿದಾಗಿನಿಂದಲೂ ಇಂತಹ ಮಾತು ಎದುರಿಸುತ್ತಿದ್ದೇನೆ. ಅಂಬರೀಷ್ ಇದ್ದಾಗ ಈ ರೀತಿ ಮಾತನಾಡಲು ಯಾರಿಗೂ ಧೈರ್ಯವಿರಲಿಲ್ಲ. ಈಗ ಎಲ್ಲರೂ ಮಾತನಾಡುತ್ತಿದ್ದಾರೆ ಎಂದು ಸಂಸದ ಪ್ರತಾಪ್ಸಿಂಹ ಅವರ ಪ್ರಶ್ನೆಗೆ ಸುಮಲತಾ ಅಂಬರೀಷ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತಮ್ಮ ಅಭಿವೃದ್ಧಿ ಕಾರ್ಯಗಳ ಬಗ್ಗೆ ಮೈಸೂರು ಬಿಜೆಪಿಯ ಸಂಸದ ಪ್ರತಾಪ್ ಸಿಂಹ ಬೇರೆಯವರನ್ನು ಪ್ರಶ್ನಿಸುವ ಮೊದಲು ಅವರ ಕ್ಷೇತ್ರದಲ್ಲಿನ ಅಭಿವೃದ್ಧಿ ಬಗ್ಗೆ ಯೋಚಿಸಿದರೆ ಅಲ್ಲಿನ ಜನರಿಗೆ ಒಳ್ಳೆಯದಾಗುತ್ತಿದೆ. ನಮ್ಮ ಜನರ ಬಗ್ಗೆ ನಾನು ನೋಡಿಕೊಳ್ಳುತ್ತೇನೆ ಎಂದು ಮಂಡ್ಯ ಸಂಸದೆ ಕಿರಿಕಾರಿದರು.
ಸಂಸದರಾಗಿ ಮತ್ತೊಬ್ಬ ಸಂಸದರ ಬಗ್ಗೆ ಹೇಳಿಕೆ ನೀಡುವುದು ಸರಿಯಲ್ಲ. ಸಂಸದರ ಭಾಷೆಯನ್ನು ಅವರು ಬಳಸಿದ್ದರೆ ಪ್ರತಿಕ್ರಿಯೆ ನೀಡುತ್ತಿದ್ದೆ. ಒಬ್ಬ ಪೇಟೆ ರೌಡಿ ತರ ಮಾತನಾಡುವುದಾದರೆ ನನ್ನ ರಿಯಾಕ್ಷನ್ ಗೆ ಅವರಿಗೆ ಅರ್ಹತೆ ಇಲ್ಲವೆಂದು ಕುಟುಕಿದರು.
ನನ್ನ ಕ್ಷೇತ್ರದ ಜನರಿಗೆ ನಾನು ಉತ್ತರ ಕೊಡಬೇಕೆ ಹೊರತು ಅವನಿಗಲ್ಲ. ನನ್ನನ್ನು ಪ್ರಶ್ನಿಸಲು ಅವನ್ಯಾರು..? ಪಕ್ಕದ ಕ್ಷೇತ್ರದ ಎಂಪಿಗೆ ನನ್ನ ಕ್ಷೇತ್ರದ ಬಗ್ಗೆ ಮಾತನಾಡುವ ಹಕ್ಕಿಲ್ಲ. ಅಂಬರೀಷ್ ಅಭಿಮಾನಿಗಳು, ನನ್ನ ಮತದಾರರಿಂದ ಈಗಾಗಲೇ ಯಾವ ರೀತಿ ಪ್ರತಿಕ್ರಿಯೆ ಸಿಕ್ಕಿದೆ ಎನ್ನುವುದು ಗೊತ್ತಿದೆ ಎಂದು ಹೇಳಿದರು.
ಮೊದಲು ಕೊಡಗಿನಲ್ಲಿ ರಸ್ತೆಗಳು ಕೊಚ್ಚಿಕೊಂಡು ಹೋಗಿವೆ. ಕೊಡಗಿನ ಜನರು ಸಮಸ್ಯೆಗಳ ಬಗ್ಗೆ ನಮಗೂ ಬಂದು ಹೇಳುತ್ತಾರೆ. ಜನರ ಬಳಿ ರಾಜಕಾರಣಿ ಹೋದಾಗ ಅವರು ಸಮಸ್ಯೆ ಹೇಳುವುದು ಸಾಮಾನ್ಯ. ಆದರೆ ಪ್ರತಾಪ್ ಸಿಂಹ ಅವರ ಈ ರೀತಿಯ ಮಾತುಗಳು ತುಂಬಾ ಬೇಜವಾಬ್ದಾರಿ. ಎರಡು ಬಾರಿ ಸಂಸದರಾದವರು ಅದನ್ನು ಅರಿತು ನಡೆದುಕೊಳ್ಳಬೇಕು ಎಂದು ಹೇಳಿದರು.