ಕಿರುಗಾವಲು: ಪತ್ನಿ ಮುಂದೆ ಶ್ರೀಮಂತ ಎಂದು ತೋರಿಸಿಕೊಳ್ಳಲು ಸರಗಳ್ಳತನ- ಈತ ಸೇರಿ ನಾಲ್ವರ ಬಂಧನ
ಸಾಮಾನ್ಯವಾಗಿ ಗಂಡಂದಿರು ತಮ್ಮ ಹೆಂಡತಿಯರಿಗೆ ಇಷ್ಟವಾದ ಉಡುಗೊರೆ ನೀಡಲು ಹರಸಾಹಸ ಪಡುತ್ತಾರೆ. ಆದರೆ, ಜಿಲ್ಲೆಯ ಮಳವಳ್ಳಿಯ ಈ ಪತಿರಾಯ ಮಾಡಿದ ಕೆಲಸ ಮಾತ್ರ ಇಡೀ ಸಮಾಜವೇ ಕೆಟ್ಟದೃಷ್ಟಿಯಿಂದ ನೋಡುವಂತಿದೆ. ಪತ್ನಿ ಮುಂದೆ ತಾನು ದೊಡ್ಡ ಶ್ರೀಮಂತ ಎಂದು ತೋರಿಸಿಕೊಳ್ಳಲು ಕಳ್ಳತನದ ಹಾದಿ ಹಿಡಿದ ಈತ ಈಗ ಜೈಲು ಕಂಬಿ ಎಣಿಡುತ್ತಿದ್ದಾನೆ. ಇವನಷ್ಟೇ ಅಲ್ಲ ಮೂವರು ಮಂದಿ ಈತನೊಂದಿಗೆ ಸೇರಿ ಮುದ್ದೆ ಮುರಿಯುತ್ತಿದ್ದಾರೆ.

ಮಂಡ್ಯ: ಪತ್ನಿ ಎದುರು ಶ್ರೀಮಂತ ಎಂದು ತೋರಿಸಿಕೊಳ್ಳಲು ಸರಗಳ್ಳತನ ನಡೆಸುತ್ತಿದ್ದ ಚಾಲಕ ಸೇರಿ ನಾಲ್ವರನ್ನು ಬಂಧಿಸಿದ ಜಿಲ್ಲೆಯ ಕಿರುಗಾವಲು ಠಾಣೆ ಪೊಲೀಸರು, ಆರೋಪಿಗಳಿಂದ 475.5 ಗ್ರಾಂ ಚಿನ್ನಾಭರಣ ಮತ್ತು ಕೃತ್ಯಕ್ಕೆ ಬಳಸಿದ್ದ ಎರಡು ಬೈಕ್ಗಳನ್ನು ವಶಪಡಿಸಿಕೊಂಡಿದ್ದಾರೆ.
ಸಾಮಾನ್ಯವಾಗಿ ಗಂಡಂದಿರು ತಮ್ಮ ಹೆಂಡತಿಯರಿಗೆ ಇಷ್ಟವಾದ ಉಡುಗೊರೆ ನೀಡಲು ಹರಸಾಹಸ ಪಡುತ್ತಾರೆ. ಆದರೆ, ಜಿಲ್ಲೆಯ ಮಳವಳ್ಳಿಯ ಈ ಪತಿರಾಯ ಮಾಡಿದ ಕೆಲಸ ಮಾತ್ರ ಇಡೀ ಸಮಾಜವೇ ಕೆಟ್ಟದೃಷ್ಟಿಯಿಂದ ನೋಡುವಂತಿದೆ. ಪತ್ನಿ ಮುಂದೆ ತಾನು ದೊಡ್ಡ ಶ್ರೀಮಂತ ಎಂದು ತೋರಿಸಿಕೊಳ್ಳಲು ಕಳ್ಳತನದ ಹಾದಿ ಹಿಡಿದ ಈತ ಈಗ ಜೈಲು ಕಂಬಿ ಎಣಿಡುತ್ತಿದ್ದಾನೆ. ಇವನಷ್ಟೇ ಅಲ್ಲ ಮೂವರು ಮಂದಿ ಈತನೊಂದಿಗೆ ಸೇರಿ ಮುದ್ದೆ ಮುರಿಯುತ್ತಿದ್ದಾರೆ.
ಮಳವಳ್ಳಿ ತಾಲೂಕಿನ ತಳಗವಾದಿ ಗ್ರಾಮದವರಾದ ಚಾಲಕ ಗುರುಪ್ರಸಾದ್ (36), ಬಾರ್ ಸಪ್ಲೆಯರ್ ನಂಜೇಗೌಡ ಟಿ.ಎನ್. (19), ರೋಹಿತ್ ಟಿ.ಪಿ. (20) ಹಾಗೂ ಆಲಭುಜನಹಳ್ಳಿಯ ಮಾದೇಶ ಎಸ್. (20) ಬಂಧಿತ ಆರೋಪಿಗಳು.
ಈ ಸಂಬಂಧ ಸುದ್ದಿಗೋಷ್ಠಿಯಲ್ಲಿ ಮಂಡ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿ.ಜೆ. ಶೋಭಾರಾಣಿ ಮಾತನಾಡಿ, ಆರೋಪಿಗಳಿಂದ ಒಟ್ಟು 70.37 ಲಕ್ಷ ಮೌಲ್ಯದ ಸಾಮಗ್ರಿ ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಿದಾಗ, ವಿವಿಧ ಠಾಣೆಗಳಿಗೆ ಸಂಬಂಧಿಸಿ 16 ಪ್ರಕರಣಗಳು ಬೆಳಕಿಗೆ ಬಂದಿವೆ ಎಂದು ಮಾಹಿತಿ ನೀಡಿದರು.

ಕಿರುಗಾವಲು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇತ್ತೀಚಿನ ದಿನಗಳಲ್ಲಿ ಮಹಿಳೆಯರ ಕುತ್ತಿಗೆಯ ಸರ ಕಳ್ಳತನ ಪ್ರಕರಣಗಳು ಹೆಚ್ಚಾಗಿದ್ದವು. ಜಮೀನಿನ ಕಡೆ ಒಂಟಿಯಾಗಿ ಹೋಗುತ್ತಿದ್ದ ಮಹಿಳೆಯರೇ ಇವರ ಟಾರ್ಗೆಟ್ ಆಗಿದ್ದರು. ಹೀಗಾಗಿ ನಾವು ವಿಶೇಷ ತಂಡ ರಚಿಸಿ ತನಿಖೆ ನಡೆಸಿದಾಗ ಹೊರಬಿದ್ದ ಸತ್ಯ ಮಾತ್ರ ಅಚ್ಚರಿಯಾಗಿತ್ತು.
ಮಳವಳ್ಳಿ ತಾಲೂಕಿನ ತಳಗವಾದಿ ಗ್ರಾಮದ ಚಾಲಕ ಗುರುಪ್ರಸಾದ್ ಟಿ.ಎಚ್. ಸರಗಳ್ಳತನ ತಂಡದ ಪ್ರಮುಖನಾಗಿದ್ದು, ಈತ ತಾನು ಸಿರಿವಂತ ಎಂದು ಬಿಂಬಿಸಿಕೊಳ್ಳಲು 2024ರವರೆಗೆ ಸರಗಳ್ಳತನ ಮಾಡುತ್ತಿದ್ದ. 2024ರಲ್ಲಿ ಪತ್ನಿ ಈತನೊಂದಿಗೆ ಜಗಳ ಮಾಡಿಕೊಂಡು ತವರು ಮನೆ ಸೇರಿದ್ದಳು. ಅಂದಿನಿಂದ ಕಳ್ಳತನ ಮಾಡುವುದನ್ನು ನಿಲ್ಲಿಸಿದ್ದ.
ನಂತರ 2025ರಲ್ಲಿ ಆತನ ಪತ್ನಿಯ ಆತ್ಮಹತ್ಯೆ ಪ್ರಕರಣದಲ್ಲಿ ಬಂಧಿತನಾಗಿದ್ದ. ಜೈಲಿನಿಂದ ಬಿಡುಗಡೆಯಾದ ನಂತರವೂ ಇತರರೊಂದಿಗೆ ಸೇರಿ ಅಪರಾಧ ಕೃತ್ಯ ಎಸಗುತ್ತಿದ್ದ ಎಂದು ತಿಳಿಸಿದರು.
ಎಫ್ಐಆರ್ ದಾಖಲು: ಅಣಸಾಲೆ ಗ್ರಾಮದ ಪುಟ್ಟಮ್ಮ ಕೋಂ ಮಾದಯ್ಯ ಎಂಬುವವರು ಚಿಕ್ಕಮುಲಗೂಡು-ರಾಮನಾಥ ಮೋಳೆ ರಸ್ತೆಯಲ್ಲಿ ಮಾರ್ಚ್ 30ರಂದು ಮಧ್ಯಾಹ್ನ 12.30ರಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಬೈಕಿನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು 27 ಗ್ರಾಂ ಚಿನ್ನದ ಸರವನ್ನು ಕಿತ್ತುಕೊಂಡು ಹೋಗಿದ್ದರು. ಕಿರುಗಾವಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು ಎಂದು ಮಾಹಿತಿ ನೀಡಿದರು.
ತಂಡ ರಚನೆ: ಹಲಗೂರು ಸರ್ಕಲ್ ಇನ್ಸ್ಪೆಕ್ಟರ್ ಬಿ.ಎಸ್. ಶ್ರೀಧರ್ ನೇತೃತ್ವದಲ್ಲಿ ಪಿಎಸ್ಐ ರವಿಕುಮಾರ್ ಡಿ., ಪ್ರಕಾಶ್ ಬಿ.ವಿ. ಮತ್ತು ಇತರ ಸಿಬ್ಬಂದಿಯ ತಂಡ ರಚಿಸಲಾಗಿತ್ತು. ಆರೋಪಿಗಳನ್ನು ಪತ್ತೆ ಮಾಡಿ, ವಿಚಾರಣೆ ನಡೆಸಿದಾಗ ಅಪರಾಧ ಕೃತ್ಯಗಳ ಬಗ್ಗೆ ಬಾಯಿ ಬಿಟ್ಟಿದ್ದಾರೆ.
ಬಸರಾಳು, ಕೆರೆಗೋಡು, ಮಳವಳ್ಳಿ ಗ್ರಾಮಾಂತರ, ಅರಕೆರೆ, ಕೊಪ್ಪ, ಮಂಡ್ಯ ಗ್ರಾಮಾಂತರ, ಶ್ರೀರಂಗಪಟ್ಟಣ, ಬನ್ನೂರು ಮತ್ತು ಕಿರುಗಾವಲು ಪೊಲೀಸ್ ಠಾಣೆಗಳಲ್ಲಿ 2022ರಲ್ಲಿ 2 ಪ್ರಕರಣ, 2023ರಲ್ಲಿ 8 ಪ್ರಕರಣ, 2024ರಲ್ಲಿ 2 ಪ್ರಕರಣ ಹಾಗೂ ಪ್ರಸಕ್ತ ವರ್ಷ 4 ಪ್ರಕರಣಗಳಲ್ಲಿ ಭಾಗಿಯಾಗಿರುವುದು ಗೊತ್ತಾಗಿದೆ ಎಂದು ಎಸ್ಪಿ ಮಾಹಿತಿ ನೀಡಿದರು.
ಪೊಲೀಸರ ಭರ್ಜರಿ ಬೇಟೆ: ವಿಶೇಷ ತಂಡದ ಕಾರ್ಯಾಚರಣೆಯ ಫಲವಾಗಿ ಗುರು ಪ್ರಸಾದ್ ಸೇರಿದಂತೆ ರೋಹಿತ್, ನಂಜೇಗೌಡ ಹಾಗೂ ಮಾದೇಶ ಎಂಬುವವರನ್ನು ಬಂಧಿಸಲಾಗಿದೆ. ಆರೋಪಿಗಳಿಂದ ಪೊಲೀಸರು ಬರೋಬ್ಬರಿ 70 ಲಕ್ಷ ರೂಪಾಯಿ ಮೌಲ್ಯದ 475 ಗ್ರಾಂ ಚಿನ್ನಾಭರಣ ಮತ್ತು ಎರಡು ಬೈಕ್ಗಳನ್ನು ವಶಪಡಿಸಿಕೊಂಡಿದ್ದಾರೆ.
ಪತ್ನಿ ಮುಂದೆ ಸ್ಟೇಟಸ್ ಮೈಂಟೇನ್ ಮಾಡಲು ಹೋಗಿ, ಇಂದು ಕಂಬಿ ಎಣಿಸುವ ಪರಿಸ್ಥಿತಿ ಬಂದಿದೆ. ಇಂತಹ ವ್ಯಕ್ತಿಗಳು ಯುವಕರನ್ನೂ ಹಾಳು ಮಾಡುತ್ತಿದ್ದಾರೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಯಾವುದೇ ಅಡ್ಡದಾರಿ ಹಿಡಿದರೂ ಕಾನೂನಿನ ಕಣ್ಣಿನಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂಬುದಕ್ಕೆ ಈ ಪ್ರಕರಣವೇ ಸಾಕ್ಷಿ.
Related









