ಬೆಂಗಳೂರು: ಕೊರೊನಾ ಬಂದಾಗಿನಿಂದ ನಷ್ಟದಲ್ಲಿರುವ ಬಿಎಂಟಿಸಿ ಈಗ ಚೇತರಿಕೆಯತ್ತ ಸಾಗುತ್ತಿದ್ದು, ನಿತ್ಯ ಎರಡು ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಬರುತ್ತಿದೆ.
ಕೋವಿಡ್ ಆರಂಭದಲ್ಲಿ ಬಸ್ ಹತ್ತಲು ಹಿಂದೇಟು ಹಾಕುತ್ತಿದ್ದ ಜನತೆ ಇದೀಗ ಬಸ್ನತ್ತ ಮುಖ ಮಾಡುತ್ತಿದ್ದಾರೆ. ಕಾಲೇಜು ಆರಂಭವಾಗಿರುವ ಪರಿಣಾಮ ರಾಜಧಾನಿ ಬೆಂಗಳೂರಿನಲ್ಲಿ ಮತ್ತೆ ಟ್ರಾಕ್ ಗೆ ಬಿಎಂಟಿಸಿ ಸಾರಿಗೆ ಬಸ್ ಮರಳುತ್ತಿದೆ.
ಸದ್ಯ ಬಸ್ ಸಂಪೂರ್ಣವಾಗಿ ತುಂಬದೇ ಹೋದರೂ ಸಾಮಾಜಿಕ ಅಂತರ ಕಾಪಾಡಿಕೊಂಡು ಫುಲ್ ಆಗಿ ಇರುವುದು ಕಂಡುಬರುತ್ತಿದೆ. ಕೊರೊನಾ ಆರಂಭದಲ್ಲಿ ರಾಜಧಾನಿಯಲ್ಲಿ ಬಸ್ ಗಳು ಪ್ರಯಾಣಿಕರಿಲ್ಲದೇ ಖಾಲಿ ಖಾಲಿ ಹೊಡೆಯುತ್ತಿದ್ದವು. ಆಗ ಬಿಎಂಟಿಸಿ ನಿತ್ಯ ಕಲೆಕ್ಷನ್ ಒಂದು ಕೋಟಿ ರೂ.ಗಳು ಸಹ ದಾಟುತ್ತಿರಲಿಲ್ಲ. ಆದರೀಗ ಅದರ ಕಲೆಕ್ಷನ್ ದುಪ್ಪಟ್ಟು ಆಗಿದೆ.
ಪ್ರತಿದಿನ ಎರಡು ಕೋಟಿ ರೂ.ಗೂ ಹೆಚ್ಚು ಕಲೆಕ್ಷನ್ ಆಗ್ತಿದ್ದು, ಐದು ಸಾವಿರ ಬಸ್ ಗಳಲ್ಲಿ 19 ಲಕ್ಷ ಪ್ರಯಾಣಿಕರು ನಿತ್ಯ ಬಿಎಂಟಿಸಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದಾರೆ. ದಸರಾ ಹಬ್ಬದ ಸಂದರ್ಭದಲ್ಲಿ ಇದರ ಸಂಖ್ಯೆ ಹೆಚ್ಚಿದ್ದು, ನಿತ್ಯ ಎರಡೂವರೆ ಕೋಟಿ ರೂ. ಕಲೆಕ್ಷನ್ ಆಗಿದೆ. ದೀಪಾವಳಿ ಹಬ್ಬ ಸಾಲು ಸಾಲು ರಜೆ ಇರುವುದರಿಂದ ಪ್ರಯಾಣಿಕರ ಸಂಖ್ಯೆ ಸ್ವಲ್ಪ ಕಡಿಮೆಯಿದ್ದು, ಎರಡು ಕೋಟಿ ಕಲೆಕ್ಷನ್ ಆಗಿದೆ ಎಂದು ಬಿಎಂಟಿಸಿ ಸಾರ್ವಜನಿಕ ಸಂಪರ್ಕಾಧಿಕಾರಿ ಅಜಿತ್ ಮಾಹಿತಿ ನೀಡಿದ್ದಾರೆ.
ಕೊರೊನಾ ಬಗ್ಗೆ ಜನಜಾಗೃತಿ ಮೂಡಿಸಿದ ಪರಿಣಾಮ ಕೋವಿಡ್ ಆತಂಕ ಕಡಿಮೆಯಾಗಿರುವುದು, ವಿವಿಧ ಉದ್ಯಮಗಳು ಚೇತರಿಕೆಯಾಗಿರುವುದು ಹಾಗೂ ಕಾಲೇಜು ಆರಂಭವಾಗಿರುವುದರಿಂದ ಬಿಎಂಟಿಸಿ ಬಸ್ ನಲ್ಲಿ ಪ್ರಯಾಣಿಕರ ಸಂಖ್ಯೆಯಲ್ಲಿ ಏರಿಕೆ ಕಂಡು ಬಂದಿದೆ.
ಕೊರೊನಾ ಬರುವುದಕ್ಕೂ ಮೊದಲು 6100 ಬಸ್ ಗಳಲ್ಲಿ ಮೂವತ್ತು ಲಕ್ಷಕ್ಕೂ ಹೆಚ್ಚು ಜನ ಪ್ರಯಾಣ ಮಾಡುತ್ತಿದ್ದರು. ಮೂರುವರೆ ಕೋಟಿ ರೂ. ಪ್ರತಿದಿನ ಸಂಗ್ರಹ ಆಗುತ್ತಿತ್ತು. ಆಸರೆ ಪ್ರಸ್ತುತ 2.5 ಕೋಟಿ ರೂ. ಕಲೆಕ್ಷನ್ ಆಗುತ್ತಿದೆ.