ಬೆಂಗಳೂರು: ಕರ್ನಾಟಕದ 31ನೇ ಜಿಲ್ಲೆಯಾಗಿ ವಿಜಯನಗರ ಅಸ್ತಿತ್ವಕ್ಕೆ ಬರಲಿದೆ. ಇದರ ಜತೆಗೆ ಶಿವಮೊಗ್ಗದಲ್ಲಿ ನಿರ್ಮಾಣವಾಗುತ್ತಿರುವ ವಿಮಾನ ನಿಲ್ದಾಣಕ್ಕೆ ಈ ಮೊದಲು ನಿಗದಿಯಾಗಿದ್ದಕ್ಕಿಂತ 160 ಕೋಟಿ ರೂ.ಗಳನ್ನು ಹೆಚ್ಚುವರಿಯಾಗಿ ಘೋಷಿಸಲಾಗಿದೆ ಎಂದು ಕಾನೂನು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ. ಮಾಧುಸ್ವಾಮಿ ತಿಳಿಸಿದ್ದಾರೆ.
ಸಚಿವ ಸಂಪುಟ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ವಿಜಯನಗರವನ್ನು ಬಳ್ಳಾರಿಯಿಂದ ವಿಭಜಿಸಿ, ಹೊಸ ಜಿಲ್ಲೆಯನ್ನಾಗಿ ಘೋಷಣೆ ಮಾಡಬೇಕೆಂಬ ಸಚಿವ ಆನಂದ್ ಸಿಂಗ್ ಸೇರಿ ನಾಗರಿಕರ ಬಹುಕಾಲದ ಬೇಡಿಕೆ ಈಡೇರಿದಂತ್ತಾಗಿದೆ. ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಅಧಿಕೃತ ಅನುಮೋದನೆ ಸಿಕ್ಕಿದ್ದು, ಈ ಮೂಲಕ ನೂತನ ಜಿಲ್ಲೆಯಾದ ವಿಜಯನಗರಕ್ಕೆ 6 ತಾಲೂಕುಗಳನ್ನು ಸೇರ್ಪಡೆ ಮಾಡಲಾಗುವುದು ಎಂದು ತಿಳಿಸಿದರು.
ವಿಜಯನಗರ ಜಿಲ್ಲೆಯಲ್ಲಿ ಹೊಸಪೇಟೆಯನ್ನು ಜಿಲ್ಲಾ ಕೇಂದ್ರವನ್ನಾಗಿ ಮಾಡಲಾಗುವುದು. ಹರಪ್ಪನಹಳ್ಳಿ, ಹೂವಿನ ಹಡಗಲಿ, ಕೂಡ್ಲಿಗಿ, ಕೊಟ್ಟೂರು, ಹಗರಿಬೊಮ್ಮನಹಳ್ಳಿಯನ್ನು ವಿಜಯನಗರ ಜಿಲ್ಲೆಗೆ ಸೇರ್ಪಡೆ ಮಾಡಲಾಗುವುದು ಎಂದು ವಿವರಿಸಿದರು.
ಈ ಹಿಂದೆ ಶಿವಮೊಗ್ಗ ವಿಮಾನ ನಿಲ್ದಾಣ ಅಭಿವೃದ್ಧಿಗೆ 220 ಕೋಟಿ ರೂ. ಅನುಮೋದನೆ ನೀಡಲಾಗಿತ್ತು. ಆದರೆ, ಆ ಮೊತ್ತವನ್ನು ಸಚಿವ ಸಂಪುಟದ ಅನುಮತಿ ಪಡೆದು ಹೆಚ್ಚಿಸಲಾಗಿದ್ದು, ಹೆಚ್ಚುವರಿಯಾಗಿ 164 ಕೋಟಿ ರೂ. ನೀಡುವ ಮೂಲಕ ಶಿವಮೊಗ್ಗ ವಿಮಾನ ನಿಲ್ದಾಣದ ಅಭಿವೃದ್ಧಿಗೆ ಒಟ್ಟು 384 ಕೋಟಿ ರೂ. ಪರಿಷ್ಕೃತ ಅಂದಾಜು ಮೊತ್ತಕ್ಕೆ ನೀಡಲು ಅನುಮೋದನೆ ನೀಡಲಾಗಿದೆ. ಈ ಮೂಲಕ ಮಲೆನಾಡಿಗರ ಬಹುಕಾಲದ ಬೇಡಿಕೆಯಾದ ವಿಮಾನ ನಿಲ್ದಾಣದ ಕಾಮಗಾರಿಯನ್ನು ಆರಂಭಿಸಲಾಗಿದೆ ಎಂದರು.
1994ರಲ್ಲಿ ಲಿಂಗಾಯತ ಸಮುದಾಯವನ್ನು ಓಬಿಸಿಗೆ ಸೇರಿಸಲು ಮನವಿ ಕೊಟ್ಟಿದ್ದರು. ಒಕ್ಕಲಿಗರಲ್ಲೂ ಕುಂಚಿಟಿಗ ಒಕ್ಕಲಿಗರು ಬಿಟ್ಟು ಹೋಗಿದ್ದಾರೆ. ಹೀಗಾಗಿ ಎಲ್ಲರನ್ನೂ ಸೇರಿಸಿ ಒಂದು ನಿರ್ಧಾರ ಕೈಗೊಳ್ಳಬೇಕಿದೆ. ಹೀಗಾಗಿ, ಆ ಬಗ್ಗೆ ಇವತ್ತು ಚರ್ಚಿಸುವುದು ಬೇಡ ಅಂತ ನಿರ್ಧಾರ ಮಾಡಿದ್ದೇವೆ. ಲಿಂಗಾಯತ 16 ಉಪಜಾತಿಗಳು ಈಗಾಗಲೇ ಒಬಿಸಿ ಅಡಿಯಲ್ಲಿ ಬಂದಿವೆ. ಕುಂಚಿಟಿಗರು ಚಿಕ್ಕನಾಯಕನಹಳ್ಳಿ ಭಾಗದಲ್ಲಿ ಮೇಜರ್ ಅವರನ್ನು ಒಬಿಸಿಗೆ ಸೇರಿಸಬೇಕು ಅಂತ ನಾನು ಹೇಳಿದೆ ಎಂದರು.
ಲಿಂಗಾಯತರು ಮತ್ತು ಒಕ್ಕಲಿಗರನ್ನು ಹಿಂದುಳಿದ ವರ್ಗಕ್ಕೆ ಮತ್ತು ಕುರುಬರನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವುದರಿಂದ ಕನ್ನಡಿಗರಿಗೆ ಕೇಂದ್ರದಿಂದ ಹೆಚ್ಚಿನ ಉದ್ಯೋಗ ಅವಕಾಶಗಳು ಸಿಕ್ಕುತ್ತವೆ. ಎಲ್ಲಕ್ಕಿಂತ ಮುಖ್ಯವಾಗಿ ವೈದ್ಯಕೀಯ ಮತ್ತು ಐಐಟಿಗಳಲ್ಲಿ ಕನ್ನಡದ ವಿದ್ಯಾರ್ಥಿಗಳಿಗೆ ಅವಕಾಶಗಳು ಹೆಚ್ಚು ಸೀಟುಗಳು ದೊರಕುತ್ತವೆ. ರೈಲ್ವೆ, ಬ್ಯಾಂಕ್ , ನಾಗರಿಕ ಸೇವೆಗಳು, ಅರಸೇನಾ ಸೇವೆಯಲ್ಲಿಯೂ ಕನ್ನಡಿಗರಿಗೆ ಅವಕಾಶಗಳು ಹೆಚ್ಚುತ್ತವೆ ಎಂದು ಮಾಧುಸ್ವಾಮಿ ಹೇಳಿದ್ದಾರೆ.
ಇನ್ನು ವೀರಶೈವ ಲಿಂಗಾಯಿತರನ್ನು ಓಬಿಸಿ ಪಟ್ಟಿಗೆ ಸೇರಿಸಲು ಶಿಫಾರಸು ಮಾಡುವುದಕ್ಕೂ, ಸಚಿವ ಸಂಪುಟ ವಿಸ್ತರಣೆ ವಿಷಯಕ್ಕೆ ಕೇಂದ್ರದ ಬಿಜೆಪಿ ವರಿಷ್ಠರು ವಿಳಂಬ ಮಾಡಿರುವುದಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಸಂಪುಟ ಸಭೆಯ ಬಳಿಕ ಮಾಧುಸ್ವಾಮಿ ಹೇಳಿದರು.