ರಾಜ್ಯ ರಾಜಕೀಯ ವಿದ್ಯಮಾನ ಕುರಿತು ನಾಳೆ ಮಾತನಾಡುತ್ತೇನೆ: ಸಿಎಂ ಒಂದ್ಸಾಲ್ ಹೇಳಿಕೆ
ಸಿದ್ದರಾಮಯ್ಯನವರು ನಾಳೆ ಬೆಳಗ್ಗೆ ತಮ್ಮ ಆಪ್ತ ಸಚಿವರು, ಶಾಸಕರ ಜತೆ ಬೆಳಗಿನ ಉಪಾಹಾರ ಸಭೆ ನಡೆಸಲಿದ್ದಾರೆ. ಆ ಸಭೆಯ ಬಳಿಕ ರಾಜಭವನಕ್ಕೆ ತೆರಳಿ ರಾಜೀನಾಮೆ ನೀಡಲಿದ್ದಾರೆ. ರಾಜೀನಾಮೆ ನೀಡಿದ ಬಳಿಕ ಸುದ್ದಿಗೋಷ್ಠಿ ನಡೆಸಿ ಎಲ್ಲ ಪ್ರಶ್ನೆಗಳಿಗೆ ಉತ್ತರಿಸಲಿದ್ದಾರೆ.

ಬೆಂಗಳೂರು: ಕರ್‌ನಾಟಕ ರಾಜ್ಯ ರಾಜಕೀಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಹಾಗೂ ಹೈಕಮಾಂಡ್ ನಿರ್ಧಾರಗಳ ಕುರಿತು ಭಾರೀ ಚರ್ಚೆ ನಡೆಯುತ್ತಿರುವ ಈ ಹೊತ್ತಿನಲ್ಲೇ ಸಿಎಂ ಸಿದ್ದರಾಮಯ್ಯ ಅವರು ರಾಜಕೀಯ ಪ್ರಶ್ನೆಗಳು ಏನೆ ಇದ್ದರೂ ಅವುಗಳಿಗೆ ನಾಳೆ ಉತ್ತರ ಕೊಡುತ್ತೇನೆ ಎಂದು ಒಂದು ಸಾಲಿನ ಹೇಳಿಕೆ ಕೊಟ್ಟಿದ್ದಾರೆ.
ಇಂದು ಮಾಜಿ ಪ್ರಧಾನಿ ಜವಹರಲಾಲ್ ನೆಹರು ಅವರ 62ನೇ ಸ್ಮರಣಾರ್ಥ ವಿಧಾನಸೌಧದ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ನೆಹರು ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಗೌರವ ಸಮರ್ಪಿಸಿದ ಬಳಿಕ ಮಾತನಾಡಿದರು.
ಈ ವೇಳೆ ನೆಹರು ಅವರು ದೇಶಕ್ಕೆ ನೀಡಿದ ಕೊಡುಗೆಗಳು ಅವರ ಸಾಧನೆಗಳನ್ನು ಶ್ಲಾಘಿಸಿದರು.
ನಂತರ ಮಾಧ್ಯಮ ಪ್ರತಿನಿಧಿಗಳು ರಾಜ್ಯ ರಾಜಕೀಯದ ಪ್ರಸ್ತುತ ಬೆಳವಣಿಗೆಗಳು, ತಾವು ದೆಹಲಿ ಪ್ರವಾಸ ಮುಗಿಸಿ ಬಂದ ಬಗ್ಗೆ ಪ್ರಶ್ನಿಸಿದಾಗ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. ಬದಲಿಗೆ ರಾಜಕೀಯ ವಿದ್ಯಮಾನಗಳ ಕುರಿತು ಕೇಳಿದಾಗ, “ನಾಳೆ ಮಾತನಾಡುತ್ತೇನೆ, ಏನೇ ಇದ್ದರೂ ನಾಳೆಯೇ ಮಾತನಾಡುತ್ತೇನೆ” ಎಂದು ಕೇವಲ ಒಂದೇ ಸಾಲಿನಲ್ಲಿ ಉತ್ತರಿಸಿ ಹೊರಟು ಹೋದರು.
ಸಾಮಾನ್ಯವಾಗಿ ಸಿದ್ದರಾಮಯ್ಯ ಎಂದರೆ ಬಹಳ ಗಟ್ಟಿಯಾಗಿ ಹೇಳಿಕೆ ನೀಡುವ, ಮಾಧ್ಯಮಗಳು ಅಡ್ಡ ಪ್ರಶ್ನೆ ಹಾಕಿದರೆ ಏನಯ್ಯ ಎಂದು ಪತ್ರಕರ್ತರಿಗೆ ಮರು ಪ್ರಶ್ನೆ ಹಾಕುವ ವ್ಯಕ್ತಿ. ಆದರೆ ಇಂದು ಅವರಲ್ಲಿ ಆ ಗಡಸುತನ ಕಾಣಲಿಲ್ಲ ಬದಲಿಗೆ ಬೇಸರದಲ್ಲಿ ಇರುವುದು ಎದ್ದು ಕಾಣಿಸುತ್ತಿತ್ತು.
ಇನ್ನು ಇಂದಿನ ಕಾರ್ಯಕ್ರಮದ ಬಳಿಕ ಇಂದು ಸಿಎಂ ಅವರಿಗೆ ಯಾವುದೇ ಸರ್ಕಾರಿ ಕಾರ್ಯಕ್ರಮ ನಿಗದಿಯಾಗಿಲ್ಲ. ಹೀಗಾಗಿ ಇಂದಿನ ಸರ್ಕಾರಿ ಕಾರ್ಯಕ್ರಮವನ್ನು ಮುಗಿಸಿದ ಮುಖ್ಯಮಂತ್ರಿಗಳು ವಿಧಾನಸೌಧದಿಂದ ನೇರವಾಗಿ ತಮ್ಮ ಅಧಿಕೃತ ಸರ್ಕಾರಿ ನಿವಾಸ ಕಾವೇರಿಗೆ ವಾಪಸ್ಸಾದರು.
ಸಿದ್ದರಾಮಯ್ಯನವರು ನಾಳೆ ಮೇ 28ರ ಬೆಳಗ್ಗೆ ತಮ್ಮ ಆಪ್ತ ಸಚಿವರು, ಶಾಸಕರ ಜತೆ ಬೆಳಗಿನ ಉಪಾಹಾರ ಸಭೆ ನಡೆಸಲಿದ್ದಾರೆ. ಆ ಸಭೆಯ ಬಳಿಕ ರಾಜಭವನಕ್ಕೆ ತೆರಳಿ ರಾಜೀನಾಮೆ ನೀಡಲಿದ್ದಾರೆ. ರಾಜೀನಾಮೆ ನೀಡಿದ ಬಳಿಕ ಸುದ್ದಿಗೋಷ್ಠಿ ನಡೆಸಿ ಎಲ್ಲ ಪ್ರಶ್ನೆಗಳಿಗೆ ಉತ್ತರಿಸಲಿದ್ದಾರೆ.
Related









