ಮಂಡ್ಯ: ರಾಜಕಾರಣಕ್ಕೆ ಬಂದ ದಿನದಿಂದ ಮಂಡ್ಯ ಜನರ ಜತೆ ನನ್ನ ಒಡನಾಟವಿದೆ. ಜಿಲ್ಲೆಯ ಜನರ ಬಗ್ಗೆ ಬೇಸರವಿಲ್ಲ. ಇವರು ತುಂಬಾ ಮುಗ್ಧರು, ಎಲ್ಲರನ್ನೂ ನಂಬುತ್ತಾರೆ ಎಂದು ಪುತ್ರ ನಿಖಿಲ್ ಸೋಲಿನ ಬಗ್ಗೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಬೇಸರ ವ್ಯಕ್ತಪಡಿಸಿದ್ದಾರೆ.
ಜಿಲ್ಲೆಯ ಮದ್ದೂರು ತಾಲೂಕಿನ ಬ್ಯಾಡರಹಳ್ಳಿಯ ಕಾರ್ಯಕ್ರಮವೊಂದಲ್ಲಿ ಮಾತನಾಡಿದ ಅವರು, ಜಿಲ್ಲೆಯ ಜನರು ಮುಗ್ಧರು, ಹಾಗಾಗಿ ಎಲ್ಲರನ್ನು ಬಹುಬೇಗನೆ ನಂಬುತ್ತಾರೆ. ಲೋಕಸಭೆ ಚುನಾವಣೆಗೆ ಹಲವರ ಒತ್ತಾಯದ ಮೇರೆಗೆ ಮಗನನ್ನು ನಿಲ್ಲಿಸಿದೆ. ಅದರಂತೆ ಕಾರ್ಯಕರ್ತರು ತುಂಬಾ ಕೆಲಸ ಮಾಡಿದರು. ಆದರೂ ಸೋಲಬೇಕಾಯಿತು. ಈ ಹಿಂದೆ ಗೆದ್ದಾಗ ಐದು ಕಾಲು ಲಕ್ಷ ಮತ ನೀಡಿದ್ದ ಜನರು ಸೋತಾಗ ಐದು ಮುಕ್ಕಾಲು ಲಕ್ಷ ಮತ ನೀಡಿದರು ಎಂದು ಹೇಳಿದರು.
ಜೆಡಿಎಸ್‌ನಲ್ಲೇ ಇದ್ದು ಈಗ ಬೇರೆ ಪಕ್ಷಕ್ಕೆ ಹೋಗಿರುವವರು ಸೇರಿ ಇತರರು ಸೋಲಿಸಲೇಬೇಕು ಎಂದು ಮುಗಿಸಿದರು. ಆದ್ರೆ ನನಗೆ ಮಂಡ್ಯ ಜಿಲ್ಲೆಯ ಜನರ ಬಗ್ಗೆ ಬೇಸರವಿಲ್ಲ. ರಾಜಕಾರಣಕ್ಕೆ ಬಂದ ದಿನದಿಂದ ಮಂಡ್ಯ ಜನರ ಜತೆ ನನ್ನ ಒಡನಾಟವಿದೆ. ಜಿಲ್ಲೆಯ ಜನರು ತುಂಬಾ ಮುಗ್ಧರು, ಎಲ್ಲರನ್ನು ನಂಬುತ್ತಾರೆ. ದೇವೇಗೌಡರು ಮತ್ತು ನಮ್ಮನ್ನು ಬೆಳೆಸಿದ್ದೇ ಮಂಡ್ಯದ ಜನತೆ ಎಂದರು.
ನಾನು ರಾಜಕೀಯದಿಂದ ನಿವೃತ್ತಿಯಾಗಬೇಕು ಎಂದುಕೊಂಡಿದ್ದೆ. ಜನರು ತೋರಿಸುವ ಪ್ರೀತಿ ನೋಡಿದಾಗ ನಾನು ಅನ್ಯಾಯ ಮಾಡುತ್ತಿದ್ದೇನೆ ಅನ್ನಿಸಿತು. ನನಗೆ ಈ ವ್ಯವಸ್ಥೆಯಿಂದ ಆದ ಬೇಸರದಿಂದ ಹೊರಗೆ ಹೋದರೆ ಜನರಿಗೆ ಅನ್ಯಾಯ ಮಾಡಿದ ಹಾಗೆ ಆಗುತ್ತೆ ಎಂಬ ಕಾರಣಕ್ಕೆ ನಾನು ರಾಜಕೀಯದಲ್ಲಿ ಮುಂದುವರಿದಿದ್ದೇನೆ. ವೈಯುಕ್ತಿಕವಾಗಿ ರಾಜಕೀಯದಲ್ಲಿ ಮುಂದುವರಿಯುವ ಆಸೆ ಇಲ್ಲ ಎಂದು ಹೇಳಿದರು.